Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ

ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿರುವ ೮೩ ವರ್ಷ ಪ್ರಾಯದ ಡಾ. ಅರ್ಮಿಡಾ ಫೆರ್ನಾಂಡೀಸರನ್ನು ಭಾರತದ ‘ನಿಯೋನೇಟಲ್ ಕೇರ್’ ಸೇವೆ (ನವಜಾತ ಶಿಶು ಹಾಗೂ ಬಾಣಂತಿಯರ ಆರೈಕೆ)ಯ ಮಾತೆ ಎಂದು ಕರೆಯಲಾಗುತ್ತದೆ. ಅದಕ್ಕೆ ಕಾರಣಗಳೂ ಇವೆ. ೧೯೮೯ರಲ್ಲಿ ಭಾರತದ ಮಾತ್ರವಲ್ಲದೆ ಇಡೀ ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಇವರದ್ದು. ಪ್ರತೀವರ್ಷ ಸುಮಾರು ೫೦೦೦ ನವಜಾತ ಶಿಶುಗಳು ಈ ಎದೆಹಾಲಿನ ಬ್ಯಾಂಕಿನ ಪ್ರಯೋಜನ ಪಡೆಯುತ್ತವೆ. ಅವರ ಆ ಕೆಲಸದಿಂದ ಪ್ರೇರಣೆ ಹೊಂದಿದ ದೇಶದ ಆನೇಕ ಆಸ್ಪತ್ರೆಗಳು ಎದೆಹಾಲಿನ ಬ್ಯಾಂಕುಗಳನ್ನು ತೆರೆದವು. ಈಗ ದೇಶದಲ್ಲಿ ೯೦ಕ್ಕೂ ಹೆಚ್ಚು ಎದೆ ಹಾಲಿನ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕದಲ್ಲೂ ವಾಣಿ ವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ೨೦೨೨ರಲ್ಲಿ ಅಮೃತಧಾರೆ ಎಂಬ ಹೆಸರಲ್ಲಿ ಒಂದು ಎದೆಹಾಲಿನ ಬ್ಯಾಂಕ್ ಶುರುವಾಯಿತು. ಈ ಎದೆ ಹಾಲಿನ ಬ್ಯಾಂಕುಗಳು ನವಜಾತ ಶಿಶುಗಳ ಮರಣ ಪ್ರಮಾಣದ ಕುಸಿತಕ್ಕೆ ಗಣನೀಯ ಕೊಡುಗೆ ನೀಡುತ್ತಿವೆ.

ಡಾ.ಅರ್ಮಿಡಾ ಫೆರ್ನಾಂಡೀಸ್ ಧಾರವಾಡದಲ್ಲಿ ಹುಟ್ಟಿದವರು. ಏಳು ಮಕ್ಕಳಲ್ಲಿ ಕೊನೆಯವರು. ಅವರ ತಂದೆ ಇಂಗ್ಲಿಷ್ ಮತ್ತು ಲ್ಯಾಟಿನ್ ಪ್ರೊಫೆಸರ್. ತಂದೆಯಂತೆ ಅರ್ಮಿಡಾರಿಗೂ ಕಾಲೇಜಿನಲ್ಲಿ ಇಂಗ್ಲಿಷ್ ಲಿಟರೇಚರ್ ಅಚ್ಚುಮೆಚ್ಚಿನ ವಿಷಯವಾಗಿತ್ತು. ಇಂಗ್ಲಿಷ್ ಲಿಟರೇಚರ್ ಜೊತೆ ಗಣಿತ ಮತ್ತು ಭೌತಶಾಸ್ತ್ರಗಳೂ ಅವರ ಆಸಕ್ತಿಯ ವಿಷಯಗಳಾಗಿದ್ದವು. ಆದರೆ, ಅರ್ಮಿಡಾ ವೈದ್ಯಕೀಯವನ್ನು ಆಯ್ಕೆ ಮಾಡಿಕೊಂಡು, ಹುಬ್ಬಳ್ಳಿಯಲ್ಲಿ ಎಂಬಿಬಿಎಸ್ ಮಾಡಿ, ನಂತರ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಪೋಸ್ಟ್ ಗ್ರ್ಯಾಜುಯೇಶನ್ ಮುಗಿಸಿ, ಸಾಯನ್ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ಅವರು ಮೂವತ್ತು ವರ್ಷಗಳ ಕಾಲ ನಿಯೋನೇಟಾಲಜಿ ವಿಭಾಗದ ಪ್ರೊಫೆಸರಾಗಿ, ನಂತರ ಅಲ್ಲಿನ ಡೀನ್ ಆಗಿ ನಿವೃತ್ತರಾದರು.

