Mysore
27
overcast clouds

Social Media

ಶನಿವಾರ, 13 ಜೂನ್ 2026
Light
Dark

ಸಂಪಾದನೆ ಎಂಬ ಧರ್ಮ ಸಂಕಟಕ್ಕೆ ಸಿಲುಕಿ…

ದೇವನೂರ ಮಹಾದೇವ

‘ಹಾಡುಪಾಡು ರಾಮು’ ಎಂದೇ ಖ್ಯಾತರಾಗಿದ್ದ ಟಿ.ಎಸ್.ರಾಮಸ್ವಾಮಿಯವರು ನೆಲಗನ್ನಡಕ್ಕೆ ಅನುವಾದಿಸಿರುವ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯ ಲೋಕಾರ್ಪಣೆ ಶನಿವಾರ ಸಂಜೆ ನಾಲ್ಕೂವರೆ ಗಂಟೆಗೆ ಮೈಸೂರಿನ ರಂಗಾಯಣ ಆವರಣದ ವನರಂಗದಲ್ಲಿ ನೆರವೇರಲಿದೆ. ರಾಮು ಅವರ ಆಪ್ತ ಸ್ನೇಹಿತರಾಗಿದ್ದ ದೇವನೂರ ಮಹಾದೇವ ಈ ಕೃತಿಯನ್ನು ಸಂಪಾದಿಸಿದ್ದಾರೆ. ಅವರು ಬರೆದ ಸಂಪಾದಕನ ಮಾತುಗಳು ಇಲ್ಲಿವೆ.

ರಾಮು ಬಲ್ಲವರಿಗೆ ಗೊತ್ತು- ಅವನು ಮಾತಾಡಿದರೆ ಹೊರಡುವ ಶಬ್ದ ಅರ್ಧ ಅವನ ಗಂಟಲಲ್ಲೆ ಉಳಿದಿರುತ್ತದೆ, ಇನ್ನರ್ಧ ನಮಗೆ ಕೇಳಿಸುತ್ತದೆ. ಅವನ ಬರವಣಿಗೆಯ ಹಸ್ತಾಕ್ಷರಗಳೂ ಅಷ್ಟೆ. ಅರ್ಧ ತಿಳಿದಂತೂ ಇನ್ನರ್ಧ ತಿಳಿಯದಂತೂ ಇರುತ್ತವೆ. ಅವನ ಹಸ್ತಪ್ರತಿಯನ್ನು ಅವನೇ ಟೈಪ್ ಮಾಡಿದರೆ ಬಚಾವ್. ರಾಮು ತಾನು ಬರೆಯುತ್ತಿದ್ದ ಮಹಾಭಾರತದ ಆರಂಭದ ಒಂದಿಷ್ಟು ಬಿಟ್ಟು ಉಳಿಕೆ ಟೈಪ್ ಮಾಡಲಿಲ್ಲ. ರಾಮು ಇದ್ದಾಗಲೇ, ನಿರಂತರ ಹರಿಪ್ರಸಾದ್ ಒಂದಿಷ್ಟು ಟೈಪ್ ಮಾಡಿದ್ದರು.  ಎಲ್ಲವನ್ನೂ ಜೊತೆಗೂಡಿಸಿ ಹಸ್ತಪ್ರತಿಯೊಡನೆ ಓ.ಎಲ್. ನಾಗಭೂಷಣ್‌ರಿಗೆ ಒಪ್ಪಿಸಲಾಯಿತು. ಯಾಕೆಂದರೆ ಓ.ಎಲ್.ಎನ್. ಮತ್ತು ರಾಮು ಕಾಲೇಜ್ ದಿನಗಳಿಂದಲೂ ಒಡ ನಾಡಿದವರು. ಓ.ಎಲ್.ಎನ್. ಅವರಿಗೆ ರಾಮುವಿನ ಕಲಸಿಕೊಂಡ ಮಾತು ಮತ್ತು ಹಸ್ತಾಕ್ಷರಗಳನ್ನು ಅಂದಾಜಿಸುವ ಸಾಮರ್ಥ್ಯವಿತ್ತು. ಜೊತೆಗೆ ರಾಮು ಮಹಾಭಾರತ ಬರೆಯುವಾಗ ಇಬ್ಬರೂ ಪರಸ್ಪರ ಚರ್ಚಿಸುತ್ತಿದ್ದರೂ ಕೂಡ. ಈ ರೀತಿ ಇದ್ದುದರಿಂದಲೇ ಓಎಲ್‌ಎನ್‌ಕಂಪೋಸ್ ಮಾಡಿ ಒಂದು ಹಂತಕ್ಕೆ ತಂದರು.  ಇದಾಗದಿದ್ದರೆ ಈ ಹೊತ್ತಿಗೆ ಪ್ರಕಟವಾಗುತ್ತಿರಲಿಲ್ಲವೇನೊ. ಇದಾದ ಮೇಲೂ ಆಗ ಈಗ ಒಂದಿಷ್ಟು ಬರೆಯುತ್ತಲೇ ಇದ್ದ ರಾಮು, ತನ್ನ ದೇಹದ ನೋವಿಗೆ ತಾನೇ ಕಾಲದ ಕೈ ಹಿಡಿದನೇನೋ ಎಂಬಂತೆ ಕಾಲವಶನಾದ. ಈಗ ಪ್ರಕಟವಾಗುತ್ತಿರುವ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಗೆ ಕೈ ಕೊಟ್ಟು ಹೊರಟುಹೋದನು.

