Mysore
24
overcast clouds

Social Media

ಸೋಮವಾರ, 08 ಜೂನ್ 2026
Light
Dark

ಬುಡಕಟ್ಟು ಜೀವನ ಬಿಚ್ಚಿಡುವ ಮ್ಯೂಸಿಯಂ!

ಮದನ್ ಕೆ.ಪಿ

ಸಾಂಪ್ರದಾಯಿಕ ಮನೆಗಳು, ಧರಿಸುವ ಉಡುಪುಗಳು, ಒಡವೆಗಳ ಅನಾವರಣ

ಮೈಸೂರು: ನಗರದ ಬೋಗಾದಿಯಲ್ಲಿರುವ ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಕೇಂದ್ರದಲ್ಲಿರುವ ಪ್ರಾದೇಶಿಕ ಮಾನವ ಶಾಸ್ತ್ರ ವಸ್ತುಸಂಗ್ರಹಾಲಯವು ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯನ್ನು ಪರಿಚಯಿಸುವ ವಿಶಿಷ್ಟ ತಾಣವಾಗಿದೆ. ಸಂಗ್ರಹಾಲಯಕ್ಕೆ ಕಾಲಿಟ್ಟ ತಕ್ಷಣವೇ ಬುಡಕಟ್ಟು ಸಮುದಾಯಗಳ ಜೀವನದ ವಿವಿಧ ಆಯಾಮಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ.

ಸೋಲಿಗರು, ಜೇನು ಕುರುಬರು, ಕಾಡು ಕುರುಬರು, ನೀಲಗಿರಿಯ ತೋಡರು ಮತ್ತು ಕೋಟರು ಸೇರಿದಂತೆ ಹಲವು ಆದಿವಾಸಿ ಸಮುದಾಯಗಳ ಸಾಂಪ್ರದಾಯಿಕ ಜೀವನ ಪದ್ಧತಿಗಳನ್ನು ಇಲ್ಲಿ ಆಕರ್ಷಕವಾಗಿ ಪ್ರದರ್ಶಿಸಲಾಗಿದೆ. ಲಕ್ಷದ್ವೀಪ ಹಾಗೂ ಅಂಡಮಾನ್ ದ್ವೀಪಗಳ ಜನಾಂಗಗಳ ಸಂಸ್ಕೃತಿಯ ಕುರಿತ ಮಾಹಿತಿಯೂ ಇಲ್ಲಿದೆ.

ಸಂಗ್ರಹಾಲಯದ ಪ್ರಮುಖ ಆಕರ್ಷಣೆ ಯೆಂದರೆ ನೈಜ ಮಾದರಿಗಳು, ಬುಡಕಟ್ಟು ಜನಾಂಗದವರು ವಾಸಿಸುವ ಸಾಂಪ್ರದಾಯಿಕ ಮನೆಗಳು, ಅವರು ಧರಿಸುವ ಉಡುಪುಗಳು ಹಾಗೂ ಆಭರಣಗಳನ್ನು ಒಳಗೊಂಡ ಮಾದರಿಗಳು ಭೇಟಿ ನೀಡುವವರಿಗೆ ಅವರ ಜೀವನಶೈಲಿಯ ನೇರ ಅನುಭವವನ್ನು ನೀಡುತ್ತವೆ. ಕ್ಷೇತ್ರ ಅಧ್ಯಯನದ ವೇಳೆ ಸಂಗ್ರಹಿಸಲಾದ ಅಪ ರೂಪದ ಛಾಯಾಚಿತ್ರಗಳು ಮತ್ತು ದಾಖಲೆಗಳು ಕೂಡ ಸಂಗ್ರಹಾಲಯದ ವಿಶೇಷ ಆಕರ್ಷಣೆಗಳಾಗಿವೆ. ಇವು ಬುಡಕಟ್ಟು ಸಮುದಾಯಗಳ ಇತಿ ಹಾಸ, ಸಂಸ್ಕೃತಿ ಮತು  ಕಾಲಾನುಗತ ಬದಲಾವಣೆಗಳ ಕುರಿತು ಮಹತ್ವದ ಮಾಹಿತಿಯನ್ನು ಒದಗಿಸುತ್ತವೆ.