ಡಾ.ಅರ್ಮಿಡಾ ಫೆರ್ನಾಂಡೀಸ್ ಮೂರು ವರ್ಷಗಳ ಕಾಲ ಆಸ್ಪತ್ರೆಯ ಡೀನ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ನಂತರ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೯೦ರಲ್ಲಿ ಅವರು ‘ಸ್ನೇಹ’(ಸೊಸಾಯ್ಟಿ ಫಾರ್ ನ್ಯೂಟ್ರೀಶನ್, ಎಜುಕೇಶನ್ ಆಂಡ್ ಹೆಲ್ತ್ ಆಕ್ಷನ್) ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರ ಮೂಲಕ ಅವರು ಮುಂಬೈ ಕೊಳೆಗೇರಿಗಳಲ್ಲಿ ಶಿಶು ಮರಣ, ಬಾಣಂತಿಯರ ಸಾವು, ಮಕ್ಕಳ ಪೋಷಕಾಂಶದ ಕೊರತೆ, ಸ್ತ್ರೀ ಶೋಷಣೆ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಬಡ ಕುಟುಂಬಗಳ ಮಹಿಳೆಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಕಲ್ಪಿಸುತ್ತಿದ್ದಾರೆ.

‘ಸ್ನೇಹ’ದ ಸ್ಥಾಪನೆಯಲ್ಲಿ ಒಂದು ಮನ ಕರಗಿಸುವಂತಹ ಘಟನೆ ಅಡಗಿದೆ. ಡಾ.ಅರ್ಮಿಡಾ ಫೆರ್ನಾಂಡೀಸ್ ಒಂದು ಮದುವೆಗೆ ಹೋಗಿದ್ದರು. ಅಲ್ಲಿ ಅವರಿಗೆ ಸ್ನೇಹಿತರಾದ ನೆವೆಲ್ಲಿ ಸೋನ್ಸ್ ಎನ್ನುವವರು ಸಿಕ್ಕಿದರು. ಅವರೊಂದಿಗೆ ಮಾತನಾಡುವಾಗ ಡಾ.ಅರ್ಮಿಡಾ ತಾವು ಮುಂಬೈ ಕೊಳೆಗೇರಿಗಳ ಜನರಿಗಾಗಿ ‘ಸ್ನೇಹ’ವನ್ನು ಪ್ರಾರಂಭಿಸುವ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿದ್ದರು. ಆಗ ನೆವೆಲ್ಲಿ ತಾವು ತಮ್ಮದೊಂದು ಮನೆಯನ್ನು ಮಾರುತ್ತಿದ್ದು, ಅದನ್ನು ಮಾರಿ ಬಂದ ದುಡ್ಡನ್ನು ಅದಕ್ಕೆ ಕೊಡುತ್ತೇನೆ ಅಂದಿದ್ದರು. ಆದರೆ, ಮರುದಿನ ನೆವೆಲ್ಲಿ ಸೋನ್ಸ್ ಹೃದಯಾಘಾತಕ್ಕೆ ಒಳಗಾಗಿ ತೀರಿಕೊಂಡರು.

