ಕೆ.ಬಿ.ಶಂಶುದ್ಧೀನ್
ಗ್ರಾಮಕ್ಕೆ ಹುಲಿ, ಚಿರತೆಗಳು ಲಗ್ಗೆಯಿಡುವ ಆತಂಕ; ಹೋರಾಟದ ಎಚ್ಚರಿಕೆ ನೀಡಿದ ಹಕ್ಕೆ ಗ್ರಾಮಸ್ಥರು
ಕುಶಾಲನಗರ: ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ದೃಷ್ಟಿಯಿಂದ ಪುರಸಭೆ ವತಿಯಿಂದ ಸಮೀಪದ ಹಕ್ಕೆ ಗ್ರಾಮದಲ್ಲಿ ಬೀದಿನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದು, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮರೂರು ಹಕ್ಕೆ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿದ್ದು, ಹಕ್ಕೆಯಲ್ಲಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೀದಿ ನಾಯಿಗಳಿಂದ ಚಿರತೆ ಲಗ್ಗೆಯಿಡಲಿದೆ ಎಂಬ ಆತಂಕದಲ್ಲಿರುವ ಗ್ರಾಮಸ್ಥರು, ಬೀದಿನಾಯಿ ಪುನರ್ವಸತಿ ಕೇಂದ್ರ ಸ್ಥಾಪಿಸದಂತೆ ಒತ್ತಾಯಿಸುತ್ತಿದ್ದಾರೆ.
ಬೀದಿ ನಾಯಿಗಳ ಹಾವಳಿಗಳನ್ನು ತಡೆಗಟ್ಟಲು ನ್ಯಾಯಾಲಯ ಪುನರ್ವಸತಿ ಕೇಂದ್ರ ಸ್ಥಾಪಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಕುಶಾಲನಗರ ಪುರಸಭೆ, ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಎಂಬಲ್ಲಿ ಬೀದಿ ನಾಯಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಆದರೆ ಮರೂರು, ಹಕ್ಕೆ ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತ ಸಂರಕ್ಷಿತಾರಣ್ಯ ಇದೆ. ಈ ಅರಣ್ಯದಲ್ಲಿ ಹುಲಿ ಮತ್ತು ಚಿರತೆಗಳ ಸಂಖ್ಯೆ ಹೆಚ್ಚಿವೆ. ಆಗಾಗ ಚಿರತೆ ಮತ್ತು ಹುಲಿ ಗ್ರಾಮಗಳತ್ತ ಬರುತ್ತಿರುತ್ತವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರೊಂದಿಗೆ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಆರಂಭಿಸಿದರೆ ಹುಲಿ, ಚಿರತೆ ಗ್ರಾಮಗಳತ್ತ ನುಗ್ಗಲಿವೆ. ಆದರೆ ನಾಯಿಗಳನ್ನು ಗೂಡಿನಲ್ಲಿ ಹಾಕುವುದರಿಂದ ಅವುಗಳನ್ನು ಹಿಡಿಯಲಾಗದ ಚಿರತೆ, ಹುಲಿಗಳು ಸಾರ್ವಜನಿಕರಿಗೆ ತೊಂದರೆ ನೀಡಬಹುದು. ಅಲ್ಲದೇ, ನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಿರುವ ಜಾಗದಿಂದ ನೂರು ಮೀಟರ್ ದೂರದಲ್ಲೇ ಅಂಗನವಾಡಿ ಕೇಂದ್ರ ಇದೆ. ಇದರಿಂದ ಕೇಂದ್ರದ ಮಕ್ಕಳ ಪ್ರಾಣಕ್ಕೂ ತೊಂದರೆಯಾಗಬಹುದಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ಪುನರ್ವಸತಿ ಕೇಂದ್ರ ಮಾಡಬಾರದು ಎಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಕೆಲಸ ಆರಂಭಿಸಲು ಬಂದ ಜೆಸಿಬಿಯನ್ನು ತಡೆದಿರುವ ಘಟನೆಯೂ ನಡೆದಿದೆ. ಅಲ್ಲದೇ ಹೆಬ್ಬಾಲೆ ಗ್ರಾಮ ಪಂಚಾಯಿತಿಯಿಂದಲೂ ನಡಾವಳಿ ಮಾಡಿ ಇಲ್ಲಿ ನಾಯಿ ಪುನರ್ವಸತಿ ಕೇಂದ್ರ ಆರಂಭಿಸದಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಕಳುಹಿಸಲಾಗಿದೆ. ಎನ್ನಲಾಗಿದೆ. ಪುನರ್ವಸತಿ ಕೇಂದ್ರ ಸ್ಥಾಪಿಸಲು ಮುಂದಾದರೆ ಪುರಸಭೆಯ ವಿರುದ್ಧ ಅವಿರತ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಒಂದೆಡೆ ಬೀದಿ ನಾಯಿಗಳ ಸಮಸ್ಯೆಯನ್ನು ತಡೆಗಟ್ಟುವ ದೃಷ್ಟಿಯಿಂದ ನ್ಯಾಯಾಲಯದ ಆದೇಶದಂತೆ ಪುರಸಭೆ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದೆಡೆ ಸ್ಥಳೀಯ ಗ್ರಾಮಸ್ಥರು ಹುಲಿ, ಚಿರತೆಯ ಆತಂಕದಿಂದ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಽಕಾರಿಗಳು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
” ಸಮಸ್ಯೆಯೊಂದನ್ನು ಸರಿಪಡಿಸಲು ಹೋಗಿ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುವುದು ಸರಿಯಲ್ಲ. ಗ್ರಾಮಸ್ಥರ ವಿರೋಧದ ನಡುವೆಯೂ ನಾಯಿಗಳ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಪುರಸಭೆ ಮುಂದಾಗಬಾರದು. ಗ್ರಾಮಸ್ಥರಿಗೆ ತೊಂದರೆಯಾಗದ ಸ್ಥಳದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು.”
-ಸುಮನ್, ಕುಶಾಲನಗರ
” ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಸಭೆ ಗ್ರಾಮಸ್ಥರಿಗೆ ತೊಂದರೆಯಾಗದ ಸ್ಥಳದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು. ಗ್ರಾಮಸ್ಥರ ವಿರೋಧವಿದ್ದು, ಸೂಕ್ತ ಜಾಗವನ್ನು ನಿಗದಿಗೊಳಿಸಿ ಮುಂದಿನ ಕ್ರಮ ಕೈಗೊಳ್ಳಬೇಕು.”
-ಅಬ್ದುಲ್ ಮಜೀದ್, ಕುಶಾಲನಗರ
” ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಹಕ್ಕೆಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪನೆ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಮೇಲಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸಲಿದ್ದೇವೆ. ಸದ್ಯಕ್ಕೆ ಕುಶಾಲನಗರ ಪುರಸಭೆ ಅಧಿನದಲ್ಲಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಕೇಂದ್ರ ಸ್ಥಾಪಿಸಿ ನಿರ್ವಹಣೆ ಮಾಡಲಿದ್ದೇವೆ.”
-ಗಿರೀಶ್, ಮುಖ್ಯಾಧಿಕಾರಿಗಳು, ಕುಶಾಲನಗರ ಪುರಸಭೆ





