Mysore
20
overcast clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಹನೂರು| ಕಾಡಾನೆ ದಾಳಿ: ಆಟೋ ಜಖಂ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ವ್ಯಾಪಾರ ಮಾಡಲು ತೆರಳುತ್ತಿದ್ದ ಆಟೋದ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಆಟೋ ಜಖಂಗೊಂಡಿರುವ ಘಟನೆ ಪಿ ಜಿ ಪಾಳ್ಯ ಸಮೀಪದ ಚಿಕ್ಕರಂಗಶೆಟ್ಟಿ ಗ್ರಾಮದ ಬಳಿ ಜರುಗಿದೆ.

ರಸ್ತೆ ಸಮೀಪದಲ್ಲಿ ಆನೆ ನಿಂತಿದ್ದರಿಂದ ಆಟೋ ಚಾಲಕ ನಿಧಾನವಾಗಿ ತೆರಳಿದ್ದಾರೆ. ಆದರೆ ಆನೆ ಏಕಾಏಕಿ ದಾಳಿ ಮಾಡಿದ ಪರಿಣಾಮ ರಸ್ತೆ ಬದಿಯ ಗುಂಡಿಗೆ ಆಟೋ ಪಲ್ಟಿ ಹೊಡೆದಿದೆ. ನಂತರ ಆನೆ ಅರಣ್ಯದತ್ತ ಹೋಗಿದೆ.

ಇದೇ ಮಾರ್ಗದಲ್ಲಿ ಆಗಮಿಸುತ್ತಿದ್ದ ಸಾರ್ವಜನಿಕರು ಹಾಗೂ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮಸ್ಥರ ಸಹಕಾರದಿಂದ ಟ್ರಾಕ್ಟರ್ ಮೂಲಕ ಗುಂಡಿಗೆ ಬಿದ್ದಿದ್ದ ಆಟೋವನ್ನು ಮೇಲೆತ್ತಿದ್ದಾರೆ. ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ವ್ಯಾಪಾರಕ್ಕಿಟ್ಟಿದ್ದ ಬಿಂದಿಗೆ, ಪ್ಲಾಸ್ಟಿಕ್ ಸಾಮಗ್ರಿಗಳು ಹಾಗೂ ಆಟೋವಿನ ಬಲಭಾಗ ಜಖಂಗೊಂಡಿದೆ.

ಬಿ ಆರ್ ಟಿ ವಲಯ ಹಾಗೂ ಮಲೆ ಮಹದೇಶ್ವರ ವಲಯ ವ್ಯಾಪ್ತಿಯಲ್ಲಿ ಒಂಟಿ ಸಲಗವೂಂದು ಪ್ರತಿನಿತ್ಯ ರಸ್ತೆ ಮಧ್ಯದಲ್ಲಿಯೇ ಅಡ್ಡಾಡುತ್ತಿದೆ. ರಾತ್ರಿ ವೇಳೆ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ಹಾಗೂ ಕೃಷಿ ಪರಿಕರಗಳನ್ನು ನಾಶಪಡಿಸುತ್ತಿದೆ.

ಈ ಸಂಬಂಧ ಕಳೆದ ತಿಂಗಳು ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಪ್ರತಿಭಟನೆಯನ್ನು ಸಹ ಮಾಡಲಾಗಿದೆ. ಇದಲ್ಲದೆ ಈ ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿಯೂ ಆಗಮಿಸಲಾಗಿದೆ. ಆದರೆ ಇದುವರೆಗೂ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸದೆ ಇರುವುದರಿಂದ ವಾಹನ ಸವಾರರ ಮೇಲೆ ದಾಳಿ ನಡೆಸುತ್ತಿದೆ. ಹೆಚ್ಚಿನ ಅವಘಡಗಳು ಸಂಭವಿಸುವ ಮುನ್ನ ಈ ಒಂಟಿ ಸಲಗವನ್ನು ಸ್ಥಳಾಂತರ ಮಾಡುವಂತೆ ಯುವ ಮುಖಂಡ ವಿರಾಟ್ ಒತ್ತಾಯಿಸಿದ್ದಾರೆ.

 

Tags:
error: Content is protected !!