ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಂದರೆ ಅಲ್ಲಿ ಬರೀ ವ್ಯವಹಾರ ಮಾತ್ರ ನಡೆಯಬೇಕು, ವಿಚಾರಸಂಕಿರಣಗಳೆಲ್ಲ ನಮಗೇಕೆ? ಅಲ್ಲಿ ಯಾರು ಬರುತ್ತಾರೆ ಎಂದು ಪ್ರಶ್ನಿಸಿದವರಿಗೆ ಉತ್ತರವೋ ಎನ್ನುವ ಹಾಗಿತ್ತು ಹಿಂದಿನ ಭಾನುವಾರ ನಡೆದ ವಿಚಾರ ಸಂಕಿರಣ. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಈ ವಿಚಾರಸಂಕಿರಣದಲ್ಲಿ ಚಿತ್ರೋದ್ಯಮದ ವಿವಿಧ ವಿಭಾಗಗಳ ಹಿರಿಯ, ಕಿರಿಯ ಮಂದಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗತಿಯನ್ನು ನೇರವಾಗಿ ಯಾವುದೇ ಮುಲಾಜಿಲ್ಲದೆ ಹೇಳಿದವರು, ವಿಚಾರ ಸಂಕಿರಣದ ಉದ್ಘಾಟನೆಗೆ ಬಂದ ಅತಿಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಪ್ರಭಾಕರ್, ನಿನ್ನೆ, ಇಂದು, ನಾಳೆಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿ ನಾಳೆಯ ದಾರಿ ಹೀಗಾದರೆ ಚೆನ್ನ ಎಂದವರು, ಕನ್ನಡದ ಜನಪ್ರಿಯ ನಟ, ನಿರ್ದೇಶಕ, ಚಿಂತಕ ರಮೇಶ್ ಅರವಿಂದ್.
ಹಣದ ಬಡತನ ಇದ್ದಾಗಲೇ ಗುಣಮಟ್ಟದಲ್ಲಿ ಅತ್ಯಂತ ಶ್ರೀಮಂತಿಕೆ ಇದ್ದ ಸಿನಿಮಾಗಳನ್ನು ಕೊಟ್ಟ ಕನ್ನಡ ಚಿತ್ರರಂಗದಲ್ಲಿ ಈಗ ಹಣದ ಶ್ರೀಮಂತಿಕೆ ಇದೆ. ಆದರೆ ಗುಣಮಟ್ಟ ಬಡವಾಗಿದೆ. ಇದಕ್ಕೆ ಸಿನಿಮಾರಂಗ ಕನ್ನಡತನದ ಬೇರುಗಳಿಂದ ಕಳಚಿಕೊಂಡಿರುವುದೇ ಕಾರಣ. ಚಂದನವನಕ್ಕೆ ಸತ್ಯ ಮತ್ತು ಸಂಸ್ಕಾರದ ಜೊತೆಗೆ ಸಾಂಸ್ಕೃತಿಕವಾಗಿ ಆಳವಾದ ಬೇರುಗಳಿವೆ. ಚಂದನವನದ ಇತಿಹಾಸದಲ್ಲಿ ಯಾವತ್ತೂ ಕೇವಲ ಮನೋರಂಜನೆಯ ಮಾಧ್ಯಮವಾಗಿರಲಿಲ್ಲ. ಬದಲಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳನ್ನು ಬಿಂಬಿಸುವ ಕನ್ನಡಿಯಾಗಿತ್ತು. ಕನ್ನಡದ ಬದುಕನ್ನು ಕಟ್ಟುವ, ಕನ್ನಡದ ಸಂಸ್ಕೃತಿಯನ್ನು ರೂಪಿಸುವ ಮತ್ತು ಕನ್ನಡ ನೆಲದ ಮೌಲ್ಯವನ್ನು ನಿರ್ಧರಿಸುವ ಮೂಲಕ ಕನ್ನಡತನವನ್ನು ಕಟ್ಟಿ ನಿಲ್ಲಿಸುವ ಸಾಂಸ್ಕೃತಿಕ ಚಳವಳಿಯಾಗಿ ಕನ್ನಡ ಸಿನಿಮಾರಂಗ ಬೆಳೆದು ಬಂದಿದೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು ಪ್ರಭಾಕರ್.
