ಎಚ್.ಎಸ್.ದಿನೇಶ್ ಕುಮಾರ್
ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ
ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ ಶೌಚಾಲಯಗಳು ಈಗ ಹಳೆಯ ವಸ್ತುಗಳನ್ನು ಶೇಖರಿಸಿಡುವ ಗೋದಾಮುಗಳು! ಇದು ನಗರಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತಾಜಾ ಉದಾಹರಣೆ.
ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಉಪಯೋಗವಾಗಲಿ ಎಂಬ ಕಾರಣಕ್ಕಾಗಿ ನಗರದ ವಿವಿಧೆಡೆ ಪ್ರಮುಖ ರಸ್ತೆಗಳು ಹಾಗೂ ಉದ್ಯಾನವನಗಳ ಬಳಿ ಶೌಚಾಲಯಗಳನ್ನು ನಗರಪಾಲಿಕೆ ವತಿಯಿಂದ ನಿರ್ಮಾಣ ಮಾಡಲಾಗಿದೆ.
ಪ್ರತೀ ಶೌಚಾಲಯಕ್ಕೂ ಸುಮಾರು ೫ ಲಕ್ಷ ರೂ.ಗಳಿಂದ ೧೦ ಲಕ್ಷ ರೂ.ಗಳಷ್ಟು ಖರ್ಚು ಮಾಡಲಾಗಿದೆ. ನಂತರದ ದಿನಗಳಲ್ಲಿ ಕೆಲ ಶೌಚಾಲಯಗಳು ಆರಂಭವಾಗಲೇ ಇಲ್ಲ. ಕೆಲವು ಆರಂಭವಾದ ಮೂರು ಅಥವಾ ಆರು ತಿಂಗಳುಗಳಲ್ಲಿ ಬಂದ್ ಆಗಿವೆ. ಇದಕ್ಕೆ ಕಾರಣ ನಿರ್ವಹಣೆಯ ಕೊರತೆ. ಶೌಚಾಲಯಗಳಿಗೆ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದರೂ, ವಿದ್ಯುತ್ ಬಿಲ್ ಪಾವತಿಸದ ಕಾರಣ ಟ್ಯಾಂಕ್‌ಗೆ ನೀರನ್ನು ತುಂಬಿಸಲಾಗುತ್ತಿಲ್ಲ. ಹೀಗಾಗಿ ನೀರಿನ ವ್ಯವಸ್ಥೆ ಇಲ್ಲದೆ ಕೆಲ ಶೌಚಾಲಯಗಳು ಬಂದ್ ಆಗಿಹೋದವು.
ಇನ್ನು ಕೆಲವೆಡೆ ನೀರಿನ ವ್ಯವಸ್ಥೆ ಇದ್ದರೂ ಶೌಚಾಲಯಗಳ ನಿರ್ವಹಣೆಗೆ ಸಿಬ್ಬಂದಿ ನೇಮಿಸದಿರುವುದರಿಂದ ಅಥವಾ ಅವುಗಳನ್ನು ಗುತ್ತಿಗೆಗೆ ನೀಡದಿರುವುದರಿಂದ ಅಶುಚಿತ್ವವಾಗಿದ್ದು, ಸಾರ್ವಜನಿಕರು ಅಲ್ಲಿಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಖಾಲಿ ಬಿದ್ದ ಶೌಚಾಲಯಗಳನ್ನು ಅನ್ಯರು ಹಳೆಯ ವಸ್ತುಗಳನ್ನು ಶೇಖರಿಸಿಡಲು ಬಳಸುತ್ತಿರುವುದು ಕಂಡು ಬಂದಿದೆ. ಅದೂ ಅಧಿಕಾರಿಗಳ ಮೂಗಿನಡಿಯಲ್ಲಿಯೇ ಇಂತಹ ಕೃತ್ಯಗಳು ನಡೆಯುತ್ತಿವೆ.
