Mysore
34
few clouds

Social Media

ಮಂಗಳವಾರ, 14 ಏಪ್ರಿಲ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ಅಂಕಣ ; ರಾಮಾಯಣದ ರಾವಣ, ಶ್ರೀ ಹನುಮಾನ್‌ ಹನುಮ

ಕನ್ನಡ ನಟರಿಬ್ಬರ ಸೀಮೋಲಂಘನ

ನಿನ್ನೆ (ಶುಕ್ರವಾರ) ಹಿಂದಿಯಲ್ಲಿ ತಯಾರಾಗುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ನೋಟ ಲೋಕಾರ್ಪಣೆ ಆಗಿದೆ. ಇತ್ತೀಚೆಗಷ್ಟೇ ‘ಶ್ರೀ ಹನುಮಾನ್’ ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು, ಇದೀಗ ಚಿತ್ರೀಕರಣ ಆರಂಭವಾಗುತ್ತಿದೆ. ಈ ಎರಡೂ ಚಿತ್ರಗಳಲ್ಲಿ ಕನ್ನಡ ನಟರಿಬ್ಬರ ಸೀಮೋಲ್ಲಂಘನದ ರೀತಿ ಬಹಳ ವಿಶೇಷ.

ಹೊಂಬಾಳೆ ಸಂಸ್ಥೆ ನಿರ್ಮಿಸಿದ ‘ಕೆಜಿಎಫ್ ೧’ ಮತ್ತು ‘ಕೆಜಿಎಫ್ ೨’ ಚಿತ್ರಗಳು ಕನ್ನಡ ಚಿತ್ರೋದ್ಯಮದ ಮಾರುಕಟ್ಟೆಯ ಸಾಧ್ಯತೆಗೆ ಕನ್ನಡಿ ಹಿಡಿಯಿತು. ಭಾರತದ ಇತರ ಭಾಷಾ ಚಿತ್ರೋದ್ಯಮಿಗಳನ್ನು ಇತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರಗಳವು. ಅವುಗಳ ಬೆನ್ನಲ್ಲೇ ಇನ್ನೆರಡು ಚಿತ್ರಗಳ ಜೈತ್ರಯಾತ್ರೆ. ‘ಕಾಂತಾರ : ಒಂದು ದಂತಕತೆ’ ಮತ್ತು ‘ಕಾಂತಾರ: ಒಂದು ದಂತಕತೆ – ಅಧ್ಯಾಯ ೧’. ಈ ಎರಡೂ ಚಿತ್ರಗಳು ಕೂಡ ವಿಶ್ವಾದ್ಯಂತ ಗಮನ ಸೆಳೆದವು. ಅದರಲ್ಲೂ ಕಾಂತಾರ ದ್ವಯ ನೆಲಮೂಲದ ಕಥೆಗೆ ಹೆಚ್ಚು ವ್ಯಾಪ್ತಿ ಇದೆ ಎನ್ನುವುದನ್ನು ಹೇಳಿತು.

ವಿಷಯ ಅದಲ್ಲ, ಈ ಎರಡೂ ಚಿತ್ರಗಳ ಮುಖ್ಯ ಪಾತ್ರಧಾರಿಗಳಿಗೆ ಮುಂದೆ ಸಿಕ್ಕ ಅವಕಾಶ ಮತ್ತು ಅವರು ಅದನ್ನು ಬಳಸಿಕೊಂಡ ರೀತಿ. ‘ಕೆಜಿಎಫ್’, ನಟ ಯಶ್ ಅವರನ್ನೂ, ‘ಕಾಂತಾರ’, ಅದರ ನಿರ್ದೇಶಕ, ನಟ ರಿಷಭ್ ಅವರನ್ನೂ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರ ಸಾಲಿಗೆ ತಂದು ನಿಲ್ಲಿಸಿದವು. ಮಾತ್ರವಲ್ಲ, ಅವಕಾಶಗಳ ಸುರಿಮಳೆ ಸರಿಯಿತು. ‘ಕಾಂತಾರ’ ವರ್ಷದ ಅತ್ಯುತ್ತಮ ಮನರಂಜನೆಯ ಚಿತ್ರ ಪ್ರಶಸ್ತಿ, ರಿಷಭ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟಿತು. ಅವಕಾಶಗಳನ್ನು ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಆರಿಸಿಕೊಂಡರು.

