Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಸೌಹಾರ್ದ ಸಮಾಜಕ್ಕಾಗಿ ಮಕ್ಕಳಲ್ಲಿ ಭಾವೈಕ್ಯತೆ ಬಿತ್ತನೆ ಅತ್ಯಗತ್ಯ

ಟಿ.ಕೆ.ಹರೀಶ್

ತಂತ್ರಜ್ಞಾನ ಬಳಕೆ ಅತಿಯಾದರೆ ಮಕ್ಕಳಲ್ಲಿ ಸಹಾನುಭೂತಿ ಕ್ಷೀಣ 

ಮಾನವೀಯತೆಯ ಮೂಲ ಮಂತ್ರವೇ ಸೌಹಾರ್ದತೆ. ಇದು ಕೇವಲ ಸಹಬಾಳ್ವೆಯಲ್ಲ, ಬದಲಿಗೆ ಭಿನ್ನತೆಗಳನ್ನು ಮೀರಿದ ಮಾನವೀಯ ಬಂಧ. ಜಾತಿ, ಧರ್ಮ, ಮತ್ತು ಭಾಷೆಯ ಗಡಿಗಳನ್ನು ಮೀರಿ, ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ಬಾಳಿದಾಗ ಮಾತ್ರ ಸುಂದರ ಸಮಾಜದ ನಿರ್ಮಾಣ ಸಾಧ್ಯ.

ಇಂದಿನ ಆಧುನಿಕ ಜಗತ್ತಿನಲ್ಲಿ ಜಾತಿ, ಧರ್ಮ ಮತ್ತು ಭಾಷೆಗಳ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಗುಣವನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕಲಿಸಬೇಕಾಗಿದೆ. ಹಿಂದಿನ ಕಾಲದಲ್ಲಿ ಇಂದಿನಂತೆ ಮೊಬೈಲ್ ಅಥವಾ ಟೆಲಿವಿಷನ್ ಸಂಸ್ಕ ತಿ ಇರಲಿಲ್ಲ. ಆಗಿನ ಜೀವನಶೈಲಿ ಮತ್ತು ಸಂಬಂಧಗಳು ಮಕ್ಕಳ ಮನಸ್ಸಿನಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ನೈಸರ್ಗಿಕವಾಗಿಯೇ ಬಿತ್ತುತ್ತಿದ್ದವು. ನನಗೆ ನೆನಪಿರುವಂತೆ ನನ್ನ ಅಜ್ಜಿ ಮನೆಯಲ್ಲಿ ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರದ ಕಥೆಗಳನ್ನು ಹೇಳುತ್ತಿದ್ದರು. ಈ ಕಥೆಗಳು ಧರ್ಮ, ನ್ಯಾಯ ಮತ್ತು ಎಲ್ಲರನ್ನೂ ಪ್ರೀತಿಸುವ ಮೌಲ್ಯಗಳನ್ನು ಕಲಿಸುತ್ತಿದ್ದವು ಹಾಗೂ ಇವು ಮಕ್ಕಳಲ್ಲಿ ದೇಶಭಕ್ತಿ ಮತ್ತು ಎಲ್ಲರನ್ನೂ ಗೌರವಿಸುವ ಗುಣವನ್ನು ಬೆಳೆಸುತ್ತಿದ್ದವು.

ಆಗಿನ ಸಮಾಜದಲ್ಲಿ ಮಕ್ಕಳು ಪರಸ್ಪರ ಬೆರೆಯಲು ಮತ್ತು ಎಲ್ಲರೂ ಒಂದೇ ಎಂಬ ಭಾವನೆ ಹೊಂದಲು ಪ್ರಕೃತಿ ಮತ್ತು ಹಿರಿಯರೇ ಮುಖ್ಯ ಮಾಧ್ಯಮವಾಗಿದ್ದರು. ನಾನು ತುರುವೇಕೆರೆಯಲ್ಲಿ ಸರ್ಕಾರಿ ಹೈಸ್ಕೂಲ್‌ನ ಮೈದಾನದಲ್ಲಿ ಸ್ನೇಹಿತರು ಮತ್ತು ಆಟಗಳ ಸಂಬಂಧದಿಂದ ಅಂದರೆ ಅಂದು ಕಣ್ಣಾಮುಚ್ಚಾಲೆ, ಕಬ್ಬಡ್ಡಿ, ಗಿಲ್ಲಿ-ದಾಂಡು ಮುಂತಾದ ದೇಸಿ ಆಟಗಳನ್ನು ಆಡುವಾಗ ಯಾರು ಶ್ರೀಮಂತ, ಯಾರು ಬಡವ ಎಂಬ ಭೇದಭಾವ ಇರುತ್ತಿರಲಿಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಯುತ್ತಿತ್ತು.

