ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ತಡರಾತ್ರಿ ನಡೆದ ದಾಳಿಯಲ್ಲಿ ಗರ್ಭಿಣಿ ಹೆಮ್ಮೆ ಸಾವನ್ನಪ್ಪಿದ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಗ್ರಾಮದ ರೈತ ಮಹಿಳೆ ನೇತ್ರಾವತಿ ಅವರ ಮನೆಯ ಹಿಂಭಾಗದಲ್ಲಿ ಕಟ್ಟಿದ್ದ ತುಂಬು ಗರ್ಭಿಣಿ ಹೆಮ್ಮೆಯ ಮೇಲೆ ಚಿರತೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡ ಹೆಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಬೆಳಿಗ್ಗೆ ಜಾನುವಾರಿನ ಶವವನ್ನು ಕಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಗ್ರಾಮದ ಜನರು ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳನ್ನು ಹಾಗೂ ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಚಿರತೆ ನಿರಂತರವಾಗಿ ಗ್ರಾಮಗಳ ಸಮೀಪ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
“ಇಂದು ಹೆಮ್ಮೆ ಬಲಿಯಾಗಿದೆ, ನಾಳೆ ಮನುಷ್ಯರ ಜೀವಕ್ಕೆ ಅಪಾಯ ಎದುರಾದರೆ ಯಾರು ಹೊಣೆ?” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಿ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಕಾರ್ಯಾಚರಣೆ ಆರಂಭಿಸಬೇಕು. ಜೊತೆಗೆ ಮೃತಪಟ್ಟ ಜಾನುವಾರಿಗೆ ಸರ್ಕಾರದ ನಿಯಮಾನುಸಾರ ಶೀಘ್ರ ಪರಿಹಾರ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಿರತೆಯ ಭೀತಿಯಿಂದ ಮಾಕವಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಯಾವಾಗ ಎಚ್ಚೆತ್ತುಕೊಳ್ಳುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.