ಕೆಜಿಎಫ್ ದಿನಗಳಲ್ಲೇ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಮಾತು ಕೇಳಿಬರುತ್ತಿತ್ತು. ಅದರಲ್ಲಿ ಯಶ್ ಅವರು ರಾವಣನ ಪಾತ್ರ ನಿರ್ಹಿಸುವ ಪ್ರಸ್ತಾಪವೂ ಇತ್ತು. ಯಶ್ ಅಭಿಮಾನಿ ಬಳಗಕ್ಕೆ ಆಗ ಇದು ಇಷ್ಟವಾಗದೆ ಇದ್ದ ಸುದ್ದಿ ಎನ್ನುವುದೂ ಸಾಮಾಜಿಕ ತಾಣಗಳಲ್ಲಿ ಪ್ರಕಟವಾಯಿತು. ಕಾರಣ ಇಷ್ಟೇ. ರಾಮ ನಾಯಕ; ರಾವಣ ಪ್ರತಿನಾಯಕ! ನಾಯಕ ಪ್ರತಿನಾಯಕ ಪಾತ್ರ ನಿರ್ವಹಿಸುವುದೇ!

ಆಗಲೇ ಅವರ ಸಂಭಾವನೆಯ ಕುರಿತ ಪ್ರಸ್ತಾಪವೂ ಇತ್ತು. ಎರಡು ಭಾಗಗಳಲ್ಲಿ ತೆರೆಗೆ ಬರಲಿರುವ ‘ರಾಮಾಯಣ’- ೨೦೨೬ರ ದೀಪಾವಳಿಗೆ ಮೊದಲ ಭಾಗ, ೨೦೨೭ರ ದೀಪಾವಳಿಗೆ ಎರಡನೇ ಭಾಗ. ಯಶ್ ಸಂಭಾವನೆ ಬಹುಕೋಟಿಯಲ್ಲಿ ಎಂದೂ ಹೇಳಲಾಯಿತು.

ಇದೀಗ ರಾಮಾಯಣದ ಮೊದಲ ನೋಟದಲ್ಲಿ ನಿರ್ಮಾಣ ಸಂಸ್ಥೆಗಳು ಯಾವುವು ಎಂದು ಹೇಳಿದೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಬಹು ಕೋಟಿ ವೆಚ್ಚದ ಚಿತ್ರಗಳ ನಿರ್ಮಾಣದ ವೇಳೆ, ಅಧಿಕ ಸಂಭಾವನೆ ಪಡೆಯುವ ಜನಪ್ರಿಯ ನಟರು, ತಾವೂ ನಿರ್ಮಾಣ ಪಾಲುದಾರರಾಗುವುದು ಇತ್ತೀಚಿನ ಹೊಸ ಬೆಳವಣಿಗೆ.

ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ‘ರಾಮಾಯಣ’ ಮಾತ್ರವಲ್ಲದೆ, ಕೆವಿಎನ್ ಸಂಸ್ಥೆ ನಿರ್ಮಿಸುತ್ತಿರುವ ‘ಟಾಕ್ಸಿಕ್’ ಚಿತ್ರಕ್ಕೂ ನಿರ್ಮಾಣ ಪಾಲುದಾರ ಸಂಸ್ಥೆ. ನಿರ್ಮಾಣ ಮಾತ್ರವಲ್ಲದೆ, ಕಥೆ, ಚಿತ್ರಕಥೆಗಳಲ್ಲೂ ನಿರ್ದೇಶಕಿ ಗೀತೂ ಮೋಹನ್‌ದಾಸ್ ಅವರಿಗೆ ನೆರವಾಗಿದ್ದಾರೆ. ಸೃಜನಾತ್ಮಕ ನೆರವು ಬೇರೆ, ನಿರ್ಮಾಣ ಪಾಲುದಾರಿಕೆ ಬೇರೆ.

