Mysore
24
scattered clouds

Social Media

ಶನಿವಾರ, 23 ಮೇ 2026
Light
Dark

ಮಿರ್ಲೆ: ಹುಣಸಮ್ಮ ತಾಯಿ ಸಿಡಿ ಉತ್ಸವಕ್ಕೆ ಸಕಲ ಸಿದ್ಧತೆ

ಕೆ.ಟಿ.ಮೋಹನ್ ಕುಮಾರ್

ಫೆ.೨೭ರಂದು ನವಗ್ರಾಮದೇವತೆ ಹುಣಸಮ್ಮತಾಯಿ ಸಿಡಿ ಉತ್ಸವ, ೨೮ರಂದು ರಥೋತ್ಸವ

ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ ಹುಣಸಮ್ಮ ತಾಯಿ ದೇವರ ಸಿಡಿ ಉತ್ಸವ ಫೆ.೨೭ರಂದು ಹಾಗೂ ಫೆ.೨೮ರಂದು ರಥೋತ್ಸವವು ಸಾವಿರಾರು ಜನರ ನಡುವೆ ಧಾರ್ಮಿಕ ವಿಧಿ ವಿಧಾನಗ ಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಈಗಾಗಲೇ ಭರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಶ್ರೀ ಹುಣಸಮ್ಮ ತಾಯಿಯ ಹಬ್ಬದ ಅಂಗವಾಗಿ ದೇವಸ್ಥಾನ, ಮಿರ್ಲೆ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳು ನವ ವಧುವಿನಂತೆ ಸಿಂಗಾರಗೊಳ್ಳುತ್ತಿವೆ. ದೇವಾಲಯದ ಸುತ್ತ ಮುತ್ತ ಸ್ವಚ್ಛತಾ ಕಾರ್ಯ ಹಾಗೂ ಬಣ್ಣದ ಲೇಪನ ಕಾರ್ಯ ಭರದಿಂದ ಸಾಗುತ್ತಿದೆ.

ಫೆ.೨೭ರಂದು ಶ್ರೀ ಹುಣಸಮ್ಮ ತಾಯಿಯ ರಥೋತ್ಸವದ ಅಂಗವಾಗಿ ನವಗ್ರಾಮಗಳಲ್ಲಿ ಹಬ್ಬವು ನಡೆಯಲಿದ್ದು. ಈ ಹಬ್ಬಕ್ಕೆ ತವರಿಗೆ ಆಗಮಿಸುವ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ತೆರಳಿ ದೇವರಿಗೆ ಮಡಿಲು ತುಂಬಿಸುವ ಶಾಸ್ತ್ರ, ತಂಬಿಟ್ಟಿನ ಆರತಿ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದೆ. ಇಷ್ಟೇ ಅಲ್ಲದೆ ದೇವರಿಗೆ ವಿವಿಧ ರೀತಿಯ ಆರತಿಗಳನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಫೆ.೨೮ರಂದು ನಡೆಯುವ ಶ್ರೀ ಹುಣಸಮ್ಮ ತಾಯಿಯ ರಥೋತ್ಸವಕ್ಕೆ ನವಗ್ರಾಮಗಳಾದ ಮಿರ್ಲೆ, ಶಾಬಾಳು, ನಾಟನಹಳ್ಳಿ, ಹಳೆಮಿರ್ಲೆ, ಕೊಡಿಯಾಲ, ಹನುಮನಹಳ್ಳಿ, ಬೀಚನಹಳ್ಳಿ, ನರಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಮಾಳನಾಯಕನಹಳ್ಳಿ, ಮಾಳನಾಯಕನಹಳ್ಳಿ ಕೊಪ್ಪಲು ಗ್ರಾಮಗಳಿಂದ ಐದು ಸಿಡಿಗಳು ಮತ್ತು ನಾಲ್ಕು ರಥಗಳು ಆಗಮಿಸಲಿದ್ದು, ನಂತರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಿರ್ಲೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆಯು ಸಾಗಲಿದೆ. ಶ್ರೀ ಹುಣಸಮ್ಮ ತಾಯಿ ದೇವಾಲಯದ ಆವರಣಕ್ಕೆ ರಥವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಎಳೆದು ತರಲಿದ್ದಾರೆ.

ರಥೋತ್ಸವದ ದಿನದಂದು ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಜಾತ್ರಾ ಮಹೋತ್ಸವ ಮುಗಿದ ನಂತರ ದೇವಸ್ಥಾನದ ಮುಂಭಾಗ ಇರುವ ಉಯ್ಯಾಲೆ ಯಲ್ಲಿ ಶ್ರೀ ಹುಣಸಮ್ಮ ತಾಯಿ ಆಟವಾಡುತ್ತಾಳೆ ಎಂಬ ನಂಬಿಕೆಯಿಂದ ರಾತ್ರಿ ೮ ಗಂಟೆ ನಂತರ ಈ ದೇವಸ್ಥಾನದ ಕಡೆಗೆ ಯಾರು ಹೋಗುವುದಿಲ್ಲ.

ಈ ರಥೋತ್ಸವಕ್ಕೆ ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಮಗಳೂರು ಸೇರಿದಂತೆ ನಾಡಿನ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲಿದ್ದಾರೆ.

” ಈ ಸಾಲಿನಲ್ಲಿ ಶ್ರೀ ಹುಣಸಮ್ಮ ತಾಯಿಯ ಸಿಡಿ ಉತ್ಸವ ಹಾಗೂಜಾತ್ರಾ ಮಹೋತ್ಸವವು ಅತ್ಯಂತವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ದೇವತಾ ಕಾರ್ಯವು ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.”

-ಎಂ.ಎಲ್.ಲೋಕೇಶ್, ಧರ್ಮದರ್ಶಿಗಳು, ಶ್ರೀ ಹುಣಸಮ್ಮ ತಾಯಿ ದೇವಾಲಯ

 

 

Tags:
error: Content is protected !!