Mysore
31
few clouds

Social Media

ಗುರುವಾರ, 14 ಮೇ 2026
Light
Dark

ಮಂಡಿ ಮಾರುಕಟ್ಟೆ : ಹೊರಗೆ ಥಳುಕು-ಒಳಗೆ ಹುಳುಕು

ಶಿಥಿಲಗೊಂಡಿರುವ ಸುಮಾರು 130 ವರ್ಷ ಇತಿಹಾಸ ಹೊಂದಿರುವ ಕಟ್ಟಡ

ಕೆ.ಪಿ.ಮದನ್

ಮೈಸೂರು : ಪುಟ್ಟದಾದರೂ ವಿಶಿಷ್ಟ ವಾಸ್ತು ಶೈಲಿಯಿಂದ ಗಮನಸೆಳೆಯುವ ಮಂಡಿ ಮೊಹಲ್ಲಾ ಮಾರುಕಟ್ಟೆ ಕಟ್ಟಡ ಇದೀಗ ಶಿಥಿಲಾವಸ್ಥೆಗೆ ತಲುಪಿದೆ.

ಡಿಸ್ನಿಲ್ಯಾಂಡ್ ಗೋಪುರ ಶೈಲಿಯನ್ನು ನೆನಪಿಸುವ ಈ ಕಟ್ಟಡ, ಹತ್ತನೇ ಚಾಮರಾಜೇಂದ್ರ ಒಡೆಯರ್ ಕಾಲದ ವಾಸ್ತು ಪರಂಪರೆಯ ಪ್ರತೀಕವಾಗಿದ್ದರೂ, ನಿರ್ವಹಣೆಯ ಕೊರತೆಯಿಂದ ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಿದೆ.

ನಗರದ ಮಂಡಿ ಮೊಹಲ್ಲಾದ ಹೃದಯ ಭಾಗದಲ್ಲಿರುವ ಈ ಮಾರುಕಟ್ಟೆಯ ಮುಖ್ಯದ್ವಾರ, ಅಲಂಕಾರ ಹಾಗೂ ಮೂರು ಅಂತಸ್ತಿನ ಗೋಪುರಗಳು ಗಮನಾರ್ಹವಾದವು. ಮೈಸೂರು ಮಹಾರಾಜ ಕಾಲೇಜು ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯದ ಗೋಪುರಗಳ ಶೈಲಿಯನ್ನೇ ಹೋಲುವ ಈ ಕಟ್ಟಡವು ಸುಮಾರು ೧೩೦ ವರ್ಷದ ಇತಿಹಾಸ ಹೊಂದಿದೆ.

ಅಕ್ಬರ್ ರಸ್ತೆ ಹಾಗೂ ಬೆಂಕಿ ನವಾಬ್ ರಸ್ತೆಯ ಪಕ್ಕದಲ್ಲಿ ‘ಎಲ್’ ಆಕಾರದಲ್ಲಿ ನಿರ್ಮಾಣವಾಗಿರುವ ಕಟ್ಟಡವು ಒಂದು ಕಾಲದಲ್ಲಿ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಹಳೆಯ ಕನ್ನಡ ಮತ್ತು ತಮಿಳು ಚಲನಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಹಿಂದೆ ಮಾರುಕಟ್ಟೆಯನ್ನು ಪ್ರತಿದಿನ ತೊಳೆಯಲಾಗುತ್ತಿತ್ತು. ತುಂಬಾ ಸ್ವಚ್ಛವಾಗಿರುತ್ತಿತ್ತು. ಈಗ ಅದೆಲ್ಲ ನೆನಪಷ್ಟೇ ಎಂದು ಇಲ್ಲಿನ ರಸ್ತೆಬದಿ ವ್ಯಾಪಾರಿ ಮಹೇಶ್ ಬೇಸರ ವ್ಯಕ್ತಪಡಿಸುತ್ತಾರೆ.