ರಿಷಭ್ ಶೆಟ್ಟಿ ಫಿಲಂಸ್ ಕೂಡ, ‘ಶ್ರೀ ಹನುಮಾನ್’ ಚಿತ್ರದ ನಿರ್ಮಾಣದಲ್ಲಿ ಜೊತೆಯಾಗಿದೆ. ಅದರಲ್ಲಿ ಅವರದು ಶೀರ್ಷಿಕಾ ಪಾತ್ರ. ಮೊದಲೇ ಪ್ರಸ್ತಾಪ ಮಾಡಿದ ಹಾಗೆ, ಕಲಾವಿದರ ಸಂಭಾವನೆಯ ಪ್ರಮಾಣ, ಚಿತ್ರನಿರ್ಮಾಣ ವೆಚ್ಚದಲ್ಲಿ ಹೆಚ್ಚು ಭಾಗವನ್ನು ಬಯಸಿದಾಗ, ಇಂತಹ ಪಾಲುದಾರಿಕೆ ಇರುತ್ತದೆ. ಅಲ್ಲಿ ಬೇರೆ ಲೆಕ್ಕಾಚಾರಗಳಲ್ಲ. ಚಿತ್ರೀಕರಣ ಸುಗಮವಾಗಿ ಸಾಗಲು ಇದು ನೆರವಾಗುತ್ತದೆ ಎನ್ನುವುದು ಇಂತಹ ಚಿತ್ರಗಳ ನಿರ್ಮಾಪಕರ ಅಂಬೋಣ. ಚಿತ್ರ ತೆರೆಕಂಡ ಮೇಲೆ, ತಮ್ಮ ಪಾಲಿನ ಸಂಭಾವನೆ, ಮತ್ತು ಒಪ್ಪಂದದ ಪ್ರಕಾರ ಲಾಭದ ಭಾಗ ಪಡೆಯುವುದು ನಡೆಯುತ್ತದೆ.

ತಾರೆಯರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರಗಳನ್ನು ನಿರ್ಮಿಸುವುದು ಹೊಸದೇನೂ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಲಾಗಾಯ್ತಿನಿಂದಲೂ ಅದು ಇದೆ. ಈಗಲೂ ಇದೆ. ರಾಜಕುಮಾರ್ ಕುಟುಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಈ ಹಿನ್ನೆಲೆಯಲ್ಲಿಯೇ. ನಿರ್ಮಾಪಕರು, ರಾಜಕುಮಾರ್ ಅಭಿಯದ ಚಿತ್ರಗಳು ಲಾಭ ಮಾಡುತ್ತಿಲ್ಲ, ನಷ್ಟ ಆಗುತ್ತಿದೆ, ಎಂದು ಹೇಳಿದ್ದನ್ನು ಕೇಳಿದ ಅವರು, ನಮ್ಮಿಂದಾಗಿ ಬೇರೆಯವರಿಗೆ ತೊಂದರೆ ಆಗಬಾರದು ಎಂದರಂತೆ. ಪಾರ್ವತಮ್ಮ ರಾಜ್‌ಕುಮಾರ್ ಅವರೇ ಚಿತ್ರ ನಿರ್ಮಿಸಲು ಆರಂಭಿಸಿದರು. ರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅವರು ನಿರ್ಮಿಸಿದ ಯಾವ ಚಿತ್ರವೂ ಸೋಲಲಿಲ್ಲ. ನಂತರ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಇವರಿಗಾಗಿ ಚಿತ್ರಗಳನ್ನು ನಿರ್ಮಿಸಿದರು. ಅವರು ನಿರ್ಮಿಸಿದ ೮೫ಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲು ಕಂಡದ್ದು ಒಂದೆರಡು ಇರಬಹುದು. ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ನಿರ್ಮಾಪಕ, ವಿತರಕರಾಗಿದ್ದವರು. ರವಿಚಂದ್ರನ್ ಅವರಿಗೆ ಆ ಹಿನ್ನೆಲೆ ಇತ್ತು. ತಾವೂ ನಿರ್ಮಾಪಕರಾದರು.