ಇಲ್ಲೊಂದು ನೆನಪು: ಈ ರಾಮು ಎಂಬುವವನು ತಾನು ಬರೆದಿದ್ದನ್ನು ಪ್ರಕಟಿಸುವ ಸಮಯ ಬಂದಾಗ ಬೇಡಾ ಬೇಡ ಅಂತ ನಖರಾ ಆಡುತ್ತಿದ್ದುದು ಲೋಕ ಪ್ರಸಿದ್ಧಿ! ರಾಮುವಿನ ಈ ಚಾಳಿ ಮೊದಲೇ ಗೊತ್ತಿದ್ದರಿಂದ, ಓಎಲ್‌ಎನ್ ಬಳಿ ಇದ್ದ ಸ್ಕ್ರಿಪ್ಟ್‌ನ್ನು ಗುಟ್ಟಾಗಿ ಕಬ್ಜ ಮಾಡಿಕೊಳ್ಳುವಂತೆ ಅಭಿರುಚಿಗೆ ತಿಳಿಸಿದೆ. ಆಮೇಲೆ ನಾನು ಮತ್ತು ಅಭಿರುಚಿ ಗಣೇಶ್ ಮಾತಾಡಿಕೊಂಡು ಒಂದಿನ ನಾನೇ ರಾಮು ಜೊತೆಗೆ ಮಾತು ತೆಗೆದೆ- ‘ಅಲ್ಲಪ್ಪಾ ಈಗ ಬರೀತಾ ಇದ್ದೀಯಲ್ಲಾ ಇದನ್ನು ಎಲ್ಲಿ ಪ್ರಕಟಿಸಬೇಕು ಅಂತ ಇದ್ದೀಯಾ?’ ಎಂದು ಕೇಳಿದೆ. ಅದಕ್ಕೆ ರಾಮು ‘ಅದನ್ನೇನು ಪ್ರಕಟಿಸುವುದು? ಯಾರು ಪ್ರಕಟಿಸುತ್ತಾರೆ?’ ಎಂದ.

ಅಭಿರುಚಿ ಗಣೇಶ್ ‘ನಿನ್ನ ಪಕ್ಕದಲ್ಲೆ ನಾನಿಲ್ಲವಾ ರಾಮಣ್ಣ?’ ಎಂದ. ಅದಕ್ಕೆ ಅವ ‘ವ್ಞೂ ನಿನ್ಗೆ ಕೊಟ್ಟುಬಿಡ್ತಾರೆ’ ಅಂದ. ‘ಏನ್ ಮಾತಾಡ್ತ ಇದ್ದೀಯಾ ನೀನು?’ ಎಂದು ಅವನ ಕಡೆ ಸುಡುಗಣ್ಣು ಬಿಟ್ಟೆ. ನನ್ನ ನೋಟಕ್ಕೆ ರಾಮು ವಿಚಲಿತನಾದ. ಆ ಊ ಅನ್ನುತ್ತ ಅಭಿರುಚಿಗೆ ‘ಆಯ್ತು, ಮೊದಲು ರಾಯಲ್ಟಿ ಅಡ್ವಾನ್ಸ್ ಕೊಡು. ಹತ್ತು ಸಾವಿರ ರೂಪಾಯಿ! ಈಗಲೇ, ಈಗಲೇ’ ಅಂತ ಸವಾಲು ಹಾಕಿದ. ಅಭಿರುಚಿ ಹುಸಿನಗುತ್ತ ಜೇಬಿಂದ ಹತ್ತು ಸಾವಿರ ರೂ. ತೆಗೆದು ಮುಂದಿಟ್ಟ. ರಾಮುಗೆ ಏನೂ ಮಾಡಲು ತೋಚದೆ ಕಕ್ಕಾಬಿಕ್ಕಿಯಾಗಿ ನಮ್ಮನ್ನು ನೋಡುತ್ತ ಕಣ್ಣು ಬಾಯಿ ಬಿಡುತ್ತ ಪೆಕರನಂತೆ ಕಾಣುತ್ತಿದ್ದ. ಆನೆ ಖೆಡ್ಡಕ್ಕೆ ಬಿದ್ದಿತ್ತು. ಆತನ ಬಳಿ ಇದ್ದ ಹಸ್ತಪ್ರತಿಗಳು, ಕಂಪೋಸ್ ಮಾಡಿದ್ದ ಪ್ರತಿಗಳನ್ನು ಅಭಿರುಚಿ ವಶಪಡಿಸಿಕೊಂಡನು. ಕಂಪೋಸ್ ಮಾಡದೇ ಇದ್ದ ಹಸ್ತಪ್ರತಿಗಳನ್ನು ಅಭಿರುಚಿ ಪ್ರಕಾಶನದ ಲಕ್ಷ್ಮಿಯವರು ಸಂಪೂರ್ಣಗೊಳಿಸಿದರು.

