Mysore
26
clear sky

Social Media

ಮಂಗಳವಾರ, 20 ಜನವರಿ 2026
Light
Dark

ಓದುಗರ ಪತ್ರ: ಸುತ್ತೂರು ಜಾತ್ರೆ ಬಹುಮುಖ ಸಾಂಸ್ಕೃತಿಕ ಸಂಗಮ

ಓದುಗರ ಪತ್ರ

ಸುತ್ತೂರು ಜಾತ್ರಾ ಮಹೋತ್ಸವ ನಿಜಕ್ಕೂ ಸಾಂಸ್ಕೃತಿಕ ಉತ್ಸವವೇ ಆಗಿದೆ. ಎಲ್ಲ ರೀತಿಯ ಮನರಂಜನೆಗಳ ಜೊತೆಗೆ ಮನೋವಿಕಾಸವನ್ನು ಮೂಡಿಸುವ ವಿಶಿಷ್ಟ ಜಾತ್ರೆ ಇದು. ಇಲ್ಲಿ ಏನಿದೆ ಏನಿಲ್ಲ ಎಂದು ಹೇಳುವಂತಿಲ್ಲ. ಎಲ್ಲ ಚಿತ್ರಕಲೆಗಳು, ನಾಟಕಗಳು, ದನಗಳ ಜಾತ್ರೆ, ಸಾಮೂಹಿಕ ವಿವಾಹ, ಧಾರ್ಮಿಕ ಗೋಷ್ಠಿಗಳು ಸೇರಿದಂತೆ ಎಲ್ಲ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳ ಮುಂದೆ ಜನಜಂಗುಳಿ ಇದ್ದೇ ಇರುತ್ತದೆ.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಅಪೂರ್ವ ಮಿಲನವೂ ಈ ಜಾತ್ರೆಯಲ್ಲಿ ಎದ್ದುಕಾಣುತ್ತಿತ್ತು. ಇದೆಲ್ಲವನ್ನೂ ಮೀರಿಸಿ ‘ಕೃಷಿ ಬ್ರಹ್ಮಾಂಡ’ ಜನರನ್ನು ಬಹಳಷ್ಟು ಆಕರ್ಷಿಸಿತ್ತು. ಸ್ವಾತಂತ್ರ್ಯಾನಂತರ ೧೯೫೦-೧೯೬೦ರ ದಶಕದಲ್ಲಿ ಕುಗ್ರಾಮಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ನಿರಕ್ಷರಕುಕ್ಷಿಗಳನ್ನು ಅಕ್ಷರಸ್ಥರನ್ನಾಗಿ ಮಾಡಿದ ಕೀರ್ತಿ ಸುತ್ತೂರು ಶ್ರೀ ಕ್ಷೇತ್ರಕ್ಕೆ ಸಲ್ಲುತ್ತದೆ.

೧೯೬೦ರ ದಶಕದಲ್ಲಿ ಹುಲ್ಲಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ತೆರೆದ ಸುತ್ತೂರು ಕ್ಷೇತ್ರದಿಂದಾಗಿ ಗ್ರಾಮದ ಹೆಣ್ಣುಮಕ್ಕಳು ಕನಿಷ್ಠ ಪ್ರೌಢಶಾಲೆ ಮೆಟ್ಟಿಲು ಏರುವುದು ಸಾಧ್ಯವಾಯಿತು. ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದ ಕಾಲದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಶಾಲೆ ಆರಂಭಿಸಿದ ನಂತರ ಗ್ರಾಮೀಣ ಮಹಿಳೆಯರು ಶಿಕ್ಷಣವಂತರಾದರು.

ಹುಲ್ಲಹಳ್ಳಿಯಲ್ಲಿ ಆ ಕಾಲದಲ್ಲಿ ಪ್ರೌಢಶಾಲೆ ತೆರೆಯದೇ ಇದ್ದಿದ್ದರೆ ನನ್ನ ಶಿಕ್ಷಣ ಮಿಡ್ಲ್‌ಸ್ಕೂಲ್‌ಗೆ ಮೊಟಕಾಗಿ ಹೋಗುತ್ತಿತ್ತು. ಶಿಕ್ಷಣದಲ್ಲಿ ಕ್ರಾಂತಿ ಮಾಡಿದಂತೆ ಶ್ರೀ ಕ್ಷೇತ್ರದಿಂದಲೇ ಸ್ಥಾಪಿಸಿರುವ ‘ಕೃಷಿ ವಿಜ್ಞಾನ ಕೇಂದ್ರ’ದ ಮೂಲಕ ಅನ್ನದಾತರ ಬದುಕಿನಲ್ಲಿ ಭರವಸೆಯ ಬೆಳಕನ್ನು ಸುತ್ತೂರು ಕ್ಷೇತ್ರ ಮೂಡಿಸಲಿ. ಮುಂದಿನ ಜಾತ್ರೆಗಳಲ್ಲಿ ‘ಕೃಷಿಮೇಳ’ಕ್ಕೆ ಹೆಚ್ಚಿನ ಆದ್ಯತೆ ನೀಡಲಿ.

ಪ್ರಗತಿಪರ ರೈತರೊಡನೆ, ಕೃಷಿ ವಿಜ್ಞಾನಿಗಳೊಡನೆ ಚರ್ಚಾ ಕಾರ್ಯ ಕ್ರಮಗಳು ಇನ್ನಷ್ಟು ಹೆಚ್ಚಾಗಬೇಕು. ಕೃಷಿ ಬ್ರಹ್ಮಾಂಡದಲ್ಲಿ ಜನಸಾಮಾನ್ಯರಿಗೆ ಸ್ವಯಂ ಸೇವಕರ ಬದಲು ತಜ್ಞರು ಮಾಹಿತಿ ನೀಡುವಂತಾಗಬೇಕು.

-ರತ್ನ ಹುಲ್ಲಹಳ್ಳಿ, ವಕೀಲರು, ನಂಜನಗೂಡು

 

 

Tags:
error: Content is protected !!