ಮೈಸೂರಿನ ಲಷ್ಕರ್ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿರುವ ವೀರನಗೆರೆಯಲ್ಲಿ ೨-೯-೧೯೮೫ ರಂದು ಉಚಿತ ವಾಚನಾಲಯವನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅಂದಿನ ಮೇಯರ್ ಡಿ.ಸತ್ಯನಾರಾಯಣ ಅವರು ಉದ್ಘಾಟಿಸಿದ್ದರು. ಕೆಲವು ದಿನಗಳ ನಂತರ ಕಟ್ಟಡ ಬಳಕೆಯಾಗದೇ ಬೀಗ ಹಾಕಲಾಯಿತು. ದಶಕಗಳು ಕಳೆದು, ಆ ಕಟ್ಟಡದ ಕಿಟಕಿ, ಬಾಗಿಲುಗಳೂ ಮಾಯವಾದವು ಗ್ರಂಥಾಲಯವು ತ್ಯಾಜ್ಯವಸ್ತುಗಳನ್ನು ಬಿಸಾಡುವ ತಾಣವಾಯಿತು. ೨೦೨೫ರಲ್ಲಿ ಶಿಥಿಲವಾಗಿದ್ದ ಕಟ್ಟಡವನ್ನು ಕೆಡವಿ, ಮೈಸೂರು ಮಹಾನಗರ ಪಾಲಿಕೆಯಿಂದ ಅದೇ ಜಾಗದಲ್ಲಿ ಕಂಟೈನರ್ ತಂದಿಟ್ಟು ಅದನ್ನು ಪೌರ ಬಂಧುಗಳ ವಿಶ್ರಾಂತಿ ಗೃಹವನ್ನಾಗಿ ಪರಿವರ್ತಿಸಲಾಗಿದೆ. ಇದುವರೆಗೂ ಅದರ ಬೀಗ ತೆಗೆದಿಲ್ಲ, ಒಬ್ಬ ಪೌರ ಬಂಧುವೂ ಅದರಲ್ಲಿ ವಿಶ್ರಾಂತಿ ಪಡೆದ ನಿದರ್ಶನವಿಲ್ಲ. ಆದರೆ ಅದರ ಸುತ್ತಲಿನ ಜಾಗ ಇಂದಿಗೂ ಸಾರ್ವಜನಿಕರ ಮೂತ್ರಾಲಯವಾಗಿ ಮತ್ತು ತ್ಯಾಜ್ಯವಸ್ತುಗಳನ್ನು ಬಿಸಾಡುವ ತಾಣವಾಗಿ ಮಾರ್ಪಟ್ಟಿದೆ. ಸಂಬಂಧಪಟ್ಟವರು ಕೂಡಲೇ ಪೌರ ಕಾರ್ಮಿಕರ ವಿಶ್ರಾಂತಿ ಗೃಹದ ಬಾಗಿಲು ತೆರೆದು ಸದ್ಬಳಕೆಯಾಗಲು ಕ್ರಮ ಕೈಗೊಳ್ಳಬೇಕು ಹಾಗೂ ವಿಶ್ರಾಂತಿ ಗೃಹದ ಸುತ್ತಲಿನ ತ್ಯಾಜ್ಯವಸ್ತುಗಳನ್ನು ತೆರವುಗೊಳಿಸುವ ಮೂಲಕ ನೈರ್ಮಲ್ಯ ಕಾಪಾಡಬೇಕು.
-ವಸಂತಕುಮಾರ್ ಮೈಸೂರುಮಠ್, ತಿಲಕ್ ನಗರ, ಮೈಸೂರು