ಜೊತೆಗೆ ಊರಿನ ಜಾತ್ರೆ, ದಸರಾ, ಯುಗಾದಿ ಅಥವಾ ಉರುಸ್ ಹಬ್ಬಗಳಲ್ಲಿ ಮಕ್ಕಳೆಲ್ಲ ಒಟ್ಟಾಗಿ ಸೇರುತ್ತಿದ್ದರು. ಇದು ‘ನಾವೆಲ್ಲರೂ ಒಂದೇ’ ಎಂಬ ಸಾಮಾಜಿಕ ಐಕ್ಯತೆಯನ್ನು ಕಲಿಸುತ್ತಿತ್ತು. ಪಕ್ಕದ ಮನೆಯವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣವನ್ನು ಅಂದು ಮಕ್ಕಳಾದ ನಾವು ಹೆತ್ತವರನ್ನು ನೋಡಿ ಕಲಿಯುತ್ತಿದ್ದೆವು.

ಇಂದಿನ ಮಕ್ಕಳಲ್ಲಿ ಭಾವೈಕ್ಯತೆ ಇದೆ. ಆದರೆ ಇಂದಿನ ಬದಲಾದ ಪರಿಸರದಲ್ಲಿ ಅದನ್ನು ಇನ್ನೂ ಹೆಚ್ಚು ಬೆಳೆಸಬೇಕಾದ ಅಗತ್ಯವಿದೆ. ಮೊಬೈಲ್ ಮತ್ತು ತಂತ್ರಜ್ಞಾನದ ಬಳಕೆಯಿಂದಾಗಿ ಮಕ್ಕಳು ಸಮಾಜದಿಂದ ದೂರವಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಒಗ್ಗಟ್ಟಿನ ಪಾಠ ಹೇಳಿಕೊಡಬೇಕಿದೆ.

ಮಕ್ಕಳು ಫೋನ್ ಪರದೆಯಲ್ಲೇ ಮುಳುಗಿರುವುದರಿಂದ ಮೈದಾನದಲ್ಲಿ ಆಡುವ ಆಟಗಳ ಬದಲಿಗೆ ಮೊಬೈಲ್ ಗೇಮ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ದೈಹಿಕ ಶಕ್ತಿ ಮತ್ತು ಸ್ನೇಹಿತರ ಬಳಗ ಕಡಿಮೆಯಾಗುತ್ತಿದೆ. ಮೊಬೈಲ್ ಪರದೆಯ ಮೇಲೆ ಮಾತನಾಡುವಾಗ ಎದುರಿಗಿರುವವರ ಮುಖದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಸಹಾನುಭೂತಿ ಮತ್ತು ನಿಜವಾದ ಒಗ್ಗಟ್ಟಿನ ಕೊರತೆ ಎದುರಾಗುತ್ತದೆ. ತಂತ್ರಜ್ಞಾನವನ್ನು ಮಿತವಾಗಿ ಬಳಸಿದರೆ ಅದು ಮಕ್ಕಳಲ್ಲಿ ಉತ್ತಮ ಬಾಂಧವ್ಯ ಮತ್ತು ಒಗ್ಗಟ್ಟನ್ನು ಬೆಳೆಸಲು ನೆರವಾಗುತ್ತದೆ. ಆದರೆ ಅತಿಯಾದರೆ ಅದು ಮಕ್ಕಳನ್ನು ಒಂಟಿಯಾಗಿಸುತ್ತದೆ.