ಇಷ್ಟಾದ ಮೇಲೆ ಎಲ್ಲವನ್ನೂ ಮುಂದಿಟ್ಟುಕೊಂಡು ಒಂದ್ಸಲ ಕಣ್ಣಾಡಿಸಿದೆ. ಇದನ್ನು ಎಡಿಟ್ ಮಾಡುವುದಕ್ಕೆ ಸಂಸ್ಕ ತ-ಕನ್ನಡ ಎರಡರಲ್ಲೂ ಪಾಂಡಿತ್ಯ ಇರುವ ಸಮದರ್ಶಿಯಾದವರು ಬೇಕಾಗಿತ್ತು. ಒಬ್ಬರುಕಣ್ಮುಂದೆ ಬಂದರು. ಅವರಿಗೆ ಸಂಸ್ಕೃತ-ಕನ್ನಡದಲ್ಲಿ ಪಾಂಡಿತ್ಯವಿತ್ತು. ಮಹಾಭಾರತದ ಒಳಹೊಕ್ಕಿ ಬಂದಿದ್ದರು. ಸ್ವತಃ ಬರಹಗಾರರೂ ಆಗಿದ್ದರು. ಅವರಿಗೆ ಎಡಿಟ್ ಮಾಡಲು ವಿನಂತಿಸಿ ಕಳಿಸಿಕೊಟ್ಟೆ. ಕೆಲವು ದಿನಗಳಾದ ಮೇಲೆ ಕಳಿಸಿದ್ದ ಸ್ಥಿತಿಯಲ್ಲೆ ಹಸ್ತಪ್ರತಿ ಹಿಂದಕ್ಕೆ ಬಂತು. ಇದನ್ನು ಅರ್ಥ ಮಾಡಿಕೊಳ್ಳಬಹುದಿತ್ತು, ಯಾಕೆಂದರೆ ಗೊಂದಲ, ಗೋಜಲುಗಳನ್ನು ಒಂದು ಹದಕ್ಕೆ ತಂದು ಎಡಿಟ್ ಮಾಡಲು ಅದು ತಿಂಗಳಾನುಗಟ್ಟಲೆ ಕಾಲ ಬೇಡುತ್ತಿತ್ತು. ಬೇರೊಬ್ಬರು ಕಾಣಲಿಲ್ಲ. ಇದನ್ನು ಅನಾಥವಾಗಿ ಬಿಡುವುದಕ್ಕೂ ಕಷ್ಟವಾಗುತ್ತಿತ್ತು. ಆಗ ನಾನು ನಿರ್ಧರಿಸಿದೆ, ಈಜು ಬಾರದ ನಾನು ಎಡಿಟ್ ಮಾಡುವ ಧರ್ಮಸಂಕಟದ ಕೊಳಕ್ಕೆ ಮುಳುಗಿದೆ. ಮೊದಲು ಎಲ್ಲವನ್ನೂ ಸುಮ್ಮನೆ ಗಮನಿಸಿದೆ. ಆಮೇಲೆ, ಹಸ್ತಪ್ರತಿಗೂ ಟೈಪ್ ಮಾಡಿದ ಪ್ರತಿಗೂ ಹೋಲಿಸುತ್ತ ವ್ಯತ್ಯಾಸವಿದ್ದುದನ್ನು ತಿದ್ದುತ್ತಾ ಹೋದೆ. ಮಹಾಭಾರತದ ಕಾಲಾನುಕ್ರಮಕ್ಕೆ ತಕ್ಕಂತೆ ಇಲ್ಲಿರುವ ಪ್ರಸಂಗಗಳನ್ನು ಸ.ಉಷಾ ಅವರಿಂದ ತಿಳಿದು ಜೋಡಿಸಿಕೊಂಡೆ. ಅವರಿಂದಲೇ ಆರೇಳು ಪದಗಳಿಗೆ ಅರ್ಥವನ್ನೂ ತಿಳಿದುಕೊಂಡೆ. ಎಲ್ಲೆಲ್ಲೋ ಚೆಲ್ಲಾಪಿಲ್ಲಿ ಆಗಿದ್ದವುಗಳನ್ನು ಪ್ರಸಂಗಗಳಿಗೆ ತಕ್ಕಂತೆ ಕೂಡಿಸಿಕೊಂಡೆ. ಇಷ್ಟಾಗುವ ಹೊತ್ತಿಗೆ ಸುಮಾರು ದಿನಗಳೇ ಆದವು.

ಯಾವಾಗ, ಈ ಹೊತ್ತಿಗೆಗೆ ‘ಮಹಾಭಾರತದೊಳಗಿಂದ ಒಂದಿಷ್ಟು’ ಎಂದು ಹೆಸರು ಇಟ್ಟೇನೊ ಹಾಗೂ ಇಲ್ಲಿನ ಎಲ್ಲಾ ಪ್ರಸಂಗಗಳಿಗೂ ತಲೆಬರೆಹ ಕೊಟ್ಟೆನೊ ಆಗ ಇದಕ್ಕೊಂದು ಆಕಾರ ಬಂತು ಎಂದು ಅನ್ನಿಸಿತು. ಈ ಕೃತಿಯ ರಾಮು ಭಾಷೆಗೆ ‘ನೆಲಗನ್ನಡ’ ಎಂದು ಹೆಸರು ಕೊಟ್ಟೆ. ಈ ನೆಲಗನ್ನಡ ನನ್ನ ಮನಸ್ಸಿನಲ್ಲಿ ಕೂತು ಎಡಿಟ್ ಮಾಡುವಾಗ ತಕ್ಕ ಪದ, ಲಯಗಳ ಸುಳಿವುಕೊಡತೊಡಗಿತು. ಈ ಹಂತದಲ್ಲಿ, ರೂಪ ಹಾಸನ ಅವರು ಅಕ್ಷರ ದೋಷಗಳಿಗೆ ಕಂಡಲ್ಲಿ ಗುಂಡಿಟ್ಟು ಸರಿಮಾಡಿದರು, ಒಂದೆರಡು ತಲೆಬರಹಗಳಿಗೂ ಸಲಹೆ ನೀಡಿದರು.