ಉದಾಹರಣೆಗೆ ನಗರದ ಶ್ರೀರಾಂಪುರ ಬಳಿಯ ಭ್ರಮರಾಂಬ ಕಲ್ಯಾಣ ಮಂಟಪದ ಎದುರಿರುವ ಉದ್ಯಾನವನದಲ್ಲಿ ಅದಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿದೆ. ಅದು ಆರಂಭವಾಗುವ ಮುನ್ನವೇ ಮುಚ್ಚಿ ಹೋಯಿತು. ಇದರ ಬಾಗಿಲಿನ ಮೇಲೆ ಸೆಸ್ಕ್ ಸಿಬ್ಬಂದಿ ವಿದ್ಯುತ್ ಶುಲ್ಕ ಬಾಕಿಯ ಬಿಲ್ ಕೂಡ ಅಂಟಿಸಿ ಹೋಗಿದ್ದಾರೆ. ಈಗ ಅಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದಾನೆ. ಮಹಿಳೆಯರಿಗೆ ಮೀಸಲಾದ ಶೌಚಾಲಯದ ಕೊಠಡಿಯನ್ನು ಸ್ವಚ್ಛಗೊಳಿಸಿಕೊಂಡಿದ್ದಾನೆ.
ಅದನ್ನು ಆತ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡುವ ಗೋದಾಮು ಆಗಿ ಪರಿವರ್ತನೆ ಮಾಡಿಕೊಂಡಿದ್ದಾನೆ. ಹಳೆಯ ಚೀಲಗಳು, ರಟ್ಟಿನ ಬಾಕ್ಸ್‌ಗಳು, ಪ್ಲಾಸ್ಟಿಕ್ ವಸ್ತುಗಳು… ಹೀಗೆ ಗುಜರಿಗೆ ಮಾರಾಟ ಮಾಡಬಲ್ಲ ವಸ್ತುಗಳು ಅಲ್ಲಿ ತುಂಬಿವೆ. ಈ ಬಗ್ಗೆ ಆತನನ್ನು ಪ್ರಶ್ನಿಸಿದರೆ, ಈ ಶೌಚಾಲಯವನ್ನು ಯಾರೂ ಉಪಯೋಗಿಸುತ್ತಿಲ್ಲ. ಹೀಗಾಗಿ ಹಳೆಯ ವಸ್ತುಗಳನ್ನು ತುಂಬಿದ್ದೇನೆ ಎಂದು ಹೇಳುತ್ತಾನೆ. ಇದಕ್ಕೆ ಯಾರ ಅನುಮತಿ ಪಡೆದಿದ್ದೀರಿ ಎಂಬುದಕ್ಕೆ ಆತನ ಬಳಿ ಉತ್ತರವೇ ಇಲ್ಲ.
ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿಸುವ ಶೌಚಾಲಯಗಳು ಜನರಿಗೆ ಬಳಕೆಯಾಗುತ್ತಿಲ್ಲಎಂದರೆ ಇದರ ಹೊಣೆ ಯಾರು ಹೊರಬೇಕು? ಜನರ ತೆರಿಗೆ ಹಣವನ್ನು ಪೋಲು ಮಾಡುವ ಅಧಿಕಾರಿಗಳಿಗೆ ಅಂಕುಶ ಇಡುವವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
” ಈ ಸಂಬಂಧ ನನಗೆ ಯಾವುದೇ ಮಾಹಿತಿ ಇಲ್ಲ. ಶೌಚಾಲಯದಲ್ಲಿ ಅನುಪಯುಕ್ತ ವಸ್ತುಗಳನ್ನು ಶೇಖರಿಸುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
ಶೇಖ್ ತನ್ವೀರ್ ಆಸೀಫ್, ನಗರಪಾಲಿಕೆ ಆಯುಕ್ತರು
” ಪ್ರತೀ ಶೌಚಾಲಯಕ್ಕೂ ಸುಮಾರು ೫ ಲಕ್ಷ ರೂ.ಗಳಿಂದ ೧೦ ಲಕ್ಷ ರೂ.ಗಳಷ್ಟು ಖರ್ಚು ಮಾಡಲಾಗಿದೆ. ನಂತರದ ದಿನಗಳಲ್ಲಿ ಕೆಲ ಶೌಚಾಲಯಗಳು ಆರಂಭವಾಗಲೇ ಇಲ್ಲ. ಕೆಲವು ಆರಂಭವಾದ ಮೂರು ಅಥವಾ ಆರು ತಿಂಗಳುಗಳಲ್ಲಿ ಬಂದ್ ಆಗಿವೆ”



