ದಿನೇಶ್‌ಕುಮಾರ್ ಎಚ್.ಎಸ್.
ಮಧುಮೇಹಿಗಳಿಗೆ ಬಲು ಪ್ರೀತಿ; ಕೆಜಿ ನೇರಳೆ ಹಣ್ಣು ೨೦೦ ರೂ.ನಿಂದ ೨೫೦ ರೂ.ವರೆಗೆ ಮಾರಾಟ
ಮೈಸೂರು: ಅಪಾರ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಹಾಗೂ ಮಧುಮೇಹಿಗಳಿಗೆ ಪ್ರಿಯವಾದ ನೀಲಿ ಸುಂದರಿ ನೇರಳೆ ಹಣ್ಣು ಇದೀಗ ಮೈಸೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಪ್ರಕೃತಿ ನಮಗೆ ಕಾಲಕಾಲಕ್ಕೆ ತಕ್ಕಂತೆ ವಿವಿಧ ಹಣ್ಣುಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಸಿಕ್ಕರೆ, ಜೂನ್ ವರೆಗೂ ಮಾವಿನ ಹಣ್ಣು ಬಾಯಿಯಲ್ಲಿ ನೀರೂರಿಸುತ್ತದೆ. ಇನ್ನೇನು ಮಾವು ಮುಗಿಯಿತು ಎನ್ನುವ ಸಂದರ್ಭದಲ್ಲಿಯೇ ಥಟ್ಟನೆ ಪ್ರತ್ಯಕ್ಷವಾಗಿದೆ ಕಡು ನೀಲಿ ಬಣ್ಣದ ನೇರಳೆ ಹಣ್ಣು. ಅಂದರೆ ಒಂದೊಂದು ಕಾಲಕ್ಕೆ ಒಂದೊಂದು ಬಗೆಯ ಹೂವುಗಳು, ಹಣ್ಣುಗಳು ಸಿಗುತ್ತವೆ.
ವರ್ಷದ ಎಲ್ಲಾ ಸಮಯದಲ್ಲೂ ಸಿಗುವ ಹಣ್ಣು, ತರಕಾರಿಗಳಿಗೆ ಒಂದು ಬಗೆಯ ಗುಣ ಲಕ್ಷಣಗಳು ಕಂಡುಬಂದರೆ ಕೇವಲ ವರ್ಷಕ್ಕೆ ಒಂದು ಬಾರಿ ಸಿಗುವ ಹಣ್ಣುಗಳಲ್ಲಿ ಕೆಲವೊಂದು ವಿಶೇಷವಾದ ಗುಣಲಕ್ಷಣಗಳು ಇರುತ್ತವೆ.
ಅದರಲ್ಲಿ ನೀಲಿ ಸುಂದರಿ ಎಂದೇ ಕರೆಸಿಕೊಳ್ಳುವ ಈ ಹಣ್ಣು ಬಹುಪಯೋಗಿ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ ವೃತ್ತ, ಮೈಸೂರು ವಿವಿ ರಸ್ತೆ, ವಾಲ್ಮೀಕಿ ರಸ್ತೆ, ಕುವೆಂಪುನಗರ, ಎನ್.ಆರ್.ಮೊಹಲ್ಲಾ ಮುಂತಾದ ಪ್ರಮುಖ ಬಡಾವಣೆಗಳ ರಸ್ತೆ ಹಾಗೂ ವೃತ್ತಗಳಲ್ಲಿ ಕಪ್ಪು ಸುಂದರಿಯದ್ದೇ ಕಾರುಬಾರು.
ಕಳೆದ ನಾಲ್ಕು ದಿನಗಳ ಹಿಂದೆ ಕೆಜಿಗೆ ೪೦೦ ರೂ. ಇದ್ದ ನೇರಳೆ ಹಣ್ಣು ಇದೀಗ ೨೦೦ ರೂ.ನಿಂದ ೨೫೦ರೂ.ವರೆಗೆ ಮಾರಾಟವಾಗುತ್ತಿದೆ. ಅದರಲ್ಲಿ ನಾಟಿ ನೇರಳೆ ಹಣ್ಣಿಗೆ ಬೇರೆಯದ್ದೇ ಬೆಲೆ ಎಂದು ಮಾರಾಟಗಾರರು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಬಹುಪಯೋಗಿ ಹಣ್ಣು ನೇರಳೆ!:
ಬೇಸಿಗೆಯ ಅಂತ್ಯ ಹಾಗೂ ಮಳೆಗಾಲದಲ್ಲಿ ಎಲ್ಲೆಡೆ ಸಿಗುವ ನೇರಳೆ ಹಣ್ಣಿನಲ್ಲಿ ಅಪಾರವಾದ ಪೌಷ್ಟಿಕಾಂಶಗಳಿವೆ. ನಾರಿನ ಅಂಶ, ಮೆಗ್ನೀಶಿಯಂ, ಕ್ಯಾರೋಟಿನ್, ಕಬ್ಬಿಣದ ಅಂಶ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಂಶಗಳು ಹೆಚ್ಚು ಸಿಗುತ್ತವೆ. ನೇರಳೆ ಹಣ್ಣಿನ ಬೀಜಗಳಿಂದ ಮಾಡಿದ ಪುಡಿ ಮಧುಮೇಹಿಗಳಿಗೆ ರಾಮಬಾಣ. ಸೀಸನ್‌ನಲ್ಲಿ ನೇರಳೆ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಜೊತೆಗೆ ಕೆಲವು ಆರೋಗ್ಯ ಪ್ರಯೋಜನಗಳು ಸಹ ಸಿಗುತ್ತವೆ.
” ನಾಲ್ಕು ದಿನಗಳ ಹಿಂದೆ ಕೆಜಿಗೆ ೪೦೦ ರೂ. ಬೆಲೆ ಇದ್ದ ನೇರಳೆ ಹಣ್ಣು ಇಂದು ೨೫೦ ರೂ.ಗೆ ಇಳಿದಿದೆ. ಮುಂದೆ ಬೆಲೆ ಇನ್ನಷ್ಟು ಕಡಿಮೆಯಾಗಬಹುದು. ಹೆಚ್ಚು ಮಳೆಯಾಗದ ಕಾರಣ ಹಣ್ಣು ಯಥೇಚ್ಚವಾಗಿ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಣ್ಣು ಸಿಗುತ್ತಿದೆ.”
-ಭಾಗ್ಯಮ್ಮ, ರಮ್ಮನಹಳ್ಳಿ, ಹಣ್ಣು ಮಾರಾಟಗಾರರು