ತಾವು ಕನ್ನಡ ಚಿತ್ರಗಳ ಅಭಿಮಾನಿ ಎಂದ ಅವರು ಇಂದಿನ ಕನ್ನಡ ಚಿತ್ರರಂಗದ ಸ್ಥಿತಿಯ ಕುರಿತಂತೆ ವಿಶ್ಲೇಷಿದ್ದು ಹೀಗೆ- ಕನ್ನಡ ಚಿತ್ರರಂಗಕ್ಕೆ ಈಗ ಮಚ್ಚಿನ ಹುಚ್ಚು ಹಿಡಿದಿದೆ. ಯಾವುದೇ ಮೌಲ್ಯಗಳಿಲ್ಲದ ಮೆಚ್ಚಿನ ಹೀರೋಯಿಸಂ ಅನ್ನೇ ನಂಬಿಕೊಂಡಿರುವ ಚಿತ್ರಗಳಿಂದಾಗಿ ವಾರ್ಷಿಕ ಚಿತ್ರಗಳ ಸಂಖ್ಯೆ ಮಿತಿ ಮೀರುತ್ತಿವೆ. ಹೀಗಾಗಿ ಅಂದಿನ ಸಿನಿಮಾಗಳಿಗೂ ಇಂದಿನ ಸಿನಿಮಾಗಳಿಗೂ ಗುಣಮಟ್ಟದಲ್ಲಿ ಬಹಳ ವ್ಯತ್ಯಾಸ ಕಾಣುತ್ತಿದೆ. ಅತಿಯಾಗುತ್ತಿರುವಹೊಸಬರ ಸಿನಿಮಾಗಳ ಅಬ್ಬರದಲ್ಲಿ ಅನುಭವಿಗಳಾಗಿರುವ ಹಳಬರಿಗೆ ಬಲವಂತದ ನಿವೃತ್ತಿ ನೀಡಲಾಗುತ್ತಿದೆ. ಮಚ್ಚಿನ ಹುಚ್ಚು ಕನ್ನಡ ಸಿನಿಮಾ ಪರಂಪರೆಯ ಬೇರುಗಳನ್ನು ಯದ್ವಾತದ್ವಾ ಕತ್ತರಿಸಿ ಕೊನೆಗೆ ಪ್ರೇಕ್ಷಕರಿಲ್ಲದೆ ಅನಾಥವಾಗಿಸುವ ಸ್ಥಿತಿಗೆ ತಂದಿದೆ ಎಂದರು.
‘ಕೆ.ಜಿ.ಎಫ್’, ‘ಕಾಂತಾರ’, ‘ಚಾರ್ಲಿ 777’, ‘ವಿಕ್ರಾಂತ್ ರೋಣ ಮುಂತಾದ ಚಿತ್ರಗಳು ಕನ್ನಡದ ತಾಕತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿವೆ. ನಮ್ಮ ಮಣ್ಣಿನ ಕಥೆಗಳು, ನಮ್ಮ ಆಚರಣೆಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆಯುತ್ತಿವೆ ಎಂದು ಅವರು, ತಾಂತ್ರಿಕ ಕ್ರಾಂತಿಯ ಹೊತ್ತಲ್ಲಿ ಜಾಗತಿಕ ಮನ್ನಣೆ ಗಳಿಸಿದ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡಿದ್ದನ್ನು ಪ್ರಸ್ತಾಪಿಸಿದರು. ಪ್ಯಾನ್-ಇಂಡಿಯಾ ಸಿನಿಮಾ ಮಾಡುವ ಗೀಳಿನಲ್ಲಿ ನಮ್ಮ ಚಿತ್ರಗಳು ಕನ್ನಡತನ, ಪ್ರಾದೇಶಿಕ ಸೊಗಡನ್ನು ಕಳೆದುಕೊಳ್ಳಬಾರದು. ಕನ್ನಡ ಚಿತ್ರರಂಗಕ್ಕೆ ಹಳೆಯ ಹಿರಿಮೆಯ ಬಲವಿದೆ, ಇಂದಿನ ತಂತ್ರಜ್ಞಾನದ ವೇಗವಿದೆ. ಈ ಎರಡನ್ನೂ ಸಮತೋಲನದಲ್ಲಿ ತೆಗೆದುಕೊಂಡು ಹೋದರೆ ಮುಂದಿನ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ ಎನ್ನುವುದಾಗಿತ್ತು ಅವರ ಸಲಹೆ.
