ಬೆಂಗಳೂರು: ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಇದರಿಂದಾಗಿ ಸದ್ಯದಲ್ಲೇ ಬಸ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವುದು ಬಹುತೇಕ ಗ್ಯಾರಂಟಿ! ಬಸ್ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ, ವಾಯುವ್ಯ ಕರ್ನಾಟಕ, ಮತ್ತು ಬಿಎಂಟಿಸಿಯ ನಾಲ್ಕು ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಶಕ್ತಿ ಯೋಜನೆ, ಡಿಸೇಲ್ ದರ ಏರಿಕೆ, ನೌಕರರ ಸಂಬಳ ಹೆಚ್ಚಳ ಸೇರಿಂತೆ ಇತರೆ ಖರ್ಚುಗಳಿಂದ ಸಾರಿಗೆ ನಿಮಗಳಿಗೆ ಭಾರೀ ಹೊರೆಯಾಗುತ್ತಿದೆ. ಟಿಕೆಟ್ ದರ ಏರಿಕೆ ಮಾಡದಿದ್ದರೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವ ಕಾರಣ, ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಲಿದೆ ಎಂಬುದು ಅಧಿಕಾರಿಗಳ ಸಮರ್ಥನೆಯಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶೀಘ್ರದಲ್ಲೇ ಸಾರಿಗೆ ಸಚಿವರು, ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಸಾರಿಗೆ ಇಲಾಖೆಯ ಆಯುಕ್ತರು, ಕಾರ್ಯದರ್ಶಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಸಭೆ ಕರೆದು, ಚರ್ಚಿಸಿ ಸಾಧಕ ಬಾದಕಗಳನ್ನು ನೋಡಿಕೊಂಡು ಪ್ರಯಾಣಿಕರಿಗೆ ಹೊರೆಯಾಗದಂತೆ ದರ ಪರಿಷ್ಕರಣೆ ಮಾಡುವ ಸಂಭವವಿದೆ.




