ನವೀನ್ ಡಿಸೋಜ
ವಿದ್ಯುತ್ ತಂತಿ ತಗುಲಿ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಬೆನ್ನಲ್ಲೇ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾದ ಇಲಾಖೆ
ಮಡಿಕೇರಿ: ಮನೆಯ ಸಮೀಪ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಬೆನ್ನಲ್ಲೆ ವಿದ್ಯುತ್ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು, ವಿದ್ಯುತ್ ಅವಘಡ ತಪ್ಪಿಸಲು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಮನವಿ ಮಾಡಿದೆ.
ವಿದ್ಯುತ್ ಮಾರ್ಗದ ಸಮೀಪದಲ್ಲಿ ಕಟ್ಟಡವನ್ನು (ಖಾಯಂ ಅಥವಾ ತಾತ್ಕಾಲಿಕ) ನಿರ್ಮಾಣ ಮಾಡಬಾರದು. ಒಂದು ವೇಳೆ ನಿರ್ಮಾಣ ಮಾಡಲೇ ಬೇಕಾದರೆ, ಸ್ಥಳೀಯ ವಿದ್ಯುತ್ ಸರಬರಾಜುದಾರರ ಸಲಹೆಯನ್ನು ಪಡೆದು ಕೊಂಡು ಸುರಕ್ಷತಾ ಅಂತರವನ್ನು ನಿಯಮಾನುಸಾರ ಕಾಯ್ದಿರಿಸಿ ಮುಂದುವರಿಯಬೇಕು. ವಿದ್ಯುತ್ ಸೇವಾ ಮಾರ್ಗವನ್ನು ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಕೆಳಮಟ್ಟದಲ್ಲಿ ಎಳೆಯಬಾರದು. ಬದಲಾಗಿ ವಿದ್ಯುತ್ ಸೇವಾ ಮಾರ್ಗವನ್ನು ಅಧಿಕೃತವಾಗಿ ಎಳೆದು ನಿಯಮಾನುಸಾರ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಎಂದು ಸೆಸ್ಕ್ ಸೂಚನೆ ನೀಡಿದೆ.
ಮನೆಯ ಚಾವಣಿಯ ಮೇಲೆ ಬಟ್ಟೆಯನ್ನು ಒಣಗಿಸಲು ಆಂಟೆನಾಗಳನ್ನು ಅಳವಡಿಸಲು ಬಳಸಲಾಗುವ ಕಂಬಗಳಿಗೆ ಸ್ಟೇ ತಂತಿಗಳನ್ನು ಸರ್ವಿಸ್ ಪೋಲ್‌ಗಳಿಗೆ ಬಿಗಿಯಬಾರದು. ವಿದ್ಯುತ್ ಕಂಬಗಳನ್ನು ಆಧಾರವಾಗಿ ಬಳಸಿ ಬಟ್ಟೆ ಒಣಗಿಸಲು ಸ್ಟೇ ತಂತಿಯನ್ನು ಬಿಗಿಯಬಾರದು. ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ, ಪರಿಣತ ವ್ಯಕ್ತಿಗಳಿಂದ ನಿರ್ವಹಿಸಬೇಕು. ಭಾರತೀಯ ಗುಣಮಟ್ಟ ಸಂಸ್ಥೆಯ (ಐಎಸ್‌ಐ) ಪ್ರಮಾಣೀಕೃತ ವಿದ್ಯುತ್ ಉಪಕರಣ, ಕೇಬಲ್, ವೈರ್ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಬೇಕು. ವಿದ್ಯುತ್ ಸ್ಥಾವರದಲ್ಲಿ ಪರಿಣಾಮಕಾರಿ ಭೂಸಂಪರ್ಕ ವ್ಯವಸ್ಥೆ ಕಲ್ಪಿಸಿ, ನಿರ್ವಹಿಸಬೇಕಿದೆ.
ಭಾರೀ ವಿದ್ಯುತ್ ಪರಿಕರಗಳಾದ ರೆಫ್ರಿಜರೇಟರ್, ಮಿಕ್ಸರ್, ಗೀಸರ್, ವಾಷಿಂಗ್ ಮೆಷಿನ್ ಮುಂತಾದವುಗಳಿಗೆ ಮೂರು ಪಿನ್ಪ್ಲಗ್ ಸಾಕೆಟ್ಸ್‌ಗಳಿರುವ ಪ್ರತ್ಯೇಕ ಸ್ವಿಚ್ ನಿಯಂತ್ರಣದಿಂದಲೇ ವಿದ್ಯುತ್ ಸರಬರಾಜು ಕಲ್ಪಿಸಿ, ಮೂರನೇ ಪಿನ್‌ಗೆ ಭೂಸಂಪರ್ಕ ಕಲ್ಪಿಸಬೇಕಿದೆ. ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್ಗಳನ್ನು ಕೈಗೆ ಎಟುಕುವ ಎತ್ತರದಲ್ಲಿ ಮಕ್ಕಳಿಗೆ ಸಿಗದ ಹಾಗೆ ಅಳವಡಿಸಬೇಕು. ಒದ್ದೆಯಾದ ಕೈಗಳಿಂದ ವಿದ್ಯುತ್ ಸ್ವಿಚ್‌ಗಳನ್ನು ಮುಟ್ಟಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಶಾಲೆಗೆ ಹೋಗುವ ದಾರಿಯಲ್ಲಿ ಮತ್ತು ಶಾಲೆಯ ಆವರಣದಲ್ಲಿ ಅಳವಡಿಸಲಾಗುವ ಡಿಸ್ಟ್ರಿಬ್ಯೂಷನ್ ಬೋರ್ಡ್, ಜಂಕ್ಷನ್ ಬಾಕ್ಸ್ ಅಥವಾ ಬೀದಿ ದೀಪದ ಕಂಟ್ರೋಲ್‌ಬಾಕ್ಸ್ ಅನ್ನು ಮುಚ್ಚಿರುವಂತೆ ನಿರ್ವಹಿಸುವುದು. ಸಿಡಿಲು ಅಥವಾ ಮಳೆ ಬೀಳುವ ಸಂದರ್ಭದಲ್ಲಿ ಎತ್ತರವಾದ ಮರಗಳ ಕೆಳಗೆ ನಿಲ್ಲಬಾರದು ಅಥವಾ ಮರದಿಂದ ಕನಿಷ್ಠ ೧೦ ಮೀಟರ್ ಅಂತರದಲ್ಲಿ ನಿಲ್ಲಬೇಕು. ಸಿಡಿಲು ಉಂಟಾಗುವ ಸಮಯದಲ್ಲಿ ವಿದ್ಯುತ್ ಮಾರ್ಗವನ್ನು ಹೊತ್ತ ಕಂಬ, ಧ್ವಜ ಸ್ಥಂಭ ಅಥವಾ ಆಂಟೆನಾ ಅಳವಡಿಸಿರುವ ಸ್ಟ್ರಕ್ಚರ್ ಅಥವಾ ಕಂಬದಿಂದ ಕನಿಷ್ಠ ೩ ಮೀಟರ್ ಅಂತರದಲ್ಲಿ ನಿಲ್ಲಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ವಿದ್ಯುತ್ ಮಾರ್ಗವನ್ನು ಹೊತ್ತ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು. ವಿದ್ಯುತ್ ಮಾರ್ಗಗಳ ಸಮೀಪ ಗಾಳಿಪಟ ಅಥವಾ ಡ್ರೋನ್‌ಗಳನ್ನು ಹಾರಿಸಬಾರದು ಎಂದು ಮನವಿ ಮಾಡಲಾಗಿದೆ.
” ತುಂಡಾಗಿ ನೆಲದಲ್ಲಿ ಮರದ ಮೇಲೆ ಬಿದ್ದಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಕಂಡುಬಂದಲ್ಲಿ ಅದನ್ನು ಸ್ಥಳಾಂತರಿಸುವ ಪ್ರಯತ್ನ ಮಾಡಬಾರದು. ತಂತಿಯಿಂದ ಕನಿಷ್ಠ ೧೦ ಮೀಟರ್ ಅಂತರದಲ್ಲಿರಬೇಕು. ಕೂಡಲೇ ಸ್ಥಳೀಯ ವಿದ್ಯುತ್ ಸರಬರಾಜು ದಾರರ ಕಚೇರಿಗೆ ವಿಷಯ ತಿಳಿಸಬೇಕು. ಒದ್ದೆಯಾದ ಕೈಗಳಿಂದ ವಿದ್ಯುತ್ ಸ್ವಿಚ್‌ಗಳನ್ನು ಮುಟ್ಟಬಾರದು. ವಿದ್ಯುತ್ ಉಪಕರಣದಲ್ಲಿ ಬೆಂಕಿ ಉಂಟಾದರೆ ಅದನ್ನು ನಂದಿಸಲು ನೀರನ್ನು ಬಳಸಬಾರದು.”
-ರಾಮಚಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್, ಚಾವಿಸನಿನಿ ಮಡಿಕೇರಿ ವಿಭಾಗ
ಗ್ರಾಹಕರು ಗಮನಿಸಬೇಕಾದ ಅಂಶಗಳು…:
ಅತಿಯಾದ ವಿಶ್ವಾಸದಿಂದ ವಿದ್ಯುತ್ ಕಾಮಗಾರಿಗಳನ್ನು ಸ್ವತಃ ನಿರ್ವಹಿಸಬಾರದು. ನಿಯಂತ್ರಣ ಸ್ವಿಚ್‌ಅನ್ನು ಆಫ್ ಮಾಡದೇ ಫ್ಯೂಸ್ ಔಟ್ ಆಗಿರುವ ಬಲ್ಬ್‌ಅನ್ನು ಬದಲಾಯಿಸ ಬಾರದು. ಎಕ್ಟ್‌ಟೆನ್ಷನ್ ಕಾರ್ಡ್‌ಗಳನ್ನು ಬಳಸಿ ವಿದ್ಯುತ್ ಮಂಡಲದ ಮೇಲೆ ಹೆಚ್ಚು ಭಾರವನ್ನು ಹಾಕಬಾರದು. ವಿದ್ಯುತ್ ಮಾರ್ಗಗಳ ಎತ್ತರಕ್ಕಿಂತ ಹೆಚ್ಚು ಇರುವ ವಾಹನ, ಎತ್ತಿನಗಾಡಿ, ಏಣಿ, ಇತರೆ ವಸ್ತುಗಳನ್ನು ವಿದ್ಯುತ್ ಮಾರ್ಗದ ಕೆಳಗೆ ಸಾಗಿಸಬಾರದು. ವಿದ್ಯುತ್ ಮಾರ್ಗದ ಕಂಬಗಳನ್ನು ಜಾಹೀರಾತು ಫಲಕ, ಕಾರ್ಯಕ್ರಮದ ಪೆಂಡಾಲ್‌ಗಳಿಗೆ ಆಧಾರವನ್ನಾಗಿ ಬಳಸಬಾರದು.




