ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಲು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮುಖದಲ್ಲಿ ಖರ್ಗೆ ಅವರು, ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಯಾಗಿರುವ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಖರ್ಗೆ ಅವರೊಂದಿಗೆ ಎಐಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪವನ್ ಖೇರಾ, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಆಲಿಖಾನ್ ಅವರು ರಾಜ್ಯಸಭೆ ಸದಸ್ಯರಾಗಲು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 134 ಸದಸ್ಯರನ್ನು ಹೊಂದಿದ್ದು, 5 ಮಂದಿ ಪಕ್ಷೇತರರು ಹಾಗೂ ಇತರ ಸದಸ್ಯರ ಬಲ ಹೊಂದಿದೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಇಬ್ಬರು ಸದಸ್ಯರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವ ಸಾಧ್ಯತೆ ಇದೆ.
141 ಸಾಧ್ಯತೆ ಮತಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ರಾಜ್ಯಸಭೆಯಲ್ಲಿ 3, ವಿಧಾನ ಪರಿಷತ್ತಿನಲ್ಲಿ 4 ಸದಸ್ಯರನ್ನು ಚುನಾಯಿಸಿಕೊಳ್ಳಲು ಸುಲಭ ಅವಕಾಶಗಳಿವೆ. ವಿಧಾನಪರಿಷತ್ತಿಗೆ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಮಳವಳ್ಳಿ ಅವರನ್ನು ಈಗಾಗಲೇ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇದೇ ತಿಂಗಳ 18ರಂದು ರಾಜ್ಯಸಭೆಯ 4 ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 7 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.