ಸೆಲ್ಯುಲಾಯಿಡ್ ದಿನಗಳಲ್ಲಿ, ನಿರ್ಮಾಣ ವೆಚ್ಚ ಕೆಲವು ಲಕ್ಷಗಳಿಗೆ ಸೀಮಿತವಾಗಿತ್ತು. ಕಲಾವಿದರ ಸಂಭಾವನೆ ಕೂಡ ಕಡಿಮೆಯೇ. ಜಿಲ್ಲಾವಾರು ಹಂಚಿಕಾ ವ್ಯವಸ್ಥೆ ಆರಂಭವಾಯಿತು. ಆಗ ಜನಪ್ರಿಯ ನಟರಲ್ಲಿ ಕೆಲವರು ಯಾವುದಾದರೂ ಒಂದು ಪ್ರದೇಶದ ಹಂಚಿಕೆದಾರರು ನೀಡುವ ಮೊತ್ತವನ್ನು ತಮ್ಮ ಸಂಭಾವನೆಯಾಗಿ ಕೇಳಿದ್ದಿದೆ. ಚಿತ್ರೀಕರಣ ಸಂದರ್ಭದಲ್ಲಿ ನಿರ್ಮಾಪಕರಿಗೆ ಅದು ಅನುಕೂಲವೂ ಆಗುತ್ತಿತ್ತು. ಜಿಲ್ಲಾವಾರು ಹಂಚಿಕೆಯ ಬೆನ್ನಲ್ಲೇ ದೂರದರ್ಶನದ ಆಗಮನ. ಟಿವಿಯಲ್ಲಿ ಪ್ರಸಾರದ ಮೂಲಕ ನಿರ್ಮಾಪಕರಿಗೆ ಇನ್ನೊಂದು ಆದಾಯದ ಮೂಲ ಸೇರಿಕೊಂಡಿತು. ನಾಯಕ ನಟರ ಸಂಭಾವನೆಯೂ ಹಂತಹಂತವಾಗಿ ಏರತೊಡಗಿತು. ಟಿವಿ ಹಕ್ಕಿನಿಂದ ಬರುವ ಮೊತ್ತವನ್ನು ತಮ್ಮ ಸಂಭಾವನೆಯಾಗಿ ಬೇಡಿಕೆ ಇಡುತ್ತಿದ್ದ ಕಲಾವಿದರೂ ಇದ್ದರು.

