ಬೆಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಸುಹೈಲ್ ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರವನ್ನು ಸ್ಫೋಟಿಸಲು ಸಂಚು ನಡೆಸಿದ್ದ ಎಂಬ ಅನುಮಾನಗಳು ಕಂಡು ಬಂದಿವೆ.
ಇತ್ತೀಚೆಗೆ ದಾವಣಗೆರೆ ಹಾಗೂ ತುಮಕೂರಿನಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಮೇರೆಗೆ ಹರಿಹರದ ಕಾರ್ಖಾನೆಯೊಂದರಲ್ಲಿ ಪೈಂಟರ್ ಕೆಲಸ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ, ಉತ್ತರಪ್ರದೇಶ ಮೂಲದ ಸುಹೈಲ್‍ನನ್ನು ಬಂಧಿಸಲಾಗಿದೆ.
ಕೇಂದ್ರ ಗುಪ್ತದಳದ ಅಧಿಕಾರಿಗಳು, ದಾವಣಗೆರೆ ಪೊಲೀಸರು ಮತ್ತು ಕ್ರೈಂ ಬ್ರ್ಯಾಂಚ್‍ನ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಶಂಕಿತನನ್ನು ಬಂಧಿಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ಆರೋಪಿಯನ್ನು ದಾವಣಗೆರೆ ಮತ್ತು ತುಮಕೂರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ.
ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಮಹತ್ವದ ಮಾಹಿತಿಗಳು ಪತ್ತೆಯಾಗಿವೆ. ಪಾಕಿಸ್ತಾನದ ಕಂಟ್ರಿಕೋಡ್‍ನಲ್ಲಿ ಇರುವ ಮೊಬೈಲ್ ಸಂಖ್ಯೆಯೊಂದು ರಾಣಾಬಾಯ್ ಹೆಸರಿನಲ್ಲಿ ಸೇವ್ ಆಗಿದೆ. ಜೊತೆಗೆ ದೇಶವಿರೋಧಿ ಚಟುವಟಿಕೆಗಳಿಗೆ ಕುಮಕ್ಕು ನೀಡುವ ಮೀಮೋನ್ ಮೈಂಡ್ ಜುಟ್ಟು-333, ರಾಣಾಬಾಯ್-333 ಎಂಬ ಕೆಲ ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿಯೂ ಸುಹೈಲ್ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯ ಮೊಬೈಲ್ ಗ್ಯಾಲರಿ ಪರಿಶೀಲನೆ ವೇಳೆ ಶಸ್ತ್ರಾಸ್ತ್ರ ತರಬೇತಿ ಪಡೆದ ವ್ಯಕ್ತಿಯ ಶೈಲಿಯಲ್ಲೇ ಆಯುಧಗಳನ್ನು ಹಿಡಿದು ಫೋಟೋ ತೆಗೆಸಿಕೊಂಡಿರುವುದು ಕಂಡು ಬಂದಿದೆ. ಅಯೋಧ್ಯೆ ರಾಮಮಂದಿರ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಆರೋಪಿಯು ಸಂಚು ನಡೆಸಿರುವುದು ವಿಚಾರಣೆಯ ವೇಳೆ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.




