ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿದಂತೆ ಕಾರಿನ ಚಾಲಕನೂ ಸೇರಿ ಐವರು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ(೫೨), ಅವರ ಮಗಳು ಪ್ರಿಯಾಂಕ(೨೮), ಹಾಗೂ ಶ್ವೇತಾ (೩೮), ಅವರ ಮಗಳು ಚೈತ್ರಾ (೨೦) ಹಾಗೂ ಬೆಂಗಳೂರಿನ ಕಾರಿನ ಚಾಲಕ ಮಹೇಶ್ (೩೦) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇವರು ಕಬ್ಬಾಳು ದೇವಸ್ಥಾನದಲ್ಲಿ ಬೀಗರ ಔತಣ ಕೂಟದ ನಿಮಿತ್ತ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ನಂತರ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನಾಲ್ವರು ಮಹಿಳೆಯರು ನದಿಗೆ ಬಿದ್ದಿದ್ದು, ನದಿಯ ವೇಗದ ಹರಿವು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವರನ್ನು ರಕ್ಷಿಸಲು ಮುಂದಾದ ಕಾರಿನ ಚಾಲಕ ಮಹೇಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗಿದ್ದ ಮೃತದೇಹಗಳನ್ನು ನುರಿತ ಈಜುಗಾರರ ಸಹಾಯದಿಂದ ರಾತ್ರಿ ಸುಮಾರು ೭ ಗಂಟೆಯ ವೇಳೆಗೆ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ.ಶೋಭರಾಣಿ, ಡಿವೈಎಸ್‌ಪಿ ಯಶವಂತ್ ಕುಮಾರ್ ಹಾಗೂ ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸಿಎಚ್‌ಸಿ ಗೋವರ್ಧನ್, ಮೋಹನ್ ಕುಮಾರ್, ಪ್ರಶಾಂತ್ ಕುಮಾರ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಗೀತಾ ಅಂಚಿನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