ಒಂದೊಳ್ಳೆ ಸಿನಿಮಾ ಆಗಬೇಕಾದರೆ ಅದಕ್ಕೆ ನಾಯಕ -ನಾಯಕಿಯಷ್ಟೆ ಇದ್ದರೆ ಸಾಕು ಎಂಬ ಆಲೋಚನೆಯಿಂದ ಹೊರಬಂದು ಕಥೆ ಕಟ್ಟುವ ಕಥೆಗಾರ, ಕಟ್ಟಿದ ಕಥೆಯನ್ನು ತೆರೆಯ ಮೇಲೆ ತರಲು ಹೆಣಗುವ ನಿರ್ದೇಶಕ, ಅದಕ್ಕೆ ಒಂದುಗೂಡುವ ತಂತ್ರಜ್ಞರಿಗೂ ಸರಿಯಾದ ಮನ್ನಣೆ ಸಿಗುವ ಯಶಸ್ವೀ ಹೈಬ್ರಿಡ್ ಮಾದರಿಯನ್ನು ಚಂದನವನ ಕಟ್ಟಿಕೊಳ್ಳಲಿ ಎನ್ನುವ ಆಶಯ ಅವರದಾಗಿತ್ತು.
ರಮೇಶ್ ಅವರ ಮಾತುಗಳಲ್ಲೂ ಬೇರನ್ನು ಮರೆಯಬಾರದು ಎನ್ನುವ ಕಳಕಳಿ ಇತ್ತು. ಕನ್ನಡ ಚಿತ್ರರಂಗದತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದ ಚಿತ್ರಗಳು ಕೆಜಿಎಫ್ ಮತ್ತು ಕಾಂತಾರ. ಆದರೆ ಇದಷ್ಟೇ ಸಾಕೇ ಎನ್ನುವ ಪ್ರಶ್ನೆ, ಎಲ್ಲರಂತೆ ಅವರದು ಕೂಡ ಆಗಿತ್ತು. ಮಾತ್ರವಲ್ಲ ಅವರ ಅಮೆರಿಕ ಅಮೆರಿಕ ಚಿತ್ರದ ಸಂಭಾಷಣೆಯೊಂದನ್ನು ಇದಕ್ಕೆ ಅನ್ವರ್ಥವಾಗುವಂತೆ ಪ್ರಸ್ತಾಪಿಸಿದರು.
ಮನುಷ್ಯನಿಗೆ ಬೇಕಾಗಿರುವುದು ಬೇರುಗಳು, ಇಲ್ಲಿನ ಸತ್ವ ಹೀರಿ ಇಲ್ಲಿ ಫಲ ಕೊಡಬೇಕು ಎನ್ನುವುದು ಚಿತ್ರದಲ್ಲಿ ಅವರ ಮಾತು. ಮನುಷ್ಯ ಹಾರಬೇಕು, ಎಲ್ಲ ಕಡೆ ಹಾರಬೇಕು. ಅದಕ್ಕೆ ರೆಕ್ಕೆಗಳು ಮುಖ್ಯ ಅಂತ ಇನ್ನೊಂದು ಪಾತ್ರ ಹೇಳುತ್ತದೆ. ಆಗ ನಡುವೆ ಇದ್ದ ನಾಯಕಿ, ರಕ್ಕೆ, ಬೇರು ಎರಡೂ ಇರೋಕೆ ಸಾಧ್ಯ ಇಲ್ವಾ? ಅಂತ ಕೇಳುತ್ತಾಳೆ, ಎನ್ನುವುದನ್ನು ಹೇಳಿದ ರಮೇಶ್, ಅದು ಈಗ ಆಗಬೇಕಾದ ಕೆಲಸ ಎನ್ನುತ್ತಾರೆ. ನಿಮ್ಮತನವನ್ನು ಬಿಡದೆ, ನಿಮ್ಮ ಮಣ್ಣಿನ ಶಕ್ತಿಯನ್ನು ಮರೆಯದೆ, ನಿಮ್ಮ ಬೇರುಗಳನ್ನು ಮರೆಯದೆ, ರೆಕ್ಕೆ ಇಟ್ಟುಕೊಂಡು ಹಾರೋಕೆ ಆಗುತ್ತದೆ. ಅದನ್ನು ಇಂದಿನ ಯುವ ಪೀಳಿಗೆ ಮಾಡಬೇಕು ಎಂದು ಅವರು ಚಿತ್ರರಂಗದ ಇಂದಿನ ಯುವಕರಿಗೆ ಸಲಹೆ ನೀಡಿದರು. ದಾಂಗುಡಿ ಇಡುತ್ತಿರುವ ಕೃತಕ ಬುದ್ಧಿಮತ್ತೆ ಚಲನಚಿತ್ರ ಮಾಧ್ಯಮದ ಭವಿಷ್ಯ ಎಂದ ಅವರು, ಅದರ ಸಾಧಕ- ಬಾಧಕಗಳ ಬಗ್ಗೆ ಗಮನಹರಿಸಿ, ಅದನ್ನು ಬಳಸಬೇಕಾದ ಅಗತ್ಯವನ್ನು ಹೇಳಿದರು.
ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಕ್ಕೆ ಕೆಲವು ಬೇಡಿಕೆಗಳ ಮನವಿಯನ್ನು ಪ್ರಭಾಕರ್ ಅವರ ಮೂಲಕ ನೀಡಿದರು. ಅವುಗಳಲ್ಲಿ ಸಹಾಯಧನ ರೂ.10 ಲಕ್ಷದ ಬದಲು ರೂ.25 ಲಕ್ಷಕ್ಕೇರಿಸುವುದು, ಮೈಸೂರಿನಲ್ಲಿ ತಲೆ ಎತ್ತಲಿರುವ ಚಿತ್ರನಗರಿಯಲ್ಲಿ ಚಿತ್ರರಂಗದ ಮಂದಿಗೆ ಸೂರು ಕಲ್ಲಿಸಲು 50 ಎಕರೆ ಜಮೀನು, ಡಿಜಿಟಲ್ ದಿನಗಳಲ್ಲಿ ಚಿತ್ರಮಂದಿರಗಳನ್ನು ಕಟ್ಟಲು ಅನುವಾಗುವಂತೆ ಸಿನಿಮಾಟೋಗ್ರಾಫ್ ಕಾಯ್ದೆ ಸರಳೀಕರಣ, ಒಟಿಟಿ ತಾಣದ ತುರ್ತು ಸ್ಥಾಪನೆ ಮೊದಲಾದ ಬೇಡಿಕೆಗಳಿದ್ದವು. ಡಿ ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅದನ್ನು ಈಡೇರಿಸುವ ಭರವಸೆ ಅವರದು.
ವಿಚಾರಗೋಷ್ಠಿಯಲ್ಲಿ ಕನ್ನಡ ಚಲನಚಿತ್ರ ಸೃಷ್ಟಿ ಸ್ವರೂಪದ ರೂಪಕಗಳು ವಿಷಯದ ಕುರಿತಂತೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ ಶೇಷಾದ್ರಿ ಮಾತನಾಡಿದರು. ಕನ್ನಡದ ಮೊದಲ ಚಿತ್ರ ಸತಿ ಸುಲೋಚನಾ ಮೊದ ಲ್ಗೊಂಡು ಇಲ್ಲಿಯವರೆಗೆ ವಿವಿಧ ಹಂತಗಳು, ಕಥನದ ಮೂಲಗಳು, ಕಲಾತ್ಮಕ ಚಿತ್ರಗಳು, ಸೆಲ್ಯುಲಾಯ್ದಿನಿಂದ ಡಿಜಿಟಲ್, ಕಿರುತೆರೆ, ಒಟಿಟಿ, ವಿಶೇಷ ಪರಿಣಾಮಗಳು, ಗ್ರಾಫಿಕ್ಸ್ ಇತ್ಯಾದಿ, ಸರ್ಕಾರದ ಸೌಲಭ್ಯ, ಇಂದಿನ ಪ್ರೇಕ್ಷಕರ ಮನಸ್ಥಿತಿ, ಮುಂದಿನ ದಾರಿ.. ಹೀಗೆ ವಿವರವಾಗಿ ಹೇಳಿದರು.
ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ. ವಿ. ಚಂದ್ರಶೇಖರ್ ಅವರು ಚಲನಚಿತ್ರ ಮಂದಿರಗಳ ಸ್ಥಿತ್ಯಂತರ ವರ್ತಮಾನದ ಸವಾಲುಗಳ ಕುರಿತಂತೆ ಬೆಳಕು ಚೆಲ್ಲಿದರು. ಸೆಲ್ಯುಲಾಯಿಡ್ ದಿನಗಳಲ್ಲಿ ಹೊಸ ಚಿತ್ರವೊಂದರ ಬಿಡುಗಡೆಯ ವೇಳೆ ಇದ್ದ ಸಂಭ್ರಮ, ಈ ದಿನಗಳ ಪರಿ, ಕೆಲವರು ಉಚಿತ ಟಿಕೆಟುಗಳನ್ನು ಹಂಚುವುದರಿಂದ ಆಗಿರುವ ಅಪಾಯ, ಇತ್ಯಾದಿ ಅವರ ಮಾತುಗಳಲ್ಲಿತ್ತು.