ಆಗ ನೆವೆಲ್ಲಿ ಸೋನ್ಸ್‌ರಿಗೆ ಐದರಿಂದ ಹದಿನೈದು ವರ್ಷ ಪ್ರಾಯದೊಳಗಿನ ಐವರು ಮಕ್ಕಳಿದ್ದರು. ಗಂಡನ ಸಾವಿನ ನಂತರ ತನ್ನ ಹಾಗೂ ಆ ಐದು ಜನ ಮಕ್ಕಳನ್ನು ಸಾಕುವ ಜವಾಬ್ದಾರಿ ಅವರ ಹೆಂಡತಿ ಪ್ಯಾಟ್ರೀಷಿಯಾರ ಹೆಗಲಿಗೆ ವರ್ಗಾಯಿಸಲ್ಪಟ್ಟಿತು. ಅಂತಹ ಪರಿಸ್ಥಿತಿಯಲ್ಲೂ ಪ್ಯಾಟ್ರೀಷಿಯಾ ಗಂಡನ ಕೊನೆಯ ಇಚ್ಛೆಯಂತೆ ಮನೆಯನ್ನು ಮಾರಿ ಬಂದ ಸಂಪೂರ್ಣ ಹಣವನ್ನು ‘ಸ್ನೇಹ’ವನ್ನು ಪ್ರಾರಂಭಿಸಲು, ಡಾ.ಅರ್ಮಿಡಾ ಎಷ್ಟೇ ನಿರಾಕರಿಸಿದರೂ ಅವರಿಗೆ ಕೊಟ್ಟು ಹೋದರು.

ಈ ನಡುವೆ ಡಾ.ಅರ್ಮಿಡಾರ ಬದುಕಿನಲ್ಲೂ ಒಂದು ದುರಂತ ನಡೆಯಿತು. ಅವರ ಒಬ್ಬಳೇ ಮಗಳು ರೋಮಿಲಾ ಫೆರ್ನಾಂಡೀಸ್. ಆಕೆಗೆ ಕ್ಯಾನ್ಸರ್ ಕಾಯಿಲೆ ಇತ್ತು. ೨೦೧೪ರಲ್ಲಿ ಆಕೆ ಅದರಿಂದಾಗಿ ತೀರಿಕೊಂಡಳು. ಅರ್ಮಿಡಾರಂತೆ ಅವರ ಪತಿ ಡಾ.ರೂಯ್ ಫೆರ್ನಾಂಡೀಸರೂ ಕೂಡ ಒಬ್ಬ ವೈದ್ಯರು. ಅವರು ಚರ್ಮ ತಜ್ಞರು. ತಂದೆ ತಾಯಿ ಇಬ್ಬರೂ ವೈದ್ಯರಾಗಿದ್ದರಿಂದ ಆಕೆಗೆ ಒಳ್ಳೆಯ ವೈದ್ಯಕೀಯ ಆರೈಕೆಯೇನೋ ಸಿಕ್ಕಿತು. ಆದರೆ ಆಕೆಯ ಕೊನೆಯ ದಿನಗಳಲ್ಲಿ ಅರ್ಮಿಡಾ ಮತ್ತು ರೂಯ್ ಫೆರ್ನಾಂಡೀಸರಿಗೆ ತಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಪ್ರೀತಿ, ಸಾಂತ್ವನದ ಆರೈಕೆಯನ್ನು ನೀಡಲಾಗಲಿಲ್ಲ. ಆ ಕೊರಗು ಅವರಿಬ್ಬರನ್ನು ಕಾಡತೊಡಗಿತು. ಆಗ ಅವರಿಬ್ಬರೂ ಸೇರಿ ೨೦೧೭ರಲ್ಲಿ ಮಗಳ ನೆನಪಿಗಾಗಿ ಮುಂಬೈಯ ಬಾಂದ್ರಾದಲ್ಲಿ ‘ರೋಮಿಲಾ ಪಾಲಿಎಟಿವ್ ಕೇರ್’ ಎಂಬ ಹೆಸರಲ್ಲಿ ಕ್ಯಾನ್ಸರ್ ತಗಲಿ ಕೊನೆಯ ದಿನಗಳನ್ನು ಎದುರು ನೋಡುವ ರೋಗಿಗಳ ಕೊನೆಗಾಲದ ಆರೈಕೆಗಾಗಿ ಒಂದು ಆಶ್ರಮವನ್ನು ಪ್ರಾರಂಭಿಸಿದರು.

