ಮೈಸೂರಿನ ಕುವೆಂಪು ನಗರದಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಪ್ರತಿ ದಿನ ಹಿರಿಯ ನಾಗರಿಕರು ಬರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ನೂರಾರು ಓದುಗರು ಇಲ್ಲಿಗೆ ಬಂದು ಅಭ್ಯಾಸ ಮಾಡುತ್ತಾರೆ. ಮೈಸೂರಿನ ಪೀಪಲ್ಸ್ ಪಾರ್ಕ್ ನಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಹೊರತುಪಡಿಸಿದರೆ, ಅತಿ ಹೆಚ್ಚಿನ ಓದುಗರನ್ನು ಹೊಂದಿರುವ ಗ್ರಂಥಾಲಯ ಇದಾಗಿದೆ.
ಆದರೆ ಇಲ್ಲಿ ಸ್ಥಳದ ಅಭಾವದಿಂದಾಗಿ ಹಿರಿಯ ನಾಗರಿಕರು ಇಕ್ಕಟ್ಟಿನಲ್ಲಿ, ನಿಂತುಕೊಂಡೇ ದಿನ ಪತ್ರಿಕೆಗಳನ್ನು ಓದುವಂತಾಗಿದೆ. ಈ ಗ್ರಂಥಾಲಯದ ಅರ್ಧ ಭಾಗವು ವಿದ್ಯಾರ್ಥಿಗಳು ಓದಲು ಮೀಸಲಾಗಿದೆ. ಇಲ್ಲಿ ಸ್ಥಳದ ಅಭಾವಿರುವುದರಿಂದ ಈ ಗ್ರಂಥಾಲಯದ ಮೇಲೆ ಮೊದಲ ಮಹಡಿಯನ್ನು ನಿರ್ಮಾಣ ಮಾಡಿ, ಅಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅನುಕೂಲ ಮಾಡಿಕೊಡಬೇಕು ಹಾಗೂ ಈಗ ಗ್ರಂಥಾಲಯದ ಒಳ ಭಾಗದಲ್ಲಿರುವ ಶೌಚಾಲಯವನ್ನು ಸಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದರಿಂದ ಓದುಗರು ದುರ್ವಾಸನೆಯಿಂದ ಬಳಲುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಶೌಚಾಲಯವನ್ನು ಗ್ರಂಥಾಲಯದ ಹೊರಭಾಗದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಹೊರಗೆ ಸಾಕಷ್ಟು ಜಾಗ ಇರುವುದರಿಂದ, ಗ್ರಂಥಾಲಯದ ಹೊರ ಭಾಗಕ್ಕೆ ಶೌಚಾಲಯವನ್ನು, ಸ್ಥಳಾಂತರ ಮಾಡಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ , ಮೈಸೂರು





