Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎವ್ಗನ್ ಬಾವ್ಚಾರ್ ಎಂಬ ಕಣ್ಣಿಲ್ಲದ ಫೋಟೋಗ್ರಾಫರ್!

ಪಂಜು ಗಂಗೊಳ್ಳಿ 

ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ

ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು ವರ್ಷದವರಾಗಿದ್ದಾಗ ಅವರ ತಂದೆ ತೀರಿ ಹೋದರು. ಎವ್ಗನ್ ಅತ್ಯಂತ ಚಟುವಟಿಕೆಯ ಬಾಲಕನಾಗಿದ್ದ ಕಾರಣ ಒಂದು ಕ್ಷಣವೂ ಒಂದೆಡೆ ಸುಮ್ಮನೆ ಕೂರುತ್ತಿರಲಿಲ್ಲ. ಹನ್ನೊಂದು ವರ್ಷಗಳ ಕಾಲ ಅವರ ಜೀವನ ಇತರ ಸಾಮಾನ್ಯ ಮಕ್ಕಳಂತೆಯೇ ನಡೆಯಿತು-ಶಾಲೆಗೆ ಹೋಗುವುದು, ತನ್ನ ತಂಗಿಯ ಜೊತೆ ಆಡುವುದು. ಒಂದು ದಿನ ಹೀಗೆಯೇ ಮರಗಳ ತೋಪಿನಲ್ಲಿ ಆಟವಾಡುತ್ತಿದ್ದರು. ಆಗ ಒಂದು ಮರದ ಗೆಲ್ಲು ತುಂಡಾಗಿ, ನೇರವಾಗಿ ಅವರ ಎಡಗಣ್ಣನ್ನು ಚುಚ್ಚಿ ಒಳ ಹೊಕ್ಕಿತು. ವೈದ್ಯರು ಏನೂ ಮಾಡಲಾಗದೆ ಆ ಕಣ್ಣನ್ನು ತೆಗೆದು ಕೃತಕ ಕಣ್ಣನ್ನು ಜೋಡಿಸಿದರು.

ಒಂದು ಕಣ್ಣು ಕಳೆದುಕೊಂಡರೂ ಎವ್ಗನ್‌ರ ಚಟುವಟಿಕೆಗಳೇನೂ ಕಡಿಮೆಯಾಗಲಿಲ್ಲ. ಕೃತಕ ಕಣ್ಣು ಜೋಡಿಸಿದ ಕೆಲವು ತಿಂಗಳ ನಂತರ ಒಂದು ದಿನ ನೆಲದಲ್ಲಿ ಹೂತಿಟ್ಟಿದ್ದ ಒಂದು ಡೈನಾಮೈಟ್ ಸ್ಛೋಟಗೊಂಡು ಅವರ ಬಲಗಣ್ಣು ಕೂಡಾ ಹೋಯಿತು. ವಾಸ್ತವದಲ್ಲಿ, ಆ ಘಟನೆಯಲ್ಲಿ ಅವರ ಜೀವವೇ ಹೋಗಬೇಕಿತ್ತು. ಆದರೆ, ಅವರ ಎಡಗಣ್ಣಿನ ಜಾಗದಲ್ಲಿ ಕೂರಿಸಿದ ಕೃತಕ ಕಣ್ಣಿನಿಂದಾಗಿ ಬಚಾವಾದರು. ಹೇಗೆಂದರೆ, ಡೈನಾಮೈಟಿಂದ ಸಿಡಿದ ಚೂಪಾದ ವಸ್ತುವೊಂದು ಅವರ ಕೃತಕ ಕಣ್ಣಿಗೆ ಚುಚ್ಚಿಕೊಂಡು ಅಲ್ಲಿಯೇ ಉಳಿಯಿತು. ಇಲ್ಲವಾಗಿದ್ದರೆ ಅದು ಸೀದಾ ಅವರ ಮೆದುಳಿನೊಳಕ್ಕೆ ಹೊಕ್ಕುತ್ತಿತ್ತು.

