ವಾಷಿಂಗ್ಟನ್ : ನಾಸಾದ ಐತಿಹಾಸಿಕ ಆರ್ಟೆಮಿಸ್-2 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರನನ್ನು ಸುತ್ತುವಳಿ ಮಾಡಿ ಭೂಮಿಗೆ ವಾಪಸಾಗುವ ಮೊದಲ ಕ್ರೂಡ್ ಮಿಷನ್‌ನ ನಾಲ್ವರು ಗಗನಯಾತ್ರಿಗಳು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ.
ಸುಮಾರು 50 ವರ್ಷಗಳ ಬಳಿಕ ಚಂದ್ರನತ್ತ ಪ್ರಯಾಣ ಮಾಡಿ, 10 ದಿನಗಳ ಸುತ್ತಾಟ ನಡೆಸಿ ಭೂಮಿಗೆ ವಾಪಸ್ ಆಗುವ ನಾಸಾ ಯೋಜನೆ ‘ಆರ್ಟಿಮಿಸ್ 2’ ಯಶಸ್ವಿಯಾಗಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತು ಸಾಗಿದ್ದ ಓರಿಯನ್ ನೌಕೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಇಂದು ಮುಂಜಾನೆ 5:37ರ ಸುಮಾರಿಗೆ ಇಳಿಯಿತು.
ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಮಾಕ್ 33 – ಅಥವಾ ಶಬ್ದದ ವೇಗಕ್ಕಿಂತ 33 ಪಟ್ಟು ವೇಗದಲ್ಲಿ ಪ್ರಯಾಣಿಸುತ್ತಾ ಭೂಮಿಯ ವಾತಾವರಣದಲ್ಲಿ ಲ್ಯಾಂಡ್ ಆಗಿದ್ದಾರೆ.
ಈ ಮಿಷನ್ ಅಪೋಲೋ 17 ನಂತರ (1972) 50 ವರ್ಷಗಳ ಬಳಿಕ ಚಂದ್ರನತ್ತ ಮಾನವರು ಕಳುಹಿಸಲಾದ ಮೊದಲ ಮಿಷನ್ ಆಗಿದೆ. ಏಪ್ರಿಲ್ 1ರಂದು ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ SLS ರಾಕೆಟ್ ಮೂಲಕ ಉಡಾವಣೆಯಾದ ಓರಿಯನ್ ನೌಕೆ, ಚಂದ್ರನ ದೂರದ ಕಕ್ಷೆಯನ್ನು ತಲುಪಿ, ಭೂಮಿಯಿಂದ ಇದುವರೆಗಿನ ಅತ್ಯಧಿಕ ದೂರಕ್ಕೆ (ಲೂನಾರ್ ಫ್ಲೈಬೈ) ಮಾನವರನ್ನು ಕಳುಹಿಸಿತು.
ಈ ಮಿಷನ್ ಆರ್ಟೆಮಿಸ್ ಕಾರ್ಯಕ್ರಮದ ಮುಂದಿನ ಹಂತಕ್ಕೆ ಅಡಿಪಾಯ ಹಾಕಿದೆ. ಆರ್ಟೆಮಿಸ್ 3 ಮೂಲಕ 2028ರಲ್ಲಿ ಚಂದ್ರನ ಮೇಲ್ಮೈಗೆ ಮಾನವರು ಇಳಿಯುವ ಗುರಿ ಹೊಂದಲಾಗಿದೆ. ಇದು ಮುಂದೆ ಮಂಗಳ ಗ್ರಹದತ್ತ ಮಾನವ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಾಸಾ ಹೇಳಿದೆ.