ಈ ಹಿಂದೆ, ರಾಮು ಇದನ್ನು ಬರೆಯುತ್ತಿರುವಾಗಲೇ ‘ಇದನ್ನು ನೀನೇ ಎಡಿಟ್ ಮಾಡಬೇಕು’ ಎಂದು ಹೇಳಿದ್ದ. ಅವನು ಸುಮ್ಮನೆ ಹೇಳುತ್ತಿದ್ದಾನೆ ಅಂದುಕೊಂಡು ‘ಎಸ್ ಬಾಸ್’ ಎಂದಿದ್ದೆ. ಅವನ ಮಾತನ್ನು ಈಗ ನಾನೇನಂಬಿಕೊಂಡು ಎಡಿಟ್ ಮಾಡಲು ಅಂತರಂಗದಲ್ಲಿ ಮಾನವೀಯವಾಗೂ, ಬಹಿರಂಗದಲ್ಲಿ ಕಠೋರವಾಗೂ ಇರುವ ನುರಿತ ಸರ್ಜನ್‌ನಂತೆ ಪೆನ್ನಸ್ತ್ರ ಹಿಡಿದೆ. ಪುನರುಕ್ತಿ, ಸಡಿಲ ಬಂಧ, ಔಚಿತ್ಯ ಇಲ್ಲದವು, ವಾಚಾಳಿಯಾದವುಗಳು ಇತ್ಯಾದಿ ಗುರುತಿಸುತ್ತಾ ನಂತರ ಅವುಗಳನ್ನು ಹೊರಹಾಕಿ ಹೀಗೆ ಒಂದು ಸ್ಥೂಲ ಪ್ರತಿತಯಾರಾಯಿತು.

ಇದಾದ ಮೇಲೆ ರಾಮು ಆಧಾರ ಮಾಡಿಕೊಂಡ ಗ್ರಂಥಗಳಲ್ಲಿ ಡಾ.ಎ.ಆರ್.ಕೃಷ್ಣಶಾಸ್ತ್ರಿಯವರ ವಚನ ಭಾರತ ವನ್ನು ಪೂರ್ತ ಓದಿದೆ. ಅಳಸಿಂಗರಾಚಾರ‍್ಯರ ಮಹಾ ಭಾರತ ಹಾಗೂ ಬ್ಯುಟೆನಿನ್‌ನ ಇಂಗ್ಲಿಷ್ ಆವೃತ್ತಿಯಲ್ಲಿ ರಾಮು ಯಾವ್ಯಾವ ಪ್ರಸಂಗಗಳನ್ನು ತನ್ನ ಪಠ್ಯಕ್ಕೆ ಅಳವಡಿಸಿಕೊಂಡಿದ್ದಾನೊ ಅವುಗಳನ್ನು ಆಯ್ದುಕೊಂಡು ಓದಿದೆ. ನನಗೊಂದು ಹಿನ್ನೆಲೆ ಬಂದಂತಾಯ್ತು! ಈ ಹಂತದಲ್ಲಿ ಅಗತ್ಯವಿದ್ದ ಪುಸ್ತಕಗಳನ್ನು ಎಸ್.ತುಕಾರಾಂ ನೀಡಿದರೆ, ಅಲ್ಲಿಂದ ಅವಶ್ಯ ಚಾಪ್ಟರ್‌ಗಳ ಫೋಟೋ ತೆಗೆದು ಜೋಡಿಸಿಕೊಡುವಲ್ಲಿ ಹಾಗೂ ಅಲ್ಲಲ್ಲಿ ಅಕ್ಷರ ದೋಷ, ಪದಗಳ ಅರ್ಥ ತಿಳಿಸಿ ಶ್ರೀನಿವಾಸ ಶೆಟ್ಟಿ ವೀರನಹೊಸಹಳ್ಳಿ ಸಹಕರಿಸಿದರು.

