Mysore
19
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ನಗರ ಪಾಲಿಕೆಯಲ್ಲಿ ವೈದ್ಯ ಪದವಿ ಆರೋಗ್ಯಾಧಿಕಾರಿಗೆ ಕೊಕ್: ಇಂಜಿನಿಯರ್‌ಗೆ ಹೊಸ ಹುದ್ದೆ!

ಎಚ್.ಎಸ್.ದಿನೇಶ್‌ಕುಮಾರ್

ಸರ್ಕಾರದ ನಿರ್ಧಾರಕ್ಕೆ ಮಾಜಿ ಮಹಾಪೌರರು, ಮಾಜಿ ಸದಸ್ಯರ ವಿರೋಧ

ಮೈಸೂರು: ಬಿಬಿಎಂಪಿ ಹೊರತುಪಡಿಸಿ ಮೈಸೂರು ನಗರಪಾಲಿಕೆ ಸೇರಿದಂತೆ ರಾಜ್ಯದ ಉಳಿದ ಮಹಾನಗರಪಾಲಿಕೆಗಳಲ್ಲಿ ಇನ್ನು ಮುಂದೆ ವೈದ್ಯಕೀಯ ಪದವಿ ಪಡೆದ ಆರೋಗ್ಯಾಧಿಕಾರಿಗಳು ಇರುವುದಿಲ್ಲ. ಬದಲಾಗಿ ಕಾರ್ಯಪಾಲಕಅಭಿಯಂತರರು ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

ಇಂತಹದೊಂದು ಅವೈಜ್ಞಾನಿಕ ತೀರ್ಮಾನವನ್ನು ನಗರಾಭಿವೃದ್ಧಿ ಇಲಾಖೆ ಕೈಗೊಂಡಿದೆ. ಆರೋಗ್ಯಾಧಿಕಾರಿಗಳು ನಿರ್ವಹಿಸುತ್ತಿದ್ದ ಕೆಲಸವನ್ನು ಇನ್ನು ಮುಂದೆ ಕಾರ್ಯಪಾಲಕ ಅಭಿಯಂತರರು (ಪರಿಸರ) ನಿರ್ವಹಿಸಲಿದ್ದಾರೆ.

ಈ ಸಂಬಂಧ ಸರ್ಕಾರದ ಆದೇಶ ಅಧಿಕೃತವಾಗಿ ಆಯಾ ನಗರಪಾಲಿಕೆ ಆಯುಕ್ತರ ಕೈಸೇರಿದೆ. ನಗರಪಾಲಿಕೆಯಲ್ಲಿ ಆರೋಗ್ಯಾಧಿಕಾರಿ ಹುದ್ದೆಯ ಅವಶ್ಯಕತೆ ಇಲ್ಲ ಎಂಬ ತೀರ್ಮಾನಕ್ಕೆ ಇಲಾಖೆ ಬಂದಿದ್ದೇಕೆ ಎಂಬುದು ಆಶ್ಚರ್ಯ ಹುಟ್ಟಿಸುತ್ತದೆ. ನಗರದ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಕೂಡ ನಗರಪಾಲಿಕೆ ಮೇಲಿರುತ್ತದೆ.

ನಗರಪಾಲಿಕೆ ವ್ಯಾಪ್ತಿಗೆ ಬರುವ ಹೋಟೆಲ್ಗಳು, ವಸತಿಗೃಹಗಳು, ಫುಟ್‌ಪಾತ್ ಹೋಟೆಲ್ ಗಳು, ಮಾಲ್‌ಗಳು, ಹಾಸ್ಟಲ್, ಪಿಜಿ, ಕಲ್ಯಾಣ ಮಂಟಪಗಳು, ಹಾಗೂ ಇನ್ನಿತರ ಸಂಸ್ಥೆಗಳ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸುವ ಹಾಗೂ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸುವ ಕೆಲಸ ಆರೋಗ್ಯಾಧಿಕಾರಿಗಳದ್ದಾಗಿತ್ತು.

ಇದರ ಜೊತೆಗೆ ನಗರದ ಸ್ವಚ್ಛತೆ, ಪೌರ ಕಾರ್ಮಿಕರ ನಿರ್ವಹಣೆ. ಸ್ವಚ್ಛತೆಗೆ ತೆಗೆದುಕೊಳ್ಳ ಬೇಕಾದ ಕ್ರಮಗಳು, ತಾಜ್ಯ ವಿಲೇವಾರಿ, ಪ್ಲಾಸ್ಟಿಕ್ ಮಾರಾಟ, ಬಳಕೆ ತಡೆಗಟ್ಟುವ ಕೆಲಸವನ್ನು ಇಷ್ಟು ದಿನ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿತ್ತು.