ಒಂದೂವರೆ ಅಡಿ ದಪ್ಪನಾದ ಗೋಡೆಗಳು, ಚುರ್ಕಿ ಗಾರೆ, ಕಲ್ಲು ಹಾಗೂ ವಿಶೇಷ ಗಾತ್ರದ ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾದ ಈ ಕಟ್ಟಡವು ಗಟ್ಟಿತನ ಮತ್ತು ಸೌಂದರ್ಯಕ್ಕೆ ಹೆಸರಾಗಿತ್ತು. ಆದರೆ ನಿರ್ವಹಣೆಯ ಕೊರತೆಯಿಂದ ಸಜ್ಜಾಗಳು ಹಾಳಾಗಿದ್ದು, ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಮಳಿಗೆಗಳ ಹೆಂಚುಗಳು ಒಡೆದುಹೋಗಿದ್ದು, ಮಳೆಗಾಲದಲ್ಲಿ ನೀರು ಸೋರುವುದು ಸಾಮಾನ್ಯವಾಗಿದೆ.

ಪಾಲಿಕೆಗೆ ಶುಲ್ಕ ನೀಡಿ ವ್ಯಾಪಾರ ಮಾಡುವವರು ಮೂಲ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಶೌಚಾಲಯಗಳ ನಿರ್ವಹಣೆಯ ಕೊರತೆಯಿಂದ ಅಲ್ಲಿಗೆ ಕಾಲಿಡುವುದೇ ಕಷ್ಟಕರವಾಗಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದೇ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿಯಲು ಕಾರಣ ಎಂದು ಸ್ಥಳೀಯ ವ್ಯಾಪಾರಿ ಅಭಿಪ್ರಾಯಪಡುತ್ತಾರೆ.

ನಗರದ ಐತಿಹಾಸಿಕ ಗುರುತಾಗಿರುವ ಮಂಡಿ ಮಾರುಕಟ್ಟೆಯ ಪುನಶ್ಚೇತನಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮಂಡಿ ಮಾರುಕಟ್ಟೆಯು ವಿಶಾಲವಾದ ಪ್ರವೇಶ ದ್ವಾರ ಮತ್ತು ಎತ್ತರದ ಸ್ವಾಗತ ಕಮಾನು ಹೊಂದಿದ್ದು, ಕಲ್ಲು-ಚಪ್ಪಡಿ ನೆಲಹಾಸನ್ನು ಹೊಂದಿದ್ದು, ದಿನಗೂಲಿ ಮಾಡುವವರು, ಬಡ-ಮಧ್ಯಮ ವರ್ಗದವರ ದೈನಂದಿನ ಅಗತ್ಯತೆಗಳನ್ನು ಈ ಮಾರುಕಟ್ಟೆ ಪೂರೈಸುತ್ತಿದೆ. ಇದು ಸಾಂಪ್ರದಾಯಿಕ ಸ್ವರೂಪದ್ದಾಗಿದ್ದು, ಇಂದಿನ ಮಾಲ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿದೆ. ಸುಮಾರು ೧೫ ವರ್ಷಗಳ ಹಿಂದೆ ೭೫ ಲಕ್ಷ ರೂ. ವೆಚ್ಚದಲ್ಲಿ ಮಾಂಸ ಮತ್ತು ಮೀನು ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗಿದ್ದರೂ ವ್ಯಾಪಾರ ಮಾಡಲು ಯಾರೂ ಮುಂದಾಗುತ್ತಿಲ್ಲ, ಶತಮಾನದ ಹಳೆಯ ಕಟ್ಟಡದ ಎದುರು ಅದು ಕೂಡ ಹಳತಾಗಿ ಕಾಣುತ್ತಿದೆ. ಮಧ್ಯಭಾಗದಲ್ಲಿ ಹೊಸ ಛಾವಣಿ ಅಳವಡಿಸಲಾಗಿದ್ದರೂ ಅದು ಮೂಲ ಸೌಂದರ್ಯವನ್ನೇ ಮಸುಕಾಗಿಸಿದೆ.

Tags:
error: Content is protected !!