ಎರಡು ವರ್ಷಗಳ ವೈದ್ಯಕೀಯ ಆರೈಕೆಯ ನಂತರ ಅವರನ್ನು ಒಂದು ಅಂಧರ ಶಾಲೆಗೆ ಸೇರಿಸಲಾಯಿತು. ಆ ಶಾಲೆ ಅವರ ಬದುಕಿನ ದಿಕ್ಕನ್ನು ಬದಲಾಯಿಸಿತು. ೧೯೬೨ರಲ್ಲಿ ತನ್ನ ೧೬ನೇ ವಯಸ್ಸಿನಲ್ಲಿ ಎವ್ಗನ್ ಕೈಗೆ ಒಂದು ಕ್ಯಾಮೆರಾ ಸಿಕ್ಕಿತು. ಆಗ ಅವರಿಗೊಬ್ಬಳು ಗರ್ಲ್ ಫ್ರೆಂಡ್ ಇದ್ದಳು. ಆ ಕ್ಯಾಮೆರಾದಿಂದ ಅವಳ ಫೋಟೋಗಳನ್ನು ತೆಗೆದರು. ಆ ಫೋಟೋಗಳು ಬಹಳ ಚೆನ್ನಾಗಿ ಬಂದವು. ಅವರ ಸ್ನೇಹಿತರು ಅವುಗಳನ್ನು ನೋಡಿ ಪ್ರಶಂಸೆ ಮಾಡಿ ಹುರಿದುಂಬಿಸಿದರು. ಫೋಟೋ ಎಷ್ಟೇ ಚೆನ್ನಾಗಿ ಬಂದಿದ್ದರೂ ಕಣ್ಣಿಲ್ಲದ ತಾನು ಮುಂದೆ ಒಬ್ಬ ಫೋಟೋಗ್ರಾಫರ್ ಆಗಿ ಜೀವನ ನಡೆಸಲಾರೆ ಎಂದು ಲೆಕ್ಕ ಹಾಕಿದ ಎವ್ಗನ್, ೧೯೬೩ರಲ್ಲಿ ಲೂಬ್ಲುಯಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಗಿಸಿ, ಸ್ಥಳೀಯ ಸ್ವಿಚ್ ಬೋರ್ಡ್ ಕಚೇರಿಯಲ್ಲಿ ಟೆಲಿಫೋನ್ ಸ್ವಿಚ್ ಆಪರೇಟರ್ ಆಗಿ ಉದ್ಯೋಗಕ್ಕೆ ಸೇರಿದರು.

ಆದರೆ, ಕೆಲವು ವರ್ಷಗಳ ನಂತರ ಎವ್ಗನ್‌ಗೆ ಟೆಲಿಫೋನ್ ಸ್ವಿಚ್ ಆಪರೇಟರ್ ಉದ್ಯೋಗ ತನ್ನದಲ್ಲ ಎಂದು ಅನ್ನಿಸ ತೊಡಗಿ ಅದನ್ನು ಬಿಟ್ಟರು. ೧೯೬೯ರಲ್ಲಿ ಪುನಃ ಲುಬ್ಲುಯಾನ ವಿಶ್ವವಿದ್ಯಾಲಯ ಸೇರಿ ೧೯೭೨ರಲ್ಲಿ ಪದವಿ ಪಡೆದು, ನಂತರ ೧೯೭೫ರಲ್ಲಿ ಪ್ಯಾರಿಸ್‌ನ ಸೊರ್ಬೋನ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಓದಿದರು. ಅದರ ಮುಂದಿನ ವರ್ಷ ‘ನ್ಯಾಷನಲ್ ರಿಸರ್ಚ್ ಕೌನ್ಸಿಲ್’ ನಲ್ಲಿ ಕೆಲಸಕ್ಕೆ ಸೇರಿ, ಬಹಳ ವರ್ಷ ಅಲ್ಲಿಯೇ ಮುಂದುವರಿದರು.