ವೈದ್ಯಕೀಯ ಪದವಿ ವ್ಯಾಸಂಗ ಮಾಡಿದವರಿಗೆ ಈ ಎಲ್ಲಾ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ನಗರಪಾಲಿಕೆಯಲ್ಲಿ ಆರೋಗ್ಯಾಧಿಕಾರಿಗಳ  ಹುದ್ದೆಯನ್ನು ಸೃಷ್ಟಿಸಿ ಆರೋಗ್ಯ ಇಲಾಖೆ ಮೂಲಕ ವೈದ್ಯರ ಎರವಲು ಸೇವೆಯನ್ನು ಪಡೆದುಕೊಳ್ಳಲಾಗುತ್ತಿತ್ತು. ಇದೀಗ ವೈದ್ಯರ ಅವಶ್ಯಕತೆ ನಗರಪಾಲಿಕೆಗೆ ಇಲ್ಲ ಎಂಬ ತೀರ್ಮಾನಕ್ಕೆ ನಗರಾಭಿವೃದ್ಧಿ ಸಚಿವರು ಬಂದಿದ್ದಾರೆ. ಈ ಎಲ್ಲಾ ಕೆಲಸಗಳನ್ನು ಕಾರ್ಯಪಾಲಕ ಅಭಿಯಂತರರು ನಿರ್ವಹಿಸಲಿದ್ದಾರೆ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದೀಗ ನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ವೈದ್ಯರುಗಳನ್ನು ಅವರ ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇದು ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಅಭಿಪ್ರಾಯ. ಮಳೆ ಹಾಗೂ ಬೇಸಿಗೆ ಸಂದರ್ಭಗಳಲ್ಲಿ ನಗರ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಮಾಮೂಲು. ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿ ಜನರ ಆರೋಗ್ಯಕ್ಕೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಇಂಜಿನಿಯರಿಂಗ್ ವ್ಯಾಸಂಗ ಮಾಡಿದವರಿಗೆ ಹೇಗೆ ತಿಳಿಯಲು ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆ.

ಇದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಅವರುಗಳ ಅನಿಸಿಕೆ. ನಗರಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿ ಹುದ್ದೆ ಅತ್ಯವಶ್ಯ. ಈಗಲಾದರೂ ಸರ್ಕಾರ ಈ ಹುದ್ದೆಯನ್ನು ಕೈಬಿಡುವ ನಿರ್ಧಾರವನ್ನು ಮರುಪರಿಶೀಲನೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

” ಆರೋಗ್ಯಾಧಿಕಾರಿ ಎಂದರೆ ಸ್ವಚ್ಛತೆಗೆ ಮಾತ್ರ ಸೀಮಿತ ಎಂದು ಭಾವಿಸುವುದು ತಪ್ಪು. ಕೆಲ ಸಂದರ್ಭಗಳಲ್ಲಿ ನಗರದ ಬಡಾವಣೆಗಳಲ್ಲಿ ಡೆಂಗ್ಯೂ, ಕಾಲರಾದಂತಹ ಕಾಯಿಲೆಗಳು ಜನರನ್ನು ಬಾಧಿಸುತ್ತವೆ. ಇಂತಹ ಸಂದರ್ಭಗಳಲ್ಲಿ ವೈದ್ಯರ ನೆರವು, ಅವರ ಸಲಹೆ, ಸೂಚನೆ ಅತ್ಯಗತ್ಯ. ವೈದ್ಯರು ಮಾಡುವ ಕೆಲಸಗಳನ್ನು ಇಂಜಿನಿಯರ್‌ಗಳು ಮಾಡಲು ಸಾಧ್ಯವಿಲ್ಲ. ಈ ಸಂಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಲಾಗುವುದು.”

ಅಯೂಬ್‌ಖಾನ್, ಮಾಜಿ ಮಹಾಪೌರರು

” ಸರ್ಕಾರದ ಈ ನಿರ್ಧಾರ ಸಂಪೂರ್ಣ ಅವೈಜ್ಞಾನಿಕ. ಇಂಜಿನಿರ್‌ಗಳು ವೈದ್ಯರ ಕೆಲಸವನ್ನು ಹೇಗೆ ಮಾಡುತ್ತಾರೆ ಎಂಬ ಕನಿಷ್ಠ ಪ್ರಜ್ಞೆಯೂ ಆಡಳಿತ ನಡೆಸುವವರಲ್ಲಿ ಇರುವುದಿಲ್ಲ ಎಂದರೆ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ಈ ಸಂಬಂಧ ಮಾಜಿ ಮಹಾಪೌರರುಗಳು ಸೇರಿ ಆರೋಗ್ಯಾಧಿಕಾರಿ ಹುದ್ದೆಯಲ್ಲಿ ವೈದ್ಯರೇ ಇರಬೇಕು ಎಂಬುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುತ್ತೇವೆ.”

ಆರ್.ಲಿಂಗಪ್ಪ, ಮಾಜಿ ಮಹಾಪೌರರು

” ಕೋವಿಡ್ ಸಂದರ್ಭದಲ್ಲಿ ನಗರಪಾಲಿಕೆಯ ಆರೋಗ್ಯಾಧಿಕಾರಿಗಳ ತಂಡ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ. ಸ್ಯಾನಿಟೈಜ್, ಔಷಧ ವಿತರಣೆ ಹಾಗೂ ಇನ್ನಿತರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದೆ. ಗ್ರೇಟರ್ ಮೈಸೂರು ಆಗುತ್ತಿರುವ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಹುದ್ದೆಗೆ ಪರಿಸರ ಇಂಜಿನಿರ್‌ರನ್ನು ನೇಮಕ ಮಾಡಿದಲ್ಲಿ ಅರ್ಥವೇ ಇರುವುದಿಲ್ಲ.”

ಬಿ.ವಿ.ಮಂಜುನಾಥ್, ನಗರಪಾಲಿಕೆ ಮಾಜಿ ಸದಸ್ಯ.

 

 

Tags:
error: Content is protected !!