ಮುಂದೆ ಸರ್ಜರಿ! ತೆಗೆಯುವುದು ಜೋಡಿಸುವುದು. ಉದಾಹರಣೆಗೆ- ‘ಕುಂತಿ ಒಳಕ್ಕೆ ಬಂದಳು- ಸತ್ತವರ ಹತ್ತಿರ ಅಮೃತ ಬಂದ ಹಾಗೆ’ ಪ್ರಸಂಗದಲ್ಲಿ ಹಾಗೂ ‘ಶಲ್ಯನಿಗೆ ಕರ್ಣ ಹಿಗ್ಗಾಮುಗ್ಗಾ ಹೀಯಾಳಿಕೆ’ ಪ್ರಸಂಗದಲ್ಲೂ ಸಿಕ್ಕಾಪಟ್ಟೆ ತೆಗೆದು ಹೊರಹಾಕಿದೆ. ಸ್ವರ್ಗಾರೋಹಣ ಪರ್ವದಲ್ಲಿ ‘ಇದು ಬದುಕಿದೆ, ಬಿಡಲೊಲ್ಲೆ’ ಎಂಬಲ್ಲಿಗೆ ಮುಕ್ತಾಯ ಮಾಡಿದೆ. ರಾಮು ಇನ್ನೂ ಒಂದಿಷ್ಟುಬರೆದಿದ್ದನು. ಹೀಗೆಯೇ ಬಹುಶಃ ಎಲ್ಲಾ ಪ್ರಸಂಗಗಳಲ್ಲೂ ಕನಿಷ್ಠ ಶೇಕಡಾ ೧೦ರಷ್ಟಾದರೂ ತೆಗೆದು ಹಾಕಿರಬಹುದು. ಆಗ, ರಾಮು ‘ನೀನೇ ಎಡಿಟ್ ಮಾಡಬೇಕು’ ಎಂದು ಸುಮ್ಮನೆ ಹೇಳಿದ್ದಿರಬಹುದಾದರೂ ಅದನ್ನು ಈಗ ನಾನು ಚಾಚೂತಪ್ಪದೆ ನಂಬಿ ಸಂಪೂರ್ಣ ಸ್ವಾತಂತ್ರ್ಯ ತೆಗೆದುಕೊಂಡು ಬಿಟ್ಟಿದ್ದೆ! ಬಹುಶಃ ೬ನೆಯ ತಿದ್ದುಪಡಿ ಪ್ರತಿ ಇರಬೇಕು, ಅದನ್ನು ಲಕ್ಷಿ ಶ ತೋಳ್ಪಾಡಿಯವರ ಗಮನಕ್ಕೆ ಕಳಿಸಿಕೊಟ್ಟೆ.

ಇದಾದ ಮೇಲೂ ಔಚಿತ್ಯಕ್ಕೆ ತಕ್ಕಂತೆ ಲಯ ನೋಡಿ, ಧ್ವನಿ ನೋಡಿ ಪದ, ವಾಕ್ಯ, ಬದಲಿಸುವುದು, ಹಿಂದು ಮುಂದು ಮಾಡುವುದು ನಿತ್ಯಕ್ರಿಯೆಯಾಗಿತ್ತು. ಹೀಗೆಲ್ಲಾ ಆಗುತ್ತ, ಶಲ್ಯನಿಗೆ ಕರ್ಣ ಹಿಗ್ಗಾಮುಗ್ಗಾ ಹೀಯಾಳಿಸುವ ಪ್ರಸಂಗವು ನನಗೆ ನುಂಗಲಾರದ ತುತ್ತಾಗಿತ್ತು. ಗಂಟಲಲ್ಲಿ ವಿಷವಿಟ್ಟುಕೊಂಡವನಂತೆ ಇದ್ದೆ. ಆ ಹೀಯಾಳಿಕೆ ಪ್ರಸಂಗದಲ್ಲಿ ಹೀಗೆ ಬರುತ್ತದೆ: ‘ಮಾದ್ರಕರು, ಸಿಂಧು, ಸೌಮೀರರು, ಗಾಂಧಾರರು ಬಾಹ್ಲಿಕರು, ಮ್ಲೇಚ್ಛರು. ಇವರಿಗೆ ದಾಸ ಮೀಯರು ಅಂತಾರೆ… ಅಲ್ಲಿ ಬ್ರಾಹ್ಮಣ ಆಗಿದ್ದೋನು ಕ್ಷತ್ರಿಯ ಆಗಿಬಿಡತ್ತಾನೆ, ವೈಶ್ಯ ಆಗತಾನೆ, ಶೂದ್ರನೂ ಆಗಿ ಬಿಡತಾನೆ, ಅವನೇ ಚವರದವನೂ ಆಗಿಬಿಡತಾನೆ. ಅವನೇ ಮತ್ತೆ ಬ್ರಾಹ್ಮಣ ಆಗತಾನೆ. ದ್ವಿಜ ಆಗಿದ್ದವನು ಅದೇ ಊರಲ್ಲೆ ದಾಸ ಆಗಿಬಿಡತಾನೆ’ ಎಂದು ಶಲ್ಯನಿಗೆ ಕರ್ಣ ಹೀಯಾಳಿಸುತ್ತಾನೆ. ಅರೆ, ಇದೇ ಅಲ್ಲವೆ ಗೀತೆಯಲ್ಲಿ ‘ಗುಣಕರ್ಮ ವಿಭಾಗಶಃ’ ಎಂದು ಒಂದು ಕಾಲದಲ್ಲಿ ಗುಣಕರ್ಮಕ್ಕೆ ತಕ್ಕಂತೆ ಚಲನೆಯಲ್ಲಿದ್ದರಬಹುದಾದ ವರ್ಣ ಪದ್ಧತಿ! ಚಲನೆಯಲ್ಲಿದ್ದ ವರ್ಣ ಪದ್ಧತಿಯನ್ನು ಹುಟ್ಟಿಗೆ ಥಳಕು ಹಾಕಿ ಸ್ಥಗಿತಗೊಳಿಸಿ ಜಾತಿಗೆ ಗಂಟು ಹಾಕುವ ಹುನ್ನಾರ ಈ ಪ್ರಸಂಗದಲ್ಲಿ ನಡೆದಿದೆ. ಇದಲ್ಲದೆ, ಬಾಹ್ಲೀಕ ದೇಶಗಳ ಹೆಂಗಸರನ್ನು ಕರ್ಣನ ಪಾತ್ರವು ಹೀಯಾಳಿಸುತ್ತ ಅಲ್ಲಿನ ಹೆಂಗಸರ ನಡೆ, ನುಡಿ, ಹಾವ-ಭಾವ, ತಿನ್ನುವ ಆಹಾರ, ಕುಡಿಯುವ ಪಾನೀಯ, ಮೈಥುನ ಎಲ್ಲವನ್ನು ಲೇವಡಿ ಮಾಡುವುದಂತು ಅಸಹ್ಯದ ತುಟ್ಟತುದಿಗೇರುತ್ತದೆ. ಚಲನೆ ಇಲ್ಲದ ಜಾತಿಗಂಟಿದ ಚಾತುರ‍್ವರ್ಣ ಮತ್ತು ಪಿತೃಪ್ರಧಾನ ಸಮಾಜವನ್ನು ಸಮರ್ಥಿಸುವ ಹಾಗೂ ಕಿಂಚಿತ್ತೂ ಕಾವ್ಯಂಶ ಇಲ್ಲದ ಈ ಜಾಳು ಪ್ರಸಂಗವನ್ನು ಡಾ.ಎ.ಆರ್.ಕೃಷ್ಣಶಾಸ್ತ್ರಿಯವರು ಹತ್ತನ್ನೆರಡು ಸಾಲಲ್ಲೆ ಮುಗಿಸಿದರೆ, ಅಳಸಿಂಗರಾಚಾರ‍್ಯರು ಪುಟಗಟ್ಟಲೆ ತನ್ಮಯರಾಗಿ ಬರೆಯುತ್ತಾರೆ. ರಾಮು ಕೂಡ ಅನುಸರಿಸುತ್ತಾನೆ! ನನಗೆ ಜುಗುಪ್ಸೆಯಾಗಿ ಸಹಿಸಲಾಗದೆ ಆ ಪ್ರಸಂಗವನ್ನೆ ಕೈ ಬಿಟ್ಟೆ.