ಇವೆಲ್ಲ ಬಹುತೇಕ ಸೆಲ್ಯುಲಾಯಿಡ್ ದಿನಗಳ ಮಾತು. ಸಿನಿಮಾ ಮಾಧ್ಯಮ ಡಿಜಿಟಲ್‌ಗೆ ಹೊರಳುತ್ತಲೇ ಚಿತ್ರೋದ್ಯಮದಲ್ಲಿ ಎಲ್ಲ ವ್ಯವಹಾರಗಳ ರೀತಿಯೂ ಬದಲಾಗತೊಡಗಿತು. ಕೋವಿಡ್ ನಂತರ ಒಟಿಟಿ ತಾಣಗಳ ಮೇಲ್ಮೆ, ಹಿಂದಿಯೇತರ ಭಾಷಾ ಚಿತ್ರಗಳ ಮೇಲೆ ಪ್ರಹಾರ ಮಾಡಿದೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಒಂದು ಭಾಷೆಯಲ್ಲಿ ತಯಾರಾಗಿ ಇತರ ಭಾಷೆಗಳಿಗೆ ಡಬ್ ಆಗುವ ಚಿತ್ರಗಳಿಂದ ಹೆಚ್ಚು ಅಪಾಯ ಆಗಿರುವುದು ಕನ್ನಡ ಚಿತ್ರೋದ್ಯಮಕ್ಕೆ ಎನ್ನುವುದನ್ನು ಗಾಂಽನಗರದ ಮಂದಿ ಹೇಳುತ್ತಾರೆ. ಹಿಂದಿ ಸೇರಿದಂತೆ ಇತರ ಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳು ಚಿತ್ರಮಂದಿರಗಳಲ್ಲಿ ತೆರೆಗೆ ಬರುವುದು ಕಡಿಮೆ ಆದರೂ, ಒಟಿಟಿ ತಾಣಗಳಲ್ಲಿ ಅವುಗಳದೇ ಪಾರುಪತ್ಯ. ಕಿರುತೆರೆ ಸರಣಿಗಳದೂ ಅದೇ ದಾರಿ. ಪ್ರಸಾರವಾಗುತ್ತಿರುವ ಸರಣಿಗಳಲ್ಲಿ ಪ್ರತಿಶತ ೫೦ಕ್ಕಿಂತ ಹೆಚ್ಚು ಡಬ್ ಆದ ಸರಣಿಗಳೇ ಎನ್ನುತ್ತಿವೆ ಮೂಲಗಳು.

ಯಶ್, ರಿಷಭ್ ತಮ್ಮ ನಿರ್ಮಾಣ ಸಂಸ್ಥೆಗಳ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ವಿಶೇಷ ಹೆಸರು ಖ್ಯಾತಿ ತರುತ್ತಿದ್ದಾರೆ. ನಟ ಸುದೀಪ್ ಅವರದೂ ಇದೇ ದಾರಿ. ಬಹುಕೋಟಿ ನಿರ್ಮಾಣ ವೆಚ್ಚದ ಚಿತ್ರಗಳ ಜೊತೆ ಅವರುಗಳು ಸೇರಿಕೊಂಡು, ಸಹ ನಿರ್ಮಾಣ ಮಾಡುತ್ತಿದ್ದಾರೆ. ವೃತ್ತಿಪರವಾಗಿ ಅವರ ಆಯ್ಕೆ ಅದು. ಇಲ್ಲಿ ಕನ್ನಡದಲ್ಲಿ ಕಡಿಮೆ ವೆಚ್ಚದ ಚಿತ್ರಗಳ ನಿರ್ಮಾಣ ಅವರಿಂದ ಸಾಧ್ಯವೇ. ಅವರ ಸಂಸ್ಥೆಗಳೇ ನಿರ್ಮಿಸುವ ಚಿತ್ರಗಳನ್ನು ನಿರೀಕ್ಷಿಸಬಹುದೇ ಎನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಬೇಕು.

ರಿಷಭ್ ಶೆಟ್ಟಿ ಅವರು ಈ ಹಿಂದೆ ಮುಖ್ಯವಾಹಿನಿ ಚಿತ್ರಗಳ ಜೊತೆಜೊತೆಗೆ ಕಡಿಮೆ ವೆಚ್ಚದ ಚಿತ್ರಗಳನ್ನು ನಿರ್ಮಿಸಿದ್ದು ಎಲ್ಲರಿಗೂ ಗೊತ್ತು. ಅವರ ನಿರ್ಮಾಣದ ಪೆದ್ರೋ, ಶಿವಮ್ಮ ವಾಘಾಚಿಪಾನಿ ಮುಂತಾದ ಚಿತ್ರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದವು ಪ್ರಶಸ್ತಿ ವಿಜೇತ ಚಿತ್ರಗಳನ್ನು ಒಟಿಟಿಗಳು ಕೂಡ ಮಾನ್ಯ ಮಾಡದೇ ಇದ್ದಾಗ, ಮಾತ್ರವಲ್ಲ, ಅವುಗಳ ಪ್ರಚಾರಕ್ಕೆ ಹೆಚ್ಚು ಗಮನ ನೀಡಲು ಸಾಧ್ಯವಾಗದೆ ಹೋದಾಗ ವಾಘಾಚಿಪಾನಿ ಚಿತ್ರವನ್ನು ನಿರ್ದೇಶಕರ ಕೋರಿಕೆಯಂತೆ ಬೇರೆಯವರಿಗೆ ಹಸ್ತಾಂತರಿಸಿದರು. ಇದು ಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳುವ ಚಿತ್ರಗಳ ವಿಷಯವಾಯಿತು.

