Mysore
23
overcast clouds

Social Media

ಸೋಮವಾರ, 15 ಜೂನ್ 2026
Light
Dark

ಮೈಸೂರು | ಶಿಷ್ಯ ವೇತನಕ್ಕೆ ಒತ್ತಾಯಿಸಿ ಸಂಶೋಧಕರ ಅಹೋರಾತ್ರಿ ಧರಣಿ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪ್ರವೇಶಾತಿ ಪಡೆದ ಸಂಶೋಧಕರುಗಳಿಗೆ ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಒಳಗೂಡಿ ಮೈಸೂರು ವಿ.ವಿ ಸಂಶೋಧಕರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ನಗರದ ಕ್ರಾಫಡ್೯ ಹಾಲ್ ಬಳಿಯೇ ಸೋಮವಾರ ರಾತ್ರಿಯಿಂದಲೇ ಅಹೋರಾತ್ರಿ ಧರಣಿ ಕೈಗೊಂಡಿದ್ದು ಕೂಡಲೇ ಶಿಷ್ಯವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಧರಣಿ ನಿರತರು, 2026-2027ನೇ ಸಾಲಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡಲಾಗುವ ಶಿಷ್ಯವೇತನಕ್ಕೆ 2025 ಹಾಗೂ 2026 ನೇ ಸಾಲಿನ ಸಂಶೋಧಕರುಗಳು ಸೇರಿ ಒಟ್ಟು 96 ಅರ್ಜಿಗಳನ್ನು ಸಲ್ಲಿಸಿರುತ್ತೇವೆ. ಆದರೆ ಮೈಸೂರು ವಿಶ್ವವಿದ್ಯಾನಿಲಯವು ಕೇವಲ 20 ಸಂಶೋಧಕರುಗಳಿಗೆ ಮಾತ್ರ ಶಿಷ್ಯವೇತನ ಮಂಜೂರು ಮಾಡಿರುವುದು ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಶಿಷ್ಯವೇತನರಹಿತವಾಗಿ ಪಿಎಚ್.ಡಿ. ಪದವಿ ಪಡೆಯಲು ಹರಸಾಹಸ ಪಡುವಂತಾಗಿದೆ. ಮೈಸೂರು ವಿಶ್ವವಿದ್ಯಾನಿಲಯವು ಕಳೆದ ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಸಂಶೋಧಕರುಗಳಿಗೂ ಶಿಷ್ಯವೇತನ ಮಂಜೂರು ಮಾಡಿದೆ. ಆದರೆ ಈ ಬಾರಿ ಕುಂಟು ನೆಪ ಹೇಳಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಅದಾಗಿಯೂ, ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳಿಗೆ ವರ್ಷಕ್ಕೆ ರೂ. 23 ಕೋಟಿಗಳನ್ನು ಅನಾವಶ್ಯಕವಾಗಿ ನೀಡುತ್ತಿದ್ದು, ಇದು ವಿಶ್ವವಿದ್ಯಾನಿಲಯದ ಹಣ ಪೋಲಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಅದಲ್ಲದೆ, ಈ ವರ್ಷದ ವಿಶ್ವವಿದ್ಯಾನಿಲಯದ ಬಜೆಟ್‌ನ ಒಟ್ಟು ರೂ. 400 ಕೋಟಿಗಳಲ್ಲಿ ನಿಯಮಾನುಸಾರ 24% ಮೊತ್ತವನ್ನು ಎಸ್.ಸಿ./ಎಸ್.ಟಿ. ಉಪಯೋಜನೆಗಳಿಗೆ ಮೀಸಲಿಟ್ಟರೆ ಸರಿ ಸುಮಾರು ರೂ. 96 ರಿಂದ 97 ಕೋಟಿ ನೀಡಬೇಕಾಗುತ್ತದೆ. ಆದರೆ ವಿಶ್ವವಿದ್ಯಾನಿಲಯವು ಎಸ್.ಸಿ./ಎಸ್.ಟಿ. ಸಂಶೋಧನೆಗೆ ಯಾವುದೇ ರೀತಿಯ ಮೊತ್ತವನ್ನು ಮೀಸಲಿಡದೆ ವಂಚಿಸುತ್ತಿದೆ ಎಂದು ದೂರಿದರು.

ಈ ಹಿಂದೆ ಪ್ರತಿಭಟನೆಯನ್ನು ಮಾಡಿದಾಗ ಸ್ಥಳಕ್ಕೆ ಬಂದ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳು ಸೋಮವಾರ ನಿಮಗೆ ಆರ್ಡರ್ ಕಾಪಿ ನೀಡುತ್ತೇನೆ ಎಂದು ಮಾತು ಕೊಟ್ಟರು ಅದರಂತೆ ಜೂನ್ 1 ರ ಸೋಮವಾರ ಹೋಗಿ ಕುಲಪತಿಗಳನ್ನ ಭೇಟಿಯಾದಾಗ ಕುಲಪತಿಗಳು ಜೂನ್ 10ನೇ ತಾರೀಕಿನವರೆಗೆ ನನಗೆ ಸಮಯ ಕೊಡಿ ಅಲ್ಲಿಯವರೆಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದರು. ಅದರಂತೆ 15 ದಿನಗಳ ಕಾಲ ನಾವು ಸಮಯವನ್ನು ನೀಡಿ ಇಂದು ಬಂದು ಕೇಳಿದಾಗ ಕುಲಪತಿಗಳು ವಿದ್ಯಾರ್ಥಿಗಳ ನಡುವಿನ ಸೌಜನ್ಯಕ್ಕಾದರೂ ಮಾತನಾಡದೆ ಸಭೆ ನಡುವೆ ಎದ್ದು ಹೋಗಿ ಅವರ ದಲಿತ ವಿರೋಧಿ ನಡೆಯನ್ನ ತೋರಿಸಿದ್ದಾರೆ ಹಾಗಾಗಿ ನಾವುಗಳು ಕುಲಪತಿಗಳು ಬಂದು ನಮ್ಮ ಸಮಸ್ಯೆಯನ್ನು ಬಗೆಹರಿಸುವವರೆಗೂ ಈ ಸ್ಥಳದಿಂದ ಹೇಳುವುದಿಲ್ಲ ಎಂದು ಧರಣಿ ನಡೆಸುತ್ತಿದ್ದಾರೆ.

ಧರಣಿಯಲ್ಲಿ ಸಂಶೋಧಕರುಗಳಾದ, ನವೀನ್‌ ಕೋಳುರು, ರವಿಕುಮಾರ್, ಮೌನ, ದೀಪ, ನವೀನ್‌ ಅಳಗಂಜಿ, ಸಣ್ಣಮಾದು, ಸಿದ್ಧರಾಜು, ಧೀರಾಜ್‌, ಮಹೇಶ್‌, ಶಿವರಾಜು ದಸಂಸ ಜಿಲ್ಲಾ ಸಂಚಾಲ ಚೋರನಹಳ್ಳಿ, ಎಡದೊರೆ ಮಹದೇವಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು‌.

 

Tags:
error: Content is protected !!