ಈ ಕರ್ಣನ ಹೀಯಾಳಿಕೆಯ ಪ್ರಸಂಗವು ಸತ್ಯವಾಕ್ ಎಂದು ಹೆಸರಾದ ವ್ಯಾಸನ ರಚನೆಯೇ ಇದು? ಭಾರತದಲ್ಲಿ ಎಲ್ಲವೂ ಸಾಧ್ಯ! ಹುಟ್ಟಿನಿಂದ ಶೂದ್ರನಾದ ಮಹಾನ್ ಕವಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಶೂದ್ರ ತಪಸ್ಸು ಮಾಡುತ್ತಿದ್ದ ಕಾರಣಕ್ಕಾಗಿ ರಾಮನಿಂದಲೇ ಕೊಲ್ಲಿಸಿರುವಾಗ, ವರ್ಣಸಂಕರದ ಪಿತಾಮಹ ಕೃಷ್ಣ ಪರಮಾತ್ಮನ ಬಾಯಲ್ಲೆ ‘ವರ್ಣ ಸಂಕರ ನರಕಪ್ರಾಪ್ತಿಃ’ ಎನ್ನಿಸಿರುವಾಗ ಇದೂ ಹಾಗೇನೆ. ಭಾರತದಲ್ಲಿ ನುಸುಳುಕೋರ ಪ್ರಕ್ಷಿಪ್ತಗಳೇ ಆಳ್ವಿಕೆ ನಡೆಸುತ್ತಿವೆ. ಈಗಲೂ. ಇಂಥಕಡೆ ನಾವು ‘ಶೂದ್ರ ತಪಸ್ವಿ’ ರಚಿಸಿದ ಮಹಾಕವಿ ಕುವೆಂಪು ಅವರ ಸೃಷ್ಟಾ ತ್ಮಕ ಕಣ್ಣು ಪಡೆಯಬೇಕಾಗಿದೆ.

