ಮಂಡ್ಯ : ತಾಲೂಕಿನ ಬೂದನೂರು ಗ್ರಾಪಂ ವ್ಯಾಪ್ತಿಯ ಬ್ಯಾಂಕ್ ಕಾಲೋನಿ ಪಂಚಾಯತಿ ರಸ್ತೆಗೆ 41 ಲಕ್ಷ ರೂ ಅಕ್ರಮ ಪರಿಹಾರ ವಿತರಣೆ ಸಾಬೀತಾಗಿದ್ದು ವಸೂಲಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದ್ದಾರೆ ಎಂದು ಕರುನಾಡ ಸಂಘಟನೆಯ ಎಂ.ಬಿ.ನಾಗಣ್ಣ ಗೌಡ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (NH-275)ರ ಭೂಸ್ವಾಧೀನದಲ್ಲಿ ಸರ್ಕಾರಿ ರಸ್ತೆಗೆ ಅಕ್ರಮ ಪರಿಹಾರ ಪಡೆದವರು, ಸಹಕರಿಸಿದವರ ವಿರುದ್ಧ ಕ್ರಮಕ್ಕೆ ಡಿಸಿ ಡಾ. ಕುಮಾರ ಆದೇಶಿಸಿದ್ದಾರೆ. ಮಂಡ್ಯ ತಾಲೂಕು ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂದನೂರು ಸರ್ವೇ ನಂ. 382/7ರಲ್ಲಿ ಮಂಡ್ಯ ನಗರ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಿಸಿರುವ ಬ್ಯಾಂಕ್ ಕಾಲೋನಿ ರಸ್ತೆ ಸರ್ಕಾರಿ ಆಸ್ತಿಯಾಗಿದೆ. ಅದನ್ನು ನಿಯಮಬಾಹಿರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂ. 41,41 ಲಕ್ಷ ಅಕ್ರಮ ಪರಿಹಾರ ಪಡೆದಿರುವುದು ಸಾಬೀತಾಗಿದೆ. ಅಕ್ರಮದಲ್ಲಿ ಬೂದನೂರು ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳು ಭಾಗಿಯಾಗಿದ್ದಾರೆ. ನೂರಾರು ಕೋಟಿ ಅಕ್ರಮ ಪರಿಹಾರ ವಿತರಿಸಿ ಸರ್ಕಾರವನ್ನು ವಂಚಿಸಿರುವುದಾಗಿ ಈ ಘಟನೆಯಿಂದ ತಿಳಿದು ಬರುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ರಾಷ್ಟ್ರೀಯ ಹೆದ್ದಾರಿ-275 ಬೆಂಗಳೂರು-ಮೈಸೂರು ವಿಭಾಗ ರಾಮನಗರ ಹಾಗೂ ಮಂಡ್ಯ ಜಿಪಂ ಸಿಇಒ ಅವರಿಗೆ ಪತ್ರ ಬರೆದಿರುವ ಡಿಸಿ ಡಾ. ಕುಮಾರ ಅವರು ಅಕ್ರಮ ಪರಿಹಾರ ವಸೂಲಿ ಹಾಗೂ ನಿರ್ಲಕ್ಷ್ಯ ವಹಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ವಹಿಸುವಂತೆ ಸೂಚಿಸಿದ್ದಾರೆ ಎಂದರು.