ರೋಮಿಲಾ ಪಾಲಿಎಟಿವ್ ಕೇರ್‌ನಲ್ಲಿ ಇಬ್ಬರು ನರ್ಸ್‌ಗಳು, ಇಬ್ಬರು ಮಾನಸಿಕ ತಜ್ಞರು, ಆರು ಜನ ಸ್ವಯಂ ಸೇವಕ ವೈದ್ಯರು, ಇಪ್ಪತ್ತು ಜನ ವಿಶೇಷಜ್ಞರು, ಆಹಾರ ತಜ್ಞರು, ವೃತ್ತಿಪರ ಥೆರಪಿಸ್ಟ್‌ಗಳ ದೊಡ್ಡದೊಂದು ತಂಡವಿದ್ದು ಅವರು ಕಾನ್ಸರಿನ ಕೊನೆಯ ಹಂತದಲ್ಲಿರುವ ರೋಗಿಗಳ ಆರೈಕೆ ಮಾಡುತ್ತಾರೆ. ಕ್ಯಾನ್ಸರಿನ ಕೊನೆಯ ಹಂತದಲ್ಲಿರುವುದರಿಂದ ರೋಗಿ ಸಾವಿನ ತೀರಾ ಸನಿಹದಲ್ಲಿರುವುದು ಖಾತರಿಯಾಗಿರುವುದರಿಂದ ವೈದ್ಯರು ರೋಮಿಲಾ ಪಾಲಿಎಟಿವ್ ಕೇರ್‌ನಲ್ಲಿ ರೋಗಿಯ ಕಾಯಿಲೆಯನ್ನು ಗುಣಪಡಿಸುವ ಪ್ರಯತ್ನವನ್ನು ಮಾಡುವುದಿಲ್ಲ. ಬದಲಿಗೆ ರೋಗಿಗೆ ತನ್ನ ಕೊನೆಯ ದಿನಗಳು ಆದಷ್ಟು ಮಟ್ಟಿಗೆ ಸಹನೀಯವಾಗುವಂತೆ ಆತನ/ಆಕೆಯ ಆರೈಕೆ ಮಾಡುತ್ತಾರೆ. ಅವರು ಎಷ್ಟು ಪ್ರೀತಿ, ಕಾಳಜಿಯಿಂದ ರೋಗಿಯ ಆರೈಕೆ ಮಾಡುತ್ತಾರೆಂದರೆ, ಧಾರಾವಿ ಕೊಳೆಗೇರಿಯಿಂದ ಬಂದ ಒಬ್ಬ ಕ್ಯಾನ್ಸರ್ ರೋಗಿಯು, ‘ನನಗೆ ಕ್ಯಾನ್ಸರ್ ತಗಲಿದ್ದಕ್ಕೆ ನಿಜಕ್ಕೂ ಸಂತೋಷ ಪಡುತ್ತಿದ್ದೇನೆ.

ಏಕೆಂದರೆ, ನನ್ನ ಈವರೆಗಿನ ಇಡೀ ಬದುಕಿನಲ್ಲಿ ನಾನು ಇಷ್ಟು ಪ್ರೀತಿಯನ್ನು ಯಾವತ್ತೂ ನೋಡಿರಲಿಲ್ಲ’ ಎಂದು ಹೇಳಿ ಕಣ್ಣೀರು ಹಾಕಿದ್ದನು. ಕೇಂದ್ರ ಸರ್ಕಾರ ಇದೇ ಜನವರಿ ೨೬ರಂದು ಡಾ. ಅರ್ಮಿಡಾ ಫೆರ್ನಾಂಡೀಸರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಿದೆ.

” ಡಾ.ಅರ್ಮಿಡಾ ಫೆರ್ನಾಂಡೀಸ್ ೧೯೯೦ರಲ್ಲಿ ‘ಸ್ನೇಹ’ (ಸೊಸಾಯ್ಟಿ ಫಾರ್ ನ್ಯೂಟ್ರೀಶನ್, ಎಜುಕೇಶನ್ ಆಂಡ್ ಹೆಲ್ತ್ ಆಕ್ಷನ್) ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರ ಮೂಲಕ ಅವರು ಮುಂಬೈ ಕೊಳೆಗೇರಿಗಳಲ್ಲಿ ಶಿಶು ಮರಣ, ಬಾಣಂತಿಯರ ಸಾವು, ಮಕ್ಕಳ ಪೋಷಕಾಂಶದ ಕೊರತೆ, ಸ್ತ್ರೀ ಶೋಷಣೆ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.”

Tags:
error: Content is protected !!