Mysore
24
overcast clouds

Social Media

ಭಾನುವಾರ, 17 ಮೇ 2026
Light
Dark

‘ಮಾದಕ ವಸ್ತು ಮಾರಾಟ ಮಾಡಿದರೆ ಕ್ರಮ’

ನವೀನ್ ಡಿಸೋಜ

ಜನವರಿಯಲ್ಲಿ ೬೩ ಎನ್‌ಡಿಪಿಎಸ್ ಪ್ರಕರಣಗಳು ದಾಖಲು; ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಮಡಿಕೇರಿ: ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕೊಡಗು ಜಿಲ್ಲಾ ಪೊಲೀಸ್ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಜನವರಿ ತಿಂಗಳೊಂದರಲ್ಲೇ ಒಟ್ಟು ೬೩ ಪ್ರಕರಣಗಳು ದಾಖಲಾಗಿವೆ.

ಈ ಹಿಂದೆ ಕೊಡಗಿನಲ್ಲಿ ಮೂರು ವರ್ಷಗಳ ಕಾಲ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಕೆ.ರಾಮರಾಜನ್ ಅವರು ಆರಂಭ ದಿಂದಲೂ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಿದ್ದರು. ಇದೀಗ ನೂತನ ಎಸ್ಪಿ ಬಿಂದುಮಣಿ ಕೂಡ ಮಾದಕ ವಸ್ತುಗಳ ಬಳಕೆ, ಮಾರಾಟ ಮಾಡುವವರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಇದರ ಪರಿಣಾಮ ತಿಂಗಳೊಂದರಲ್ಲೇ ಒಟ್ಟು ೬೩ ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ.

೨೦೨೫ನೇ ಸಾಲಿನಲ್ಲಿ ಪೆಡ್ಲರ್ ಮತ್ತು ಸೇವನೆ ಮಾಡಿದ ಪ್ರಕರಣಗಳು ಸೇರಿದಂತೆ ಒಟ್ಟು ೧೫೩ ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ಜನವರಿ ತಿಂಗಳೊಂದರಲ್ಲೇ ಜಿಲ್ಲೆಯ ನಾನಾ ಕಡೆಗಳಲ್ಲಿ ಒಟ್ಟು ೬೩ ಪ್ರಕರಣಗಳು ಎನ್ ಡಿಪಿಎಸ್ ಕಾಯ್ದೆಯ ಅಡಿ ದಾಖಲಾಗಿದ್ದು, ಹಲವರನ್ನು ಬಂಧಿಸಲಾಗಿದೆ. ಆ ಪೈಕಿ ೫೪ ಗಾಂಜಾ ಸೇವನೆ ಪ್ರಕರಣಗಳಾಗಿದ್ದು, ೯ ಮಾರಾಟ ಪ್ರಕರಣಗಳಾಗಿವೆ.

ಜನವರಿ ತಿಂಗಳ ಎಲ್ಲಾ ಪ್ರಕರಣಗಳಿಂದ ಒಟ್ಟು ೨ ಕೆ.ಜಿ. ಹಾಗೂ ಇತರ ಮಾದಕ ವಸ್ತುಗಳ ಬಳಕೆ, ಮಾರಾಟ, ಸರಬರಾಜಿಗೆ ಸಂಬಂಧಿಸಿದಂತೆ ಇಲಾಖೆಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.

ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಗಾಂಜಾ ಮಾರಾಟಗಾರರು, ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ನೂರಾರು ಮಂದಿಯನ್ನು ಬಂಧಿಸಲಾಗಿದೆ. ಸ್ಥಳೀಯ ಪೆಡ್ಲರ್‌ಗಳ ಮೂಲಕ ಇದೀಗ ಮೇಲಿನ ಹಂತದ ಪೆಡ್ಲರ್‌ಗಳ ಪತ್ತೆಗೆ ಇಲಾಖೆ ಮುಂದಾಗಿದೆ.

ಗಾಂಜಾ ಸೇವಿಸುವವರು, ಸ್ಥಳೀಯವಾಗಿ ಮಾರಾಟ ಮಾಡುವವರ ಜತೆಗೆ ಅವರಿಗೆ ಮಾದಕ ವಸ್ತುಗಳನ್ನು ಒದಗಿಸುತ್ತಿರುವ ಜಾಲ ಅಥವಾ ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತದೆ. ಆ ಮೂಲಕ ಮಾದಕ ವಸ್ತುಗಳು ಸರಬರಾಜಾಗುವ ಮೂಲವನ್ನು ಪತ್ತೆ ಹಚ್ಚಲು ಮುಂದಾಗುತ್ತಿದ್ದೇವೆ. ಜಿಲ್ಲೆ ಅಥವಾ ಜಿಲ್ಲೆಯ ಹೊರಭಾಗದಲ್ಲಿ ಈ ಕೆಲಸದಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ಹೇಳಿದ್ದಾರೆ.

” ಈ ಹಂತದಲ್ಲಿ ನಾವು ಮುಖ್ಯವಾಗಿ ಸ್ಥಳೀಯ ಪೆಡ್ಲರ್‌ಗಳಿಗೆ ಮಾದಕವಸ್ತು ಸರಬರಾಜು ಮಾಡುವವರ ಪತ್ತೆಗೆ ಆದ್ಯತೆ ನೀಡುತ್ತಿದ್ದೇವೆ. ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿರುವ ೨ನೇ ಹಂತದ ಪೆಡ್ಲರ್‌ಗಳನ್ನುಪತ್ತೆ ಹಚ್ಚುವ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಮಾದಕವಸ್ತು ದಂಧೆ ತಡೆಗೆ ಕ್ರಮ ವಹಿಸಲಾಗುವುದು.”

 -ಬಿಂದುಮಣಿ, ಎಸ್‌ಪಿ

ಆಪ್ ಅಥವಾ ೧೧೨ಕ್ಕೆ ದೂರು ನೀಡಿ…: 

ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಮಾಹಿತಿ ಇದ್ದರೆ ಕೆಪಿಎಸ್ ಆಪ್ ಮೂಲಕ ಅಥವಾ ಸಹಾಯವಾಣಿ ೧೧೨ಕ್ಕೆ ಕರೆಮಾಡಿ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದವರ ವಿರವರಗಳನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.

೧೧೨ರ ಮೂಲಕ ಪ್ರತಿ ದಿನ ಸರಾಸರಿ ೨೫ ರಿಂದ ೨೭ ದೂರುಗಳು ದಾಖಲಾಗುತ್ತಿದ್ದು, ದಾಖಲಾದ ದೂರು ಮತ್ತು ಕೈಗೊಂಡ ಕ್ರಮದ ಕುರಿತು ಹಿರಿಯ ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರತಿ ದೂರಿಗೂ ತ್ವರಿತ ಮತ್ತು ಸೂಕ್ತ ಪರಿಹಾರ ದೊರಕಿಸಿಕೊಡಲು ಅನುಕೂಲವಾಗುತ್ತಿದೆ ಎಂದು ಎಸ್ಪಿ ಬಿಂದುಮಣಿ ಮಾಹಿತಿ ನೀಡಿದ್ದಾರೆ.

 

 

 

Tags:
error: Content is protected !!