ನಾಗರೀಕ ಸೌಲಭ್ಯಕ್ಕಾಗಿ ಮೀಸಲಿರಿಸಿದ ಜಾಗಕ್ಕೆ ಭೂಸ್ವಾಧೀನದ ಪರಿಹಾರ ಪಾವತಿಸುವ ಸಂದರ್ಭದಲ್ಲಿ ಬೂದನೂರು ಗ್ರಾಮ ಪಂಚಾಯತಿಗೆ ಪರಿಹಾರ ಪಾವತಿಸದೇ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಮಂಡಳಿಯವರಿಗೆ ಪರಿಹಾರ ವಿತರಿಸಿ ಕಾನೂನುಬಾಹಿರ ಹಾಗೂ ಕರ್ತವ್ಯಲೋಪ ಎಸಗಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಅಕ್ರಮದಲ್ಲಿ ಬೂದನೂರು ಗ್ರಾಮ ಪಂಚಾಯತಿಗೆ ಪರಿಹಾರ ಪಡೆಯಲು ವಿಫಲವಾಗಿರುವ ಕುರಿತು ಅಂದಿನ ಪಿಡಿಒ ವಿನಯ್ ಕುಮಾರ್ (ಹಾಲಿ ಕೆರಗೋಡು ಗ್ರಾಪಂ ಪಿಡಿಒ) ಅವರ ಕಾರ್ಯವೈಖರಿ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಅನ್ವಯ ಉಪ ವಿಭಾಗಾಧಿಕಾರಿ ಅನ್ಯಕ್ರಾಂತ ಆದೇಶದಲ್ಲಿ ನಾಗರೀಕ ಸೌಲಭ್ಯಕ್ಕಾಗಿ ಮೀಸಲಿರಿಸಿದ ಯಾವುದೇ ಸ್ವತ್ತುಗಳು ಸ್ಥಳೀಯ ಸಂಸ್ಥೆ ಸ್ವತ್ತಾಗಿದ್ದು ಖಾಸಗಿ ಸ್ವತ್ತಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಡಾ ಅನುಮೋದನೆ ಗೋಲ್ ಮಾಲ್ ಮಾಡಿ ಅಂದಿನ ಅಧ್ಯಕ್ಷ ಬೂದನೂರು ಸ್ವಾಮಿ ಹಾಗೂ ಕಾರ್ಯದರ್ಶಿ ನಾಗರಾಜು ಅವರು ಗ್ರಾಪಂ ವಿನ್ಯಾಸ ನಕ್ಷೆ ಅನುಮೋದನೆ ನೀಡಿ ಅಕ್ರಮ ಎಸಗಿದ್ದಾರೆ. ಇದಲ್ಲದೆ ಉಪ ವಿಭಾಗಾಧಿಕಾರಿ ಅನ್ಯಕ್ರಾಂತಗೊಂಡ ಭೂಮಿ ದಾಖಲೆ (RTC)ಗೆ ನಮೂದು ಮಾಡದಿರುವ ಹಿನ್ನಲೆ ಈ ಅಕ್ರಮಕ್ಕೆ ದಾರಿಯಾಗಿದೆ ಎಂದು ಹೋರಾಟಗಾರ ಸತೀಶ್ ಬೂಸ ವಿವರಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಸಿ. ಪುಟ್ಟಸ್ವಾಮಿ, ಚಂದ್ರಣ್ಣ, ರಾಜೇಂದ್ರ, ಕುಳ್ಳ, ಶಶಿಕುಮಾರ್ ಹಾಜರಿದ್ದರು.
ಹಕ್ಕೊತ್ತಾಯಗಳು…
1. ಜಿಲ್ಲಾಧಿಕಾರಿಗಳು ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯ ಹಾಗೂ ಪಂಚಾಯತಿ ಖಾತೆಗಳಲ್ಲಿ ಈವರೆಗೆ ಪರಿಹಾರ ಪಡೆದಿರುವವರ ಪಟ್ಟಿ ಬಿಡುಗಡೆ ಮಾಡಬೇಕು.
2. ಪರಿಹಾರಕ್ಕೂ ಮುನ್ನ ಮಾಡಿರುವ ಜಿಪಿಎಸ್ ಸ್ಯಾಟಲೈಟ್ ಸರ್ವೆ ದಾಖಲೆ ಪರಿಶೀಲಿಸಬೇಕು.
3. ಹಾಲಿ ಪರಿಹಾರ ಪಡೆದಿರುವ ಕೃಷಿ ಭೂಮಿ, ನಿವೇಶನ, ವಸತಿಗಳ ಆಸ್ತಿ ದಾಖಲೆಯನ್ನು ರಾಷ್ಟ್ರಪತಿಗಳ ಹೆಸರಿಗೆ ವರ್ಗಾಯಿಸಲು ಕ್ರಮ ವಹಿಸಬೇಕು.
4. ಅಕ್ರಮದಲ್ಲಿ ಭಾಗಿಯಾಗಿರುವ ಈ ಹಿಂದಿನ ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒ ಹಾಗೂ ಸಂಬಂಧಿಸಿದ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
5. ಸದರಿ ಪರಿಹಾರ ಬೂದನೂರು ಗ್ರಾಮ ಪಂಚಾಯತಿ ಇ ಸ್ವತ್ತು ಸಂಖ್ಯೆ 152100405200220045 ಎಂಬ ಸಂಖ್ಯೆಯಲ್ಲಿ ವಿತರಣೆಯಾಗಿದೆ. ಸದ್ಯ ಅದನ್ನು ಅಳಿಸಿ ಹಾಕಿರುವ ಕುರಿತು ಜಿಪಂ ಸಿಇಒ ಅವರಿಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ. ಅದನ್ನು ಜಿಪಂ ಹಂತದಲ್ಲಿ ತನಿಖೆ ಮಾಡಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.





