Mysore
28
light rain

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಹನೂರು| ರಸ್ತೆ ದುರಸ್ತಿಗೆ ಮಾರ್ಟಳ್ಳಿ ಗ್ರಾಮಸ್ಥರ ಆಗ್ರಹ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಿಮೇಡುವಿನಲ್ಲಿರುವ ಸೇಂಟ್ ಮೇರಿಸ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ.

ಮಾರ್ಟಳ್ಳಿ ಗ್ರಾಮದ ಒಂದು ಭಾಗದಿಂದ ಶಾಲಾ-ಕಾಲೇಜಿಗೆ ತೆರಳುವ ಈ ಮುಖ್ಯ ರಸ್ತೆಯು ದಶಕಗಳಿಂದ ಸರಿಯಾದ ನಿರ್ವಹಣೆ ಕಾಣದೆ ಹಾಳಾಗಿದೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳು ಮೇಲೇಳುತ್ತಿದ್ದು, ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಹಲವು ದಿನಗಳಿಂದ ರಸ್ತೆ ದುರಸ್ತಿ ಕಾಮಗಾರಿ ನಡೆಯದ ಕಾರಣ ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಪ್ರತಿದಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೇ ಮಾರ್ಗದಲ್ಲಿ ಶಾಲೆ ಮತ್ತು ಕಾಲೇಜಿಗೆ ತೆರಳುತ್ತಾರೆ. ರಸ್ತೆ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿರುವ ಹತ್ತಾರು ಘಟನೆಗಳು ಈಗಾಗಲೇ ಜರುಗಿವೆ.

ಬೇಸಿಗೆ ಕಾಲದಲ್ಲಿ ವಾಹನಗಳು ಸಂಚರಿಸುವಾಗ ಧೂಳಿನ ಮಯವಾಗಿ ಕಣ್ಣು ಕಾಣದಂತಾಗುತ್ತದೆ. ಇನ್ನು ಮಳೆಗಾಲದಲ್ಲಂತೂ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಕೆಸರುಮಯವಾಗುತ್ತದೆ. ಇದರಿಂದಾಗಿ ನಡೆದಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಲಿಮೇಡು ಮೂಲಕ ಸೇಂಟ್ ಮೇರಿಸ್ ಶಾಲಾ-ಕಾಲೇಜಿಗೆ ತೆರಳುವ ಈ ರಸ್ತೆಯ ದುಃಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನಹರಿಸಬೇಕು. ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

 

Tags:
error: Content is protected !!