ಇದರ ನಡುವೆ ಎವ್ಗನ್ ಬಾವ್ಚಾರ್ ತಮ್ಮ ಫೋಟೋಗ್ರಫಿ ಹವ್ಯಾಸವನ್ನು ಮುಂದುವರಿಸಿದ್ದರು. ೧೯೮೭ರಲ್ಲಿ ‘ಬ್ಯಾಕ್ ಸ್ಕ್ವಾರ್ ಆನ್ ಯುವರ್ ವೈಟ್ ನೈಟ್ಸ್’ ಎಂಬ ತಮ್ಮ ಪ್ರಪ್ರಥಮ ಫೊಟೋ ಪ್ರದರ್ಶನವನ್ನು ಏರ್ಪಡಿಸಿದರು. ಅದು ಬಹಳ ಯಶಸ್ವಿಯಾಯಿತು. ಮುಂದೆ ‘ನಾರ್ಸಿಸ್ಸಸ್ ವಿದೌಟ್ ಹಿಸ್ ಮಿರರ್’, ‘ಇಮೇಜಸ್ ಫ್ರಮ್ ಅದರ್ ಪ್ಲೇಸಸ್’, ‘ಕ್ಲೋಸ್ ಅಪ್ ಮೆಮೊರೀಸ್’ ಮೊದಲಾದ ಹೆಸರುಗಳಲ್ಲಿ ಹಲವು ಪ್ರದರ್ಶನಗಳನ್ನು ನಡೆಸಿದರು. ಅವರ ಫೋಟೋಗಳನ್ನು ಬಹಳವಾಗಿ ಮೆಚ್ಚಿಕೊಂಡ ‘ಸಿಟಿ ಆಫ್ ಪ್ಯಾರಿಸ್’ ನ ಅಧಿಕಾರಿಗಳು ೧೯೮೮ರಲ್ಲಿ ತಮ್ಮ ಅಧಿಕೃತ ಫೋಟೋಗ್ರಾಫರ್ ಆಗಿ ನೇಮಿಸಿಕೊಂಡರು. ಪ್ಯಾರಿಸ್ ಮಾತ್ರವಲ್ಲದೆ ಜರ್ಮನಿ, ಮೆಕ್ಸಿಕೋ, ಬ್ರೆಝಿಲ್, ಕೆನಡಾ ಮತ್ತು ಇಟಲಿ ಮೊದಲಾದ ದೇಶಗಳಲ್ಲೂ ತಮ್ಮ ಫೋಟೋ ಪ್ರದರ್ಶನ ನಡೆಸಿದರು. ಯುರೋಪ್ ಮತ್ತು ಲ್ಯಾಟಿನ್ ಅಮೆರಿಕ ಶಾಲೆಗಳಲ್ಲಿ ಕಲಿಸಿದರು.

ಸಾಮಾನ್ಯ ಫೋಟೋಗ್ರಾಫರ್‌ಗಳು ತಮ್ಮ ಕಣ್ಣುಗಳನ್ನು ಬಳಸಿ ಫೋಟೋಗಳನ್ನು ಕ್ಲಿಕ್ಕಿಸಿದರೆ ಎವ್ಗನ್ ಮುಖ್ಯವಾಗಿ ತಮ್ಮ ಕೈಗಳನ್ನು ಬಳಸಿ, ಅಂದರೆ ವಸ್ತುಗಳನ್ನು ಸ್ಪರ್ಶಿಸುವ ಮೂಲಕ, ಅವುಗಳನ್ನು ಸೆರೆ ಹಿಡಿಯುತ್ತಾರೆ. ವಸ್ತುಗಳ ಸ್ಪರ್ಶ ಮಾತ್ರವಲ್ಲದೆ ಅವುಗಳು ಹೊರ ಸೂಸುವ ವಾಸನೆ, ಪರಿಮಳ ಮತ್ತು ಉಷ್ಣಾಂಶ ಮೊದಲಾದವುಗಳನ್ನು ಕೂಡ ತಮ್ಮ ಗ್ರಹಿಕೆಗೆ ಸಹಾಯಕವಾಗಿ ಬಳಸಿಕೊಳ್ಳುತ್ತಾರೆ. ಹಾಗಾಗಿ, ಅವರ ಚಿತ್ರಗಳು ವಸ್ತುಗಳ ವಾಸ್ತವ ಚಿತ್ರಕ್ಕಿಂತಲೂ ಮಿಗಿಲಾಗಿ ಆ ವಸ್ತುಗಳ ಬಗ್ಗೆ ಎವ್ಗನ್‌ರ ಮನಸ್ಸಿನಲ್ಲಿ ಮೂಡುವ ಮನೋ ಕಲಾಕೃತಿಗಳಂತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅಗಾಧ ಪ್ರಮಾಣದಲ್ಲಿ ಬೆಳೆದಿರುವ ಡಿಜಿಟಲ್ ಟೆಕ್ನಾಲಜಿಯನ್ನೂ ಸಹಾಯಕವಾಗಿ ಬಳಸುತ್ತಾರೆ. ವಾಯ್ಸ್ (ವಿಒಐಸಿಇ) ಎಂಬುದು ಅಂತಹ ಒಂದು ಡಿಜಿಟಲ್ ತಂತ್ರಾಂಶ. ಈ ತಂತ್ರಾಂಶದಲ್ಲಿ ದೃಶ್ಯವು ಶಬ್ದವಾಗಿ ಪರಿವರ್ತನೆ ಹೊಂದಿ, ಕಣ್ಣಿಲ್ಲದ ಫೋಟೋಗ್ರಾಫರ್‌ಗಳು ತಾವು ಸೆರೆ ಹಿಡಿಯುವ ವಸ್ತುಗಳ ಬಗ್ಗೆ ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಲು ಸಹಾಯವಾಗುತ್ತದೆ.

