Mysore
23
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ತಮಿಳುನಾಡಿನಲ್ಲಿ ವಿಜಯ್‌ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ : ಕೇಂದ್ರ ಸಚಿವ ಎಚ್‌ಡಿಕೆ

ಹಾಸನ : ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವರದಿಗಳು ಹರಿದಾಡುತ್ತಿದ್ದವು. ಆದರೆ ವಿಜಯ್‌ ಅವರ ಈಗಿನ ಸಾಧನೆಯನ್ನು ಯಾರು ನಿರೀಕ್ಷಿಸಿರಲಿಲ್ಲ. ಅದು ಎಲ್ಲರಿಗೂ ಅಚ್ಚರಿ ತಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘60 ವರ್ಷಗಳ ಕಾಲ ಡಿಎಂಕೆ-ಎಐಎಡಿಎಂಕೆ ಎಂಬ ಎರಡು ಪ್ರಾದೇಶಿಕ ಪಕ್ಷಗಳು ಆಳ್ವಿಕೆ ನಡೆಸಿದ ತಮಿಳುನಾಡಿನಲ್ಲಿ ಮತದಾರರು ಈ ಬಾರಿ ಹೊಸ ಪರ್ಯಾಯವನ್ನು ಆರಿಸಿಕೊಂಡಿದ್ದಾರೆ. ಇದು ಕೇವಲ ಸಿನಿಮಾ ಗ್ಲಾಮರ್‌ನ ಗೆಲುವಲ್ಲ. ಜನಪರ ಆಡಳಿತದ ನಿರೀಕ್ಷೆಯ ಫಲ’ ಎಂದರು.

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ‘ದ್ರಾವಿಡ ರಾಜಕಾರಣಕ್ಕೆ ದೊಡ್ಡ ಸಂದೇಶ’ ಆದಂತಿದೆ. ‘ಬಹುಮತ ಇಲ್ಲದಿದ್ದರೂ ಏಕೈಕ ದೊಡ್ಡ ಪಕ್ಷವಾಗಿ ಟಿವಿಕೆ ಸರ್ಕಾರ ರಚನೆ ಹಕ್ಕು ಮಂಡಿಸಿದೆ. ತಮಿಳುನಾಡಿನ ಜನರ ಹಿತದೃಷ್ಟಿಯಿಂದ ಸ್ಥಿರ ಸರ್ಕಾರ ಬರಬೇಕು. ಕಾಂಗ್ರೆಸ್ 5 ಸ್ಥಾನಗಳ ಬೆಂಬಲ ನೀಡಿದೆ. ಸಣ್ಣ ಪಕ್ಷಗಳು ರಾಷ್ಟ್ರೀಯ ಹಿತದೃಷ್ಟಿಯಿಂದ ಏನು ನಿರ್ಧಾರ ಕೈಗೊಳ್ಳುತ್ತವೆಯೊ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ತಮಿಳುನಾಡಿನ ರಾಜಕಾರಣದಲ್ಲಿ ಸಿನಿಮಾದ ಪ್ರಭಾವ ಬಹಳ ಹಿಂದಿನಿಂದಲೂ ಇದೆ. ಈಗಲೂ ಅದೇ ಪ್ರಭಾವ ಕಾಣಿಸಿದೆ. ಹೊಸ ಮುಖಕ್ಕೆ ಅಧಿಕಾರ ನೀಡಬೇಕು ಎಂಬ ಮನೋಭಾವದಿಂದ ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

‘ಕರ್ನಾಟಕಕ್ಕೂ ಪಾಠ’
‘ಪ್ರಾದೇಶಿಕ ಪಕ್ಷಗಳು ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳದಿದ್ದರೆ ಪರ್ಯಾಯ ಹುಟ್ಟಿಕೊಳ್ಳುತ್ತದೆ. ತಮಿಳುನಾಡಿನ ಫಲಿತಾಂಶ ಕರ್ನಾಟಕಕ್ಕೂ ಪಾಠ. ನಾವು ಜೆಡಿಎಸ್ ಅನ್ನು ಜನರ ವಿಶ್ವಾಸ ಗಳಿಸುವ ಪಕ್ಷವನ್ನಾಗಿ ಕಟ್ಟುತ್ತೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.

234ರಲ್ಲಿ 108 ಸ್ಥಾನ ಟಿವಿಕೆಗೆ
ಏಪ್ರಿಲ್ 23ರಂದು ನಡೆದ ಚುನಾವಣೆಯಲ್ಲಿ 85.12% ಮತದಾನವಾಗಿತ್ತು. ಮೇ 4ರ ಫಲಿತಾಂಶದಲ್ಲಿ 2024ರಲ್ಲಿ ಸ್ಥಾಪನೆಯಾದ ಟಿವಿಕೆ 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿದೆ. ಡಿಎಂಕೆ 59, ಎಐಎಡಿಎಂಕೆ 47 ಸ್ಥಾನಗಳಿಗೆ ಕುಸಿದಿದೆ. ಬಹುಮತಕ್ಕೆ 118 ಸ್ಥಾನ ಬೇಕಿದ್ದು, ಟಿವಿಕೆ 10 ಸ್ಥಾನ ಕಡಿಮೆ ಹೊಂದಿದೆ.

Tags:
error: Content is protected !!