ಇದಕ್ಕೆ ಪರ್ಯಾಯವಾಗಿ ಶಾಲೆಗಳಲ್ಲಿ ಮಕ್ಕಳಲ್ಲಿ ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಜತೆಗೆ ಸಹಬಾಳ್ವೆ ಪರಂಪರೆಯ ತತ್ತ್ವಗಳನ್ನು ಬಿತ್ತಬೇಕಿದೆ. ಪ್ರತಿ ಧರ್ಮವೂ ತನ್ನದೇ ವಿಶೇಷತೆ ಹೊಂದಿದ್ದು, ಮಾನವೀಯ ಮೌಲ್ಯಗಳನ್ನೇ ಸಾರುತ್ತವೆ. ಹೀಗಾಗಿ ಮಕ್ಕಳಲ್ಲಿ ಸೂಕ್ತ ಪ್ರಜ್ಞೆ ಮೂಡಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಬೇಕಿದೆ.

ಶಾಲೆಗಳಲ್ಲಿ ಎಲ್ಲ ಧರ್ಮಗಳ ಪ್ರಮುಖ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಮೂಲಕ ಹಾಗೂ ಆಟದ ಮೈದಾನದಲ್ಲಿ ಮಕ್ಕಳು ಯಾವುದೇ ಭೇದಭಾವವಿಲ್ಲದೆ ಒಟ್ಟಾಗಿ ಬೆರೆಯಲು ಪ್ರೋತ್ಸಾಹಿಸುವ ಮೂಲಕ ಮತ್ತು ಎಲ್ಲ ಮನುಷ್ಯರನ್ನೂ ಸಮಾನವಾಗಿ ಗೌರವಿಸುವುದರ ಮೂಲಕ ನಾವು ಮಕ್ಕಳಲ್ಲಿ ವಿವಿಧತೆಯಲ್ಲಿ ಏಕತೆ ಭಾವನೆಯನ್ನು ಮೂಡಿಸಬಹುದು. ಮಕ್ಕಳು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯ ‘ವಾಟ್ಸಾಪ್ ಯೂನಿವರ್ಸಿಟಿ’ಗೆ ಇಂದು ಬಲಿಯಾಗದಂತೆ ತಡೆಯುವುದು ತುಂಬಾ ಮುಖ್ಯವಾಗಿದೆ.

ಮಕ್ಕಳೇ ಈ ದೇಶದ ಭವಿಷ್ಯದ ಪ್ರಜೆಗಳು. ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ನೆರಳಿನಲ್ಲಿ ಬೆಳೆಯುವ ಮಕ್ಕಳಿಗೆ ಪ್ರೀತಿ, ಕರುಣೆ ಮತ್ತು ಭಾವೈಕ್ಯತೆಯ ಪಾಠಗಳನ್ನು ಕಲಿಸೋಣ. ಈ ಮೂಲಕ ದ್ವೇಷ ಮುಕ್ತ, ಶಾಂತಿ ಮತ್ತು ಸೌಹಾರ್ದತೆಯ ಸುಂದರ ಸಮಾಜವನ್ನು ಕಟ್ಟೋಣ.

(ಲೇಖಕರು, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

” ಸ್ನೇಹಿತರ ಬಳಗ ಕಡಿಮೆಯಾಗುತ್ತಿದೆ ಮಕ್ಕಳು ಫೋನ್ ಪರದೆಯಲ್ಲೇ ಮುಳುಗಿರುವುದರಿಂದ ಮೈದಾನದಲ್ಲಿ ಆಡುವ ಆಟಗಳ ಬದಲಿಗೆ ಮೊಬೈಲ್ ಗೇಮ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ದೈಹಿಕ ಶಕ್ತಿ ಮತ್ತು ಸ್ನೇಹಿತರ ಬಳಗ ಕಡಿಮೆಯಾಗುತ್ತಿದೆ.”

 

 

Tags:
error: Content is protected !!