ಆದರೆ ನಾನು, ಸ್ವಾತಂತ್ರ್ಯ ತೆಗೆದುಕೊಂಡೆ ಅಂದುಕೊಂಡು ಒಂದು ಚಾಪ್ಟರ್

ತೆಗೆದು ಹಾಕಿ ಸ್ವೇಚ್ಛೆಯಾಗಿ ವರ್ತಿಸಿದೆನೇನೊ ಎಂದುಕೊಳ್ಳುತ್ತಿರುವಾಗಲೇ ಲಕ್ಷಿ ಶ ತೋಳ್ಪಾಡಿಯವರ ಒಂದು ಪತ್ರ ಹಾಗೂ ಅವರ ಸಲಹೆ ಸೂಚನೆಗಳ ತಿದ್ದುಪಡಿ ಪ್ರತಿ ಬಂತು. ಅವರು ಸಂಪೂರ್ಣವಾಗಿ ಪರಿಶೀಲನೆ ಮಾಡಿರುವುದು ಎದ್ದು ಕಾಣುತ್ತಿತ್ತು. ಅವರು ತಮ್ಮ ಪತ್ರದಲ್ಲಿ- ‘ಕರ್ಣ-ಶಲ್ಯರ ಸಂವಾದ ಇಷ್ಟು ದೀರ್ಘ ಬೇಕೆ? ಅದು ಉಪಾಲಂಭ- ಅಂದರೆ ಪರಸ್ಪರ ಮೂದಲಿಸುವ ಮಾತುಗಳು!’ ಎಂದು ಬರೆದಿದ್ದರು. ನನ್ನೊಳಗೆ ಸುಳಿದಾಡುತ್ತಿದ್ದ ಸ್ವಾತಂತ್ರ್ಯ-ಸ್ವೇಚ್ಛೆ ಸಮಸ್ಯೆ ಎಷ್ಟೊ ಬಗೆಹರಿಯಿತು. ಜೊತೆಗೆ, ‘ನಿಮ್ಮ ಸಂವೇದನೆಯ ಬಗ್ಗೆ ನನಗೆ ಖಾತ್ರಿ ಇದೆ. ನನಗಿಂತಲೂ ಹೆಚ್ಚು. ನೀವು ಎಡಿಟ್ ಮಾಡಿದ್ದು ನೋಡಿದಾಗ ಈ ಅಂಶ ಸ್ಪಷ್ಟವಾಗುತ್ತದೆ’ ಎಂದೂ ಬರೆದಿದ್ದರು. ಎಡಿಟಿಂಗ್‌ನಲ್ಲಿ ಉದಯೋನ್ಮುಖನಾದ ನಾನು ಪಾಸ್ ಆದೆ ಅನ್ನಿಸಿತು. ತೋಳ್ಪಾಡಿಯವರು ಪಠ್ಯದೊಳಗೆ ಅಲ್ಲಲ್ಲಿ ಬದಲಾವಣೆಗಳ ಸೂಚನೆ ನೀಡಿದ್ದರು. ಟಿಪ್ಪಣಿಗಳಲ್ಲೂ ಇದ್ದ ತಪ್ಪುಗಳನ್ನು ತಿದ್ದುಪಡಿ ಮಾಡಿದ್ದರು. ಜೊತೆಗೆ ಪೂರಕವಾಗಿ ಅವಶ್ಯವಿದ್ದ ಮಾಹಿತಿಗಳನ್ನು ಬರೆದು ತಿಳಿಸಿದ್ದಾರೆ. ಇವೆಲ್ಲವನ್ನೂ ಬಹುತೇಕ ಅಳವಡಿಸಿಕೊಂಡು ಮುದ್ರಣಕ್ಕೆ ಪ್ರತಿ ಸಿದ್ಧಪಡಿಸಿದೆ.

ಈ ಹಿಂದೆ ಅವರಿಗೆ ಎಡಿಟ್ ಮಾಡಲು ವಿನಂತಿಸಿ ಕಳಿಸಿದ್ದಾಗ ಹಿಂತಿರುಗಿಸಿದ್ದರು, ನಿಜ, ಆದರೀಗ ಅವರ ಸಲಹೆ, ಸೂಚನೆ, ತಿದ್ದುಪಡಿಗಳನ್ನು ಅಳವಡಿಸಿಕೊಂಡು ಸಿದ್ಧವಾದ ಪ್ರತಿಯನ್ನು ಅವಲೋಕಿಸಿದಾಗ, ತೋಳ್ಪಾಡಿಯವರು ‘ಮಹಾಭಾರತದೊಳಗೆ ಒಂದಿಷ್ಟು’ ಕೃತಿಗೆ ರಕ್ಷಾ ಕವಚ ತೊಡಿಸಿದ್ದಾರೆ ಎಂಬಂತೆ ಗೋಚರಿಸಿತು! ಜೊತೆಗೆ, ತೋಳ್ಪಾಡಿ ಅವರು ಈ ಕೃತಿಯ ಬಗ್ಗೆ ತಮ್ಮ ಒಳಮಾತುಗಳನ್ನು ಬರೆದುಕೊಟ್ಟಿದ್ದಾರೆ, ಇದರ ಜೊತೆಗೆ ರಾಜೇಂದ್ರ ಚೆನ್ನಿ ಅವರ ಮುನ್ನುಡಿ, ಓ.ಎಲ್.ನಾಗಭೂಷಣ್ ಅವರ ಹಿನ್ನುಡಿ, ಚ.ಹ. ರಘುನಾಥ್‌ಅವರ ಬರಹ ಸೋಪಜ್ಞವಾಗಿದ್ದು ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಗೆ ಒಳಪು ನೀಡಿವೆ.

‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯನ್ನು ಸುಧಾ ವಾರ ಪತ್ರಿಕೆಯು ಚ.ಹ. ರಘುನಾಥ್ ಅವರ ಬೆಲೆಯುಳ್ಳ ಟಿಪ್ಪಣಿಯೊಡನೆ ಧಾರಾವಾಹಿಯಾಗಿ ಪ್ರಕಟಿಸಿತು. ಆ ಟಿಪ್ಪಣಿಯು ಈಗ ಈ ಕೃತಿಯೊಡನೆ ಕೂಡಿದೆ. ಕನಿಷ್ಠ ೯ ತಿಂಗಳ ಕಾಲ ಎಡಿಟ್ ಮಾಡುತ್ತಿದ್ದ ಕಾಲಾವಽಯಲ್ಲಿ ನನ್ನ ಅವಾಂತರ-ಅವತಾರಗಳನ್ನು ಸಹಿಸಿಕೊಂಡ ನನ್ನ ಪತ್ನಿ ಸುಮಿತ್ರಾರನ್ನು ನೆನಸಿಕೊಳ್ಳುವೆ. ಅಂಕದ ಪರದೆ ಜಾರಿದ ಮೇಲೆ ನನ್ನ ಎಡಿಟಿಂಗ್ ನಾಟಕ ಮುಗಿಯಿತು ಅಂದುಕೊಂಡಿದ್ದಾಗ ಎಂಟ್ರಿ ಪಡೆದ ಪ್ರಯೋಗಶೀಲ ನಾಟಕ ನಿರ್ದೇಶಕ ರಘುನಂದನ ಅವರು ಅಳವಡಿಸಿಕೊಳ್ಳಬಹುದಾದ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವರೂ ಹಾಗೂ ಪ್ರಕಾಶಕ ಮಹಾಶಯ ಅಭಿರುಚಿ ಗಣೇಶ್ ಸೇರಿದಂತೆ ಹೆಸರಿಸಿರುವ ಎಲ್ಲರೂ ಒಂದಲ್ಲ ಒಂದು ರೀತಿ ಸಹಭಾಗಿಗಳೇ ಆಗಿದ್ದಾರೆ.

ಇಂದು, ರಾಮು ಬದುಕಿದ್ದರೆ, ಎಡಿಟ್ ಮಾಡುವ ದುಸ್ಸಾಹಸಕ್ಕೆ ನಮ್ಮಪ್ಪರಾಣೆಗೂ ನಾನು ಕೈ ಹಾಕುತ್ತಿರಲಿಲ್ಲ. ಅವನಿಂದಲೇ ಮಾಡಿಸುತ್ತಿದ್ದೆ. ಆಯ್ತು, ಇಷ್ಟೆಲ್ಲಾ ಮಾಡಿ ನಾನು ಏನು ಸಂಪಾದಿಸಿದೆ?ಮಹಾಭಾರತದ ಸಮುದ್ರದ ಒಳಗಿಂದ ಒಂದಿಷ್ಟು ಜಲ ಮೊಗೆದು ಸ್ಪರ್ಶಿಸಿ ರಾಮು ನಮಗೆ ನೀಡಿದ್ದಾನೆ. ಇವು ಕೆಲವು ಮಹಾಭಾರತದ ಸ್ಯಾಂಪಲ್‌ಗಳು ಮಾತ್ರ. ಅವು ಇಲ್ಲಿ ಜೀವಾಡುತ್ತಿವೆ. ಇವು ಮಹಾಭಾರತದ ಹೃದಯ ಬಡಿತದಂತೂ ಕೇಳಿಸುತ್ತವೆ. ನಾನೇನು ಸಂಪಾದಿಸಿದೆ ಎಂದು ಕೇಳಿದೆನಲ್ಲ?ರಾಮು ಸ್ಪರ್ಶದ ಈ ಮಹಾಭಾರತದ ಹೃದಯ ಬಡಿತಗಳನ್ನು ನಾನು ಆಲಿಸಿದೆ. ಮಹಾಭಾರತದ ನಾಡಿ ಬಡಿತಗಳನ್ನೂ ಅನುಭವಿಸಿದೆ. ಈ ಸ್ಯಾಂಪಲ್‌ಗಳ ನಾಡಿ ಹಿಡಿದು ಇಡೀ ಮಹಾಭಾರತವೂ ಹೀಗೆಯೇ ಇದ್ದಿರಬಹುದಲ್ಲವೆ ಎಂದು ಅಂದಾಜಿಸಲೂಬಹುದು.

ನಾನೇನು ಸಂಪಾದಿಸಿದೆ ಎಂದು ಕೇಳಿದೆನಲ್ಲ? ಹೌದು, ಇಲ್ಲಿನ ಪ್ರಸಂಗಗಳೊಳಗೆ ಮುಳುಗಿ ಎದ್ದು ಬಂದ ಮೇಲೆ ಅವು ನನ್ನೊಳಗೆ ನಡೆದಾಡಿ ೧ಗುರುತು ಉಳಿಸಿದ್ದವು. ಅವೆಲ್ಲವೂ ನನ್ನೊಳಗೆ ಸಂಭವಿಸುತ್ತ ನನ್ನ ಒಳಗು ವಿಶಾಲವಾದಂತೂ ಅನ್ನಿಸಿತು. ಆದರೆ, ರಾಮು ಸ್ಪಿರಿಟ್ ಇಲ್ಲೆ ಎಲ್ಲಾರು ಓಡಾಡುತ್ತಿದ್ದು ನಾನು ಎಡಿಟ್ ಮಾಡಿರುವ ಈ ‘ಮಹಾಭಾರತದೊಳಗಿಂದ ಒಂದಿಷ್ಟು’ ನೋಡಿದರೆ ಅದು ಏನೇನು ಗೊಣಗಿಕೊಳ್ಳುತ್ತದೊ ಯಾರಿಗೆ ಗೊತ್ತು? ನನಗೆ ತಿಳಿಯದು!

Tags:
error: Content is protected !!