ಪ್ರಸ್ತುತ ಚಿತ್ರರಂಗದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಕೃತಕ ಬುದ್ಧಿಮತ್ತೆಯದು. ಚಲನಚಿತ್ರ ಹಾಗೂ ಎಐ ತಂತ್ರಜ್ಞಾನ ಸಾಧಕ ಬಾಧಕಗಳು ಕುರಿತಂತೆ ಮಾತನಾಡಲು ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ ಎ. ಎಚ್. ಸಾಗರ್ ಅವರಿದ್ದರು. ಕೃತಕ ಬುದ್ಧಿಮತ್ತೆಯ ಪ್ರಾಥಮಿಕ ವಿವರಗಳಿಂದ ಆರಂಭಿಸಿದ ಅವರು ಚಲನಚಿತ್ರ ಮಾಧ್ಯಮಕ್ಕೆ ಪೂರಕವಾದ ವಿಷಯಕ್ಕೆ ಬರುವ ವೇಳೆಗಾಗಲೇ ಸಾಕಷ್ಟು ಸಮಯವಾಗಿತ್ತು. ಮಧ್ಯಾಹ್ನದ ಊಟದ ನಂತರ, ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಭಾರ್ಗವ ಮಾತನಾಡಿದರು. ನಂತರ ಪ್ರಶೋತ್ತರ, ಚರ್ಚೆ.
ಇಂತಹ ವಿಚಾರಗೋಷ್ಠಿಯನ್ನು ಎರಡು ತಿಂಗಳಿಗೊಮ್ಮೆ ಆದರೂ ಏರ್ಪಡಿಸಿದರೆ ಹೊಸದಾಗಿ ಚಿತ್ರೋದ್ಯಮಕ್ಕೆ ಬರುವ ನಿರ್ಮಾಪಕರು, ತಂತ್ರಜ್ಞರಿಗೆ ಅನುಕೂಲ ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಯಿತು. ಇದರ ಮೂಲ ಆಶಯವೂ ಅದೇ ಆಗಿದೆ ಎಂದರು ವಾಣಿಜ್ಯ ಮಂಡಳಿಯ ಅಧ್ಯಕ್ಷರು, ವಿಚಾರಗೋಷ್ಠಿಯ ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಹಿರಿಯ ನಿರ್ಮಾಪಕ, ನಟ, ಪ್ರದರ್ಶಕ, ಸ್ಟುಡಿಯೋ ಮಾಲಿಕ, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರು ಚಿತ್ರೋದ್ಯಮದಲ್ಲಿ ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ಹೊಸದಾಗಿ ಬರುವ, ಬಂದು ಹೋಗುವ ನಿರ್ಮಾಪಕರ ಕುರಿತಂತೆ ಹೇಳುತ್ತಾ, ದೊಡ್ಡ ದೊಡ್ಡ ನಿರ್ಮಾಪಕರ ಚಿತ್ರಗಳು, ಉದ್ಯಮದ ಕೆಲಸಗಾರರಿಗೆ ಹಬ್ಬದೂಟ ಇದ್ದ ಹಾಗೆ. ಆದರೆ, ಇಲ್ಲಿ ನಿತ್ಯ ಊಟ ಹಾಕುವವರು ಹೊಸದಾಗಿ ಬಂದು ಹೋಗುವ ನಿರ್ಮಾಪಕರು. ಅವರಿಂದಲೇ ಇವತ್ತು ಕನ್ನಡ ಚಿತ್ರರಂಗ ಉಳಿದಿರುವುದು ಎಂದರು. ಚಿತ್ರರಂಗದ ಈ ಒಳಗುಟ್ಟು ಎಲ್ಲರಿಗೂ ತಿಳಿದಿರಲು ಸಾಧ್ಯವಿಲ್ಲ. ವರ್ಷಗಳ ಅನುಭವ ಇರುವ ಮಂದಿ ಮಾತ್ರ ಇದನ್ನು ಗಮನಿಸಲು ಸಾಧ್ಯ.
ವಾಣಿಜ್ಯ ಮಂಡಳಿಯ ಹಮ್ಮಿಕೊಂಡ ಈ ಕಾರ್ಯಕ್ರಮ ಉದ್ಯಮದ ಕುರಿತಂತೆ ಆಸಕ್ತರಿಗೆ ಸಾಕಷ್ಟು ವಿಷಯ, ವಿವರಗಳನ್ನು ತಿಳಿಯಲು, ಆತ್ಮಾವಲೋಕನ ಮಾಡಿಕೊಳ್ಳಲು ಬಾಗಿಲನ್ನಂತೂ ತೆರೆದಿದೆ.