ಇದರ ಜೊತೆಗೆ ಕೇಂದ್ರದಲ್ಲಿ ವಿಶಿಷ್ಟ ಗ್ರಂಥಾಲಯವೂ ಇದೆ. ಮಾನವಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನಗಳಿಗೆ ಸಂಬಂಽಸಿದ ಸಾವಿರಾರು ಪುಸ್ತಕಗಳು, ಸಂಶೋಧನಾ ಪ್ರಬಂಧಗಳು ಹಾಗೂ ಅಪರೂಪದ ಪ್ರಕಟಣೆಗಳು ಇಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅಮೂಲ್ಯ ಮಾಹಿತಿ ಭಂಡಾರವಾಗಿದೆ.

೧೯೬೦ರಿಂದ ವಸ್ತುಸಂಗ್ರಹಾಲಯ ಕಾರ್ಯನಿರ್ವಹಣೆ: 

ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ(Anthropological Survey of India – AnS) ದಕ್ಷಿಣ ಪ್ರಾದೇಶಿಕ ಕೇಂದ್ರ-೧೯೪೫ರಲ್ಲಿ ಕಲ್ಕತ್ತಾದಲ್ಲಿ ಆರಂಭವಾದ ಈ ಕೇಂದ್ರದ ದಕ್ಷಿಣ ಶಾಖೆ ೧೯೬೦ರಿಂದ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಭಾರತದ ವಿಭಿನ್ನ ಸಮುದಾಯಗಳ ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡುತ್ತಿದೆ. ಈ ಕೇಂದ್ರವು ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಲಕ್ಷದ್ವೀಪ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳ ಬುಡಕಟ್ಟು ಜನಾಂಗಗಳು ಹಾಗೂ ವೈವಿಧ್ಯಮಯ ಸಮುದಾಯಗಳ ಭಾಷೆ, ಜೀವನ ಶೈಲಿ ಮತ್ತು ದೈಹಿಕ ಮಾನವಶಾಸ್ತ್ರದ ಕುರಿತು ಆಳವಾದ ಸಂಶೋಧನೆ ನಡೆಸುತ್ತಿದೆ.

” ಈ ವಸ್ತು ಸಂಗ್ರಹಾಲಯದಲ್ಲಿ ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯನ್ನು ವಿಸ್ತಾರವಾಗಿ ಪರಿಚಯಿಸಲಾಗಿದೆ. ಶಾಲಾ ಮಕ್ಕಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಿದೆ. ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಾರೆ.”

-ಡಾ.ಹರ್ಷವರ್ಧನ್, ಉಪ ನಿರ್ದೇಶಕ, ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಕೇಂದ್ರ.

ಪ್ರಮುಖ ವಸ್ತುಗಳ ಅನಾವರಣ: ಬೇಟೆಗೆ ಬಳಸುತ್ತಿದ್ದ ಬಿಲ್ಲು-ಬಾಣ, ಈಟಿ, ಕತ್ತಿ ಸೇರಿದಂತೆ ವಿವಿಧ ಆಯುಧಗಳು, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಬುಟ್ಟಿಗಳು, ಮಣ್ಣಿನ ಮತ್ತು ಮರದ ಪಾತ್ರೆಗಳು, ಸಂಗೀತ ವಾದ್ಯ ಪರಿಕರಗಳು, ಆಭರಣಗಳು, ಆಯುಧಗಳು ಮತ್ತು ಸಾಂಪ್ರದಾಯಿಕ ವಸ್ತುಗಳು ಇಲ್ಲಿನ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟಿದ್ದು, ಇವು ಬುಡಕಟ್ಟು ಸಮುದಾಯಗಳ ಕೌಶಲ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುತ್ತದೆ.

 

 

Tags:
error: Content is protected !!