ಬೆಂಗಳೂರು : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವು ಮಂಗಳವಾರ (ಜೂ.30) ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭವಾಗಲಿದೆ.
ಈ ಪ್ರಕ್ರಿಯೆಯು ನಾಳೆಯಿಂದ ಜುಲೈ 29 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ, ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ.
ಮತದಾರರು ಬಿಎಲ್‌ಒಗಳು ಮನೆಗೆ ಭೇಟಿ ನೀಡುವ ವೇಳೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅರ್ಜಿಯನ್ನು ಪೂರ್ಣಗೊಳಿಸಿದರೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿ ದಾಖಲಾಗಿ ಮತದಾನದ ಹಕ್ಕು ಮುಂದುವರಿಯಲಿದೆ. ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು, ಮೃತಪಟ್ಟಿರುವ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು ಅರ್ಹ ಹೊಸ ಮತದಾರರನ್ನು ಸೇರ್ಪಡೆ ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ರಾಜ್ಯದಲ್ಲಿ ಸುಮಾರು 5.55 ಕೋಟಿಗೂ ಅಧಿಕ ಮತದಾರರಿದ್ದು, ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುಮಾರು 58,050 ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬಿಎಲ್‌ಒಗಳು,ಎಸ್ ಐಆರ್ ಅರ್ಜಿಯನ್ನು ನೀಡಲಿದ್ದು, ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ. ಈ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆಗೆ ಸಹಕರಿಸಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ವಿನಂತಿಸಿದ್ದಾರೆ.
ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ. ಮನೆಗೆ ಬರುವ ಬಿಎಲ್‌ಒಗಳು ಎರಡು ಅರ್ಜಿಗಳನ್ನು (ಎನ್ಯುಮರೇಷನ್ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡ್ಬೇಕು. ಬಿಎಲ್‌ಒ ಕೂಡ ಆ ಎರಡು ಫಾರ್ಮ್‌ಗಳ ಮೇಲೆ ಸಹಿ ಮಾಡುತ್ತಾರೆ. ಒಂದನ್ನು ಸ್ವೀಕೃತಿ ಪ್ರತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿ ಅಧಿಕಾರಿಗಳ ಬಳಿ ಇರಲಿದೆ.
ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ನಿಖರಗೊಳಿಸುವುದು ಮತ್ತು ಪಾರದರ್ಶಕವಾದ ಮತದಾನ ಪ್ರಕ್ರಿಯೆಯನ್ನು ಖಾತ್ರಿಪಡಿಸುವುದು ಚುನಾವಣಾ ಆಯೋಗದ ಆಶಯವಾಗಿದೆ. ಚುನಾವಣಾ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ, ಅಗತ್ಯವಿರುವ ದಾಖಲೆಗಳೊಂದಿಗೆ ಸಹಕರಿಸುವಂತೆ ಚುನಾವಣಾ ಆಯೋಗವು ಮನವಿ ಮಾಡಿದೆ.
ಅಧಿಕಾರಿಗಳು ನೀಡುವ ಅರ್ಜಿಯನ್ನು ಭರ್ತಿ ಮಾಡಿ, ಭಾವಚಿತ್ರದೊಂದಿಗೆ ಸಹಿ ಹಾಕಿ ಸಲ್ಲಿಸುವುದು ಅವಶ್ಯಕ. ಮತದಾರರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವಿವರಗಳು ಪಟ್ಟಿಯಲ್ಲಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.