ಎವ್ಗನ್ ಬಾವ್ಚಾರ್ ವಿಶ್ವದಾದ್ಯಂತ ನೂರಾರು ಜನ ಅಂಧರು ಫೋಟೋಗ್ರಾಫಿಯಲ್ಲಿ ಆಸಕ್ತಿ ತಳೆಯಲು ಪ್ರೇರೇಪಿಸಿದ್ದಾರೆ. ಫೋಟೋಗ್ರಫಿ ಹವ್ಯಾಸದ ಕಾರ್ಪೋರೇಟ್ ಉದ್ಯೋಗಿಯಾಗಿರುವ ಮುಂಬೈಯ ಪಾರ್ಥೋ ಭೌಮಿಕ್ ಅಂತಹವರಲ್ಲೊಬ್ಬರು. ಎವ್ಗನ್ ಬಾವ್ಚಾರ್‌ರಿಂದ ಸೂರ್ತಿ ಹೊಂದಿದ ಅವರು ‘ಬ್ಲೆ ಂಡ್ ವಿದ್ ಕ್ಯಾಮೆರಾ’ ಎಂಬ ಕಾರ್ಯಕ್ರಮದ ಮೂಲಕ ಕಣ್ಣು ದೃಷ್ಟಿಯಿಲ್ಲದ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರ್ರಫಿ ಕಲಿಸುತ್ತಿದ್ದಾರೆ. ಹುಟ್ಟು ಅಂಧರಾದ ಭಾವೇಶ್ ಪಟೇಲ್ ಅವರ ವಿದ್ಯಾರ್ಥಿಗಳಲ್ಲೊಬ್ಬರು. ಅವರು ಯೂನಿಲೀವರ್ ಕಂಪೆನಿಗಾಗಿ ನಟಿ ಕತ್ರೀನಾ ಕೈಫ್‌ರ ಒಂದು ಫ್ಯಾಷನ್ ಶೂಟ್ ಮಾಡಿ ಕೊಟ್ಟಿದ್ದರು. ಅದಕ್ಕಾಗಿ ಅವರು ಇತರ ಯಾವುದೇ ಸಾಮಾನ್ಯ ಫೋಟೋಗ್ರಾಫರ್‌ಗಳು ಪಡೆಯುಂತಹ ಸಂಭಾವನೆಯನ್ನು ಪಡೆದಿದ್ದರು

” ಸಾಮಾನ್ಯ ಫೋಟೋಗ್ರಾಫರ್‌ಗಳು ತಮ್ಮ ಕಣ್ಣುಗಳನ್ನು ಬಳಸಿ ಫೋಟೋಗಳನ್ನು ಕ್ಲಿಕ್ಕಿಸಿದರೆ ಎವ್ಗನ್ ಮುಖ್ಯವಾಗಿ ತಮ್ಮ ಕೈಗಳನ್ನು ಬಳಸಿ, ಅಂದರೆ ವಸ್ತುಗಳನ್ನು ಸ್ಪರ್ಶಿಸುವ ಮೂಲಕ, ಅವುಗಳನ್ನು ಸೆರೆ ಹಿಡಿಯುತ್ತಾರೆ. ವಸ್ತುಗಳ ಸ್ಪರ್ಶ ಮಾತ್ರವಲ್ಲದೆ ಅವುಗಳು ಹೊರ ಸೂಸುವ ವಾಸನೆ, ಪರಿಮಳ ಮತ್ತು ಉಷ್ಣಾಂಶ ಮೊದಲಾದವುಗಳನ್ನು ಕೂಡ ತಮ್ಮ ಗ್ರಹಿಕೆಗೆ ಸಹಾಯಕವಾಗಿ ಬಳಸಿಕೊಳ್ಳುತ್ತಾರೆ.”

Tags:
error: Content is protected !!