ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿದ್ದು ಭಕ್ತರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ತಿಂಗಳು ಚಿರತೆ ದಾಳಿಯಿಂದ ಮಂಡ್ಯ ಮೂಲದ ಚಿರನಹಳ್ಳಿ ಗ್ರಾಮದ ಪ್ರವೀಣ್ ಎಂಬವರು ಮತಪಟ್ಟಿದ್ದರು. ಇದಾದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದಿದ್ದರು.
ಇದಾದ ನಂತರ ಫೆಬ್ರವರಿ 10ರ ಮಂಗಳವಾರದಂದು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಚನ್ನಪಟ್ಟಣ ಮೂಲದ ಬಾಲಕ ಶ್ರೇಯಸ್ ಎಂಬುವವನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದನು.
ಬಳಿಕ ಅರಣ್ಯ ಇಲಾಖೆ ಗೃಹರಕ್ಷಕ ದಳದ ಸಿಬ್ಬಂದಿ ಜಂಟಿಯಾಗಿ ತಂಡಗಳನ್ನು ರಚನೆ ಮಾಡಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಗಸ್ತು ಮಾಡಲಾಗುತ್ತಿತ್ತು. ಇವರಿಂದ ಪಾದ ಯಾತ್ರಿಕರಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಇದೀಗ ಮತ್ತೊಮ್ಮೆ ತಾಳುಬೆಟ್ಟದ ಮುಂಭಾಗದ ನಾಲ್ಕನೇ ತಿರುವಿನಲ್ಲಿ ಚಿರತೆ ದರ್ಶನ ನೀಡಿರುವುದು ಪಾದಯಾತ್ರಿಕರು ವಾಹನ ಸವಾರರಿಗೆ ಆತಂಕವನ್ನುಂಟು ಮಾಡಿದೆ.
ಶುಕ್ರವಾರ ತಡರಾತ್ರಿ ಕನಕಪುರ ಮೂಲದ ಹಾರೋಹಳ್ಳಿಯ ಕೃಷ್ಣಪ್ಪ ಶಶಿ ಚಂದನ್ ಚಂದ್ರಪ್ಪ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ತಾಳು ಬೆಟ್ಟದ ಮುಂಭಾಗದ ನಾಲ್ಕನೇ ತಿರುವಿನಲ್ಲಿ ಚಿರತೆ ರಸ್ತೆಯ ಬಲಬದಿಯಲ್ಲಿ ಕುಳಿತಿರುವುದನ್ನು ಗಮನಿಸಿ ಕಾರನ್ನು ನಿಲ್ಲಿಸಿದ್ದಾರೆ. ಚಿರತೆ ಸುಮಾರು ಎರಡು ನಿಮಿಷಗಳ ಕಾಲ ಯಾವುದೇ ಶಬ್ದಗಳಿಗೂ ಜಗ್ಗದೆ ಕುಳಿತಿತ್ತು ಸಿಗಲ್ಲದೆ ವಾಹನ ಸಂಚರಿಸುತ್ತಿದ್ದರು. ಚಿರತೆ ಮಾತ್ರ ಎತ್ತ ಕಡೆಯೂ ಹೋಗದೆ ಕುಂತಲ್ಲೇ ಕುಳಿತು, ಯಾವುದೇ ವಾಹನಗಳ ಸಂಚರಿಸುತ್ತಿದ್ದರು ಕ್ಯಾರೆ ಎನ್ನಲಿಲ್ಲ ಇದನ್ನು ನೋಡಿದ ಕಾರಿನಲ್ಲಿದ್ದ ಭಕ್ತಾದಿಗಳು ಭಯ ಪಟ್ಟಿದ್ದಾರೆ. ನಂತರ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ.
ಚಿರತೆಯ ರಂಗಸ್ವಾಮಿಒಡ್ಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದು ನಮ್ಮ ಇಲಾಖೆಯ ಸಿಬ್ಬಂದಿಗಳಿಗೂ ಕಾಣಿಸಿಕೊಂಡಿದೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಇರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಚಿರತೆ ಸರೆ ಹಿಡಿಯಲು ಆಗುತ್ತಿಲ್ಲ, ಇಳಿಜಾರು ಪ್ರದೇಶ ಇರುವುದರಿಂದ ಅರವಳಿಕೆ ಚುಚ್ಚುಮದ್ದು ನೀಡಲು ಸಹ ತೊಂದರೆಯಾಗುತ್ತಿದೆ. ಸಮತಟ್ಟು ಪ್ರದೇಶವಾಗಿದ್ದರೆ ಕೂಬಿಂಗ್ ಮಾಡಬಹುದಾಗಿತ್ತು. ಅತೀ ಶೀಘ್ರದಲ್ಲಿಯೇ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ವಹಿಸಲಾಗುವುದು, ಚಿರತೆ ರಸ್ತೆಗೆ ಬಾರದಂತೆ ಗಸ್ತು ಮಾಡಲಾಗುತ್ತಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಆಂದೋಲನಕ್ಕೆ ತಿಳಿಸಿದರು.





