Mysore
30
overcast clouds

Social Media

ಶನಿವಾರ, 20 ಜೂನ್ 2026
Light
Dark

ಜೂ.28ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ನವೀನ್ ಡಿಸೋಜ

ಮಡಿಕೇರಿ: ಜೂ.೨೮ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ೫ ವರ್ಷದವರೆಗಿನ ಒಟ್ಟು ೩೨,೭೦೨ ಮಕ್ಕಳಿದ್ದು, ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ.

ಜೂ.೨೮ರಿಂದ ಜು.೧ವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಜೂ.೨೮ ರಂದು ಬೆಳಿಗ್ಗೆ ೮ ರಿಂದ ಬೂತ್ ಮಟ್ಟದಲ್ಲಿ ಪೋಲಿಯೋ ಹನಿ ಹಾಕಲಾಗುತ್ತದೆ. ಈ ಸಂಬಂಧ ಅಗತ್ಯ ಸಿಬ್ಬಂದಿಗಳ ನಿಯೋಜನೆ, ವಾಹನ ನಿಯೋಜನೆ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಸ್ಥಿರವಾಸಿತ ವಲಸೆ ಮಕ್ಕಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂರು ದಿನ ಪೋಲಿಯೋ ಲಸಿಕೆ ಹಾಕಲಾಗುತ್ತದೆ.

ಜಿಲ್ಲೆಯಲ್ಲಿ ೫ ವರ್ಷದವರೆಗಿನ ಒಟ್ಟು ೩೨,೭೦೨ ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ ೩,೨೭೫, ಗ್ರಾಮೀಣ ಭಾಗದಲ್ಲಿ ೨೯,೪೨೭ ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೫,೬೫,೩೩೮ ಜನಸಂಖ್ಯೆ ಇದ್ದು, ನಗರ ವ್ಯಾಪ್ತಿಯಲ್ಲಿ ೫೫,೧೭೯, ಗ್ರಾಮೀಣ ಭಾಗದಲ್ಲಿ ೫,೧೦,೧೫೯ಜನ ಸಂಖ್ಯೆ ಇದೆ. ಇವರಲ್ಲಿ ವಲಸಿಗ ಮಕ್ಕಳ ಸಂಖ್ಯೆ ೪,೧೧೨ ಮತ್ತು ಸ್ಥಿರವಾಸಿತ ವಲಸೆ ಜನಸಂಖ್ಯೆಯು ೧೫,೭೮೮ ಸೇರಿ ಒಟ್ಟು ೧೯,೯೦೦ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ ಒಟ್ಟು ೧,೩೬,೨೧೪ ಮನೆಗಳಿದ್ದು, ಈ ಮನೆಗಳಲ್ಲಿರುವ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿ ಒಟ್ಟು ೪೭೦ ಬೂತ್‌ಗಳನ್ನು ಗುರುತಿಸಲಾಗಿದೆ. ೩೨ ಸಂಚಾರ ತಂಡ, ೧ ಮೊಬೈಲ್ ಸಂಚಾರ ತಂಡ ರಚಿಸಲಾಗಿದೆ.

ಮನೆ ಭೇಟಿ ನೀಡಲು ಒಟ್ಟು ೯೭೩ ತಂಡಗಳ ರಚನೆ: ಒಟ್ಟು ೧೯೪೬ ಲಸಿಕೆದಾರರನ್ನು ಗುರುತಿಸಲಾಗಿದ್ದು, ಮನೆ ಮನೆ ಭೇಟಿ ನೀಡಲು ಒಟ್ಟು ೯೭೩ ತಂಡಗಳನ್ನು ರಚಿಸಲಾಗಿದೆ. ಒಟ್ಟು ೮೫ ಮೇಲ್ವಿಚಾರಕರನ್ನು ಗುರುತಿಸಲಾಗಿದೆ. ಇವರುಗಳಿಗೆ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಿಂದ ತರಬೇತಿ ನೀಡಲಾಗಿದೆ.

ಜೂ.೨೬ ರಂದು ಜಾಥಾ: ಎಲ್ಲಾ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜೂ.೨೬ ರಂದು ಜಾಥಾ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಜಾಗೃತಿ ಜಾಥಾ ಏರ್ಪಡಿಸುವುದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವುದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಪಡೆಯುವಂತೆ ಮಾಹಿತಿ ನೀಡುವುದು. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಸ್ತ್ರೀ ಶಕ್ತಿ ಗುಂಪುಗಳ ಪದಾಧಿಕಾರಿಗಳು ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶೇಕಡಾವಾರು ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮನವಿ ಮಾಡಿದ್ದಾರೆ.

ಸಾರ್ವಜನಿಕರಲ್ಲಿ ಜಾಗೃತಿ: ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಮೂಲಕ ಸ್ಥಳೀಯ ನಗರ, ಪಟ್ಟಣ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಪಡೆಯುವಂತಾಗಲು ಜನ ಜಾಗೃತಿ ಮೂಡಿಸುವುದು, ತಮ್ಮ ವ್ಯಾಪ್ತಿಯಲ್ಲಿ ಬ್ಯಾನರ್ ಗಳನ್ನು ಬರೆಸಿ ಹಾಗೂ ಭಿತ್ತಿ ಪತ್ರಗಳನ್ನು ಮುದ್ರಿಸಿ ಪ್ರದರ್ಶಿಸುವುದು, ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ ವಾಹನಗಳನ್ನು ನಿಯೋಜನೆ ಮಾಡುವುದು, ಬಸ್ ನಿಲ್ದಾಣಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಪಡೆಯಲು ಅರಿವು ಮೂಡಿಸುವುದು, ಕಾರ್ಮಿಕ ಇಲಾಖೆ ಮೂಲಕ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಪಡೆಯುವಂತೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಲ್ಸ್ ಪೋಲಿಯೋ ಯಶಸ್ಸಿಗೆ ಕೈಜೋಡಿಸುವಂತೆ ವಿವಿಧ ಸಂಘ, ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಸ್ಥಳ ಹಾಗೂ ದಿನಾಂಕವನ್ನು ಕರಪತ್ರದಲ್ಲಿ ಮುದ್ರಿಸಿ ವಿತರಿಸುವುದು, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರಿಂದ ಪಲ್ಸ್ ಪೋಲಿಯೋ ಲಸಿಕೆ ಮಹತ್ವ ಕುರಿತು ಜಾಗೃತಿ ಮೂಡಿಸುವುದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರ ಘಟಕಕ್ಕೆ ಸ್ಥಳಾವಕಾಶ ನೀಡಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

” ಜೂ.೨೮ ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುಡ್ಡಗಾಡುಪ್ರದೇಶವಾಗಿರುವ ಜಿಲ್ಲೆಯಲ್ಲಿ ಎಲ್ಲಾ ಮಕ್ಕಳು ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಪಡೆಯುವಂತಾಗಲು ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಕೊಡಗು ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಸ್ಥಿರವಾಸಿತ ವಲಸೆ ಮಕ್ಕಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂರು ದಿನಗಳ ಕಾಲ ನಗರ, ಪಟ್ಟಣ ಪ್ರದೇಶ ಭೇಟಿ ನೀಡಿ ಪೋಲಿಯೋ ಹನಿ ನೀಡಲಾಗುತ್ತದೆ.”

-ಡಾ. ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

 

 

Tags:
error: Content is protected !!