ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ ಕ್ರಾಸ್ ಬಳಿಯ ಹೆದ್ದಾರಿ ಟೋಲ್ ಪ್ಲಾಜಾ ಬಳಿ ಶನಿವಾರ ಜರುಗಿದೆ.
ತಾಲ್ಲೂಕಿನ ಬಿಜಿಪುರ ಹೋಬಳಿಯ ಹೊಸಹಳ್ಳಿ ಕ್ರಾಸ್ ಬಳಿಯ ಹೆದ್ದಾರಿ ಟೋಲ್ ಪ್ಲಾಜಾ ಬಳಿ ಶನಿವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಕೊಳ್ಳೇಗಾಲ ಹಾಗೂ ಮಳವಳ್ಳಿ ಕಡೆಯಿಂದ ಬರುತ್ತಿದ್ದ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಎರಡು ಕಾರುಗಳ ಮುಂಭಾಗ ನಜ್ಜು ಗುಜ್ಜಾಗಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಕಾರಿನಲ್ಲಿದ್ದ 10 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳ ಪೈಕಿ ಬಹುತೇಕ ಮಹಿಳೆಯರಾಗಿದ್ದು ಬೆಂಗಳೂರಿನವರು ಎಂದು ತಿಳಿದು ಬಂದಿದೆ.
ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಎಲ್ಲರಿಗೂ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಚಿಕ್ಕ ಮುತ್ತತ್ತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸ್ಥಳದಲ್ಲೇ ನಿಂತು ತಕ್ಷಣ ಸ್ಥಳಕ್ಕೆ ಆಂಬುಲೆನ್ಸ್ ಬರುವಂತೆ ಮಾಡಿ ಗಾಯಾಳುಗಳು ಸಕಾಲಕ್ಕೆ ಆಸ್ಪತ್ರೆ ತಲುಪಲು ನೆರವಾಗಿದ್ದಾರೆ. ಎರಡು ವಾಹನಗಳನ್ನು ವಶಕ್ಕೆ ಪಡೆದಿರುವ ಬೆಳಕವಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