ಡಿಜಿಟಲ್ ನಂತರ, ಕೊರೊನೋತ್ತರ ವರ್ಷಗಳಲ್ಲಿ ಕನ್ನಡದಲ್ಲಿ ೩೦೦ರಿಂದ ೪೦೦ ರವರೆಗೆ ಚಿತ್ರಗಳು ತಯಾರಾಗುತ್ತಿವೆ. ೨೫೦ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರುತ್ತವೆ. ಅವುಗಳ ಹಾಕಿದ ಬಂಡವಾಳ ತಂದು ಕೊಡುವ ಚಿತ್ರಗಳ ಸಂಖ್ಯೆ ಬೆರಳೆಣಿಕೆಯವು. ಕಳೆದ ವರ್ಷವಂತೂ ತೆರೆಕಂಡ ೨೫೬ ಚಿತ್ರಗಳಲ್ಲಿ ಗೆದ್ದವು ಎರಡೇ ಚಿತ್ರಗಳು! ಇದು ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಯನ್ನು ಹೇಳುತ್ತದೆ. ಚಿತ್ರರಂಗಕ್ಕೆ ಕಾಯಕಲ್ಪ ಆಗಬೇಕಾದರೆ, ಜನಪ್ರಿಯ ನಟರು, ತಂತ್ರಜ್ಞರು, ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ಚರ್ಚಿಸಿ ಸರಿದಾರಿ ಹುಡುಕಬೇಕಾಗಿದೆ. ಟಿಸಿಲೊಡೆದಿರುವ ಮನರಂಜನೋದ್ಯಮದ ಒಳಹೊರಗನ್ನು ಬಲ್ಲವರು, ಈ ನಿಟ್ಟಿನಲ್ಲಿ ನೆರವಾಗಬೇಕಿದೆ.

ಯಾವುದೇ ಚಿತ್ರ ತೆರೆಗೆ ಬಂದ ಏಳು ವಾರಗಳ ನಂತರವಷ್ಟೇ ಒಟಿಟಿಯಲ್ಲಿ ಪ್ರಸಾರ ಮಾಡಬೇಕು, ಇಲ್ಲದೆ ಹೋದರೆ, ಅಂತಹ ಚಿತ್ರಗಳನ್ನು ನಮ್ಮಲ್ಲಿ ಪ್ರದರ್ಶಿಸುವುದಿಲ್ಲ ಎಂದು ತಮಿಳು ಚಿತ್ರೋದ್ಯಮ ಹೇಳಿದೆ. ಆ ರೀತಿಯ ನಿಲುವು ನಿರ್ಧಾರಗಳು ಕನ್ನಡ ಚಿತ್ರರಂಗದಲ್ಲಿ ಸಾಧ್ಯವೇ? ಕೇರಳ, ತಮಿಳು ನಾಡುಗಳಲ್ಲಿ ಉದ್ಯಮಿಗಳು ತೆಗೆದುಕೊಳ್ಳುವಂತಹ ಕಟ್ಟುನಿಟ್ಟಿನ ನಿರ್ಧಾರ ಇಲ್ಲಿ ಸಾಧ್ಯವಾದರೆ ಚೆನ್ನ ಎನ್ನುವದು ಚಿತ್ರೋದ್ಯಮದಲ್ಲಿ ತೊಡಗಿಕೊಂಡ ಕೆಲವರ ಅಭಿಪ್ರಾಯ. ಹಾಗಾಗಲಿ

Tags:
error: Content is protected !!