Mysore
28
clear sky

Social Media

ಮಂಗಳವಾರ, 20 ಜನವರಿ 2026
Light
Dark

ಜಯಪುರ ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ಜಾತ್ರೆ

ಕೊಂಡೋತ್ಸವಕ್ಕೆ ೫ ಎತ್ತಿನ ಗಾಡಿಗಳಲ್ಲಿ ಖಗ್ಗಲಿ ಸೌದೆ ತಂದ ಗ್ರಾಮಸ್ಥರು

ಮೈಸೂರು: ತಾಲ್ಲೂಕಿನ ಜಯಪುರ ಗ್ರಾಮದ ಶ್ರೀ ಜೇಡಿಕಟ್ಟೆ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ನಡೆಯಲಿರುವ ಕೊಂಡೋತ್ಸವಕ್ಕೆ ಬರಡನಪುರ ಮತ್ತು ಮಾವಿನಹಳ್ಳಿ ಗ್ರಾಮಸ್ಥರು ಸೋಮವಾರ ೫ ಎತ್ತಿನ ಗಾಡಿಗಳಲ್ಲಿ ಖಗ್ಗಲಿ ಸೌದೆಯ ರಾಶಿಯನ್ನು ದೇವಾಲಯ ಆವರಣಕ್ಕೆ ತಂದು ಜೋಡಿಸಿದರು.

ಫೆ.೨೩ ಮತ್ತು ೨೪ರಂದು ಎರಡು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಕೊಂಡೋತ್ಸವಕ್ಕೆ ಒಂದು ತಿಂಗಳು ಮುಂಚಿತವಾಗಿ ಖಗ್ಗಲಿ ಸೌದೆಯನ್ನು ತಂದು ಶೇಖರಿಸುವುದು ವಾಡಿಕೆ. ಬರಡನಪುರ ಗ್ರಾಮದಿಂದ ೩ ಎತ್ತಿನ ಗಾಡಿ, ಮಾವಿನಹಳ್ಳಿ ಗ್ರಾಮದಿಂದ ೨ ಎತ್ತಿನಗಾಡಿಗಳಲ್ಲಿ ಸೌದೆ ತುಂಬಿ ಕೊಂಡು ದಾರಿಯುದ್ದಕ್ಕೂ ಉಘೇ ಮಾದಪ್ಪ… ಉಘೇ ಮಾದಪ್ಪ… ಎಂಬ ಜಯಘೋಷಗಳೊಂದಿಗೆ ದೇವಾಲಯ ಆವರಣ ತಲುಪಿದರು.

ಈ ವೇಳೆ ಮಹದೇಶ್ವರ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಿದ ನಂತರ ದೇವಾಲಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ತುಪ್ಪದ ಕಜ್ಜಾಯ ಸಿಹಿ ಊಟ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಜಯಪುರ ಪೊಲೀಸ್ ಠಾಣೆ ಪಿಸಿಐ ಕಾಳೇಗೌಡ ಅವರು ದೇವಾಲಯಕ್ಕೆ ಭೇಟಿ ನೀಡಿ ಜಾತ್ರೋತ್ಸವ ಸಿದ್ಧತೆ ಕುರಿತು ದೇವಾಲಯ ಸಮಿತಿಯಿಂದ ಮಾಹಿತಿ ಪಡೆದುಕೊಂಡರು.

ಜಾತ್ರಾ ದಿನ ೧೦ ಸಾವಿರ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಫೆ.೨೩ರಂದು ರಾತ್ರಿ ಜಾನಪದ ಕಲಾವಿದರಾದ ಮೈಸೂರು ಗುರುರಾಜು ಮತ್ತು ತಂಡದವರಿಂದ ಮಹದೇಶ್ವರ ಕಥೆ ಏರ್ಪಡಿಸಲಾಗಿದೆ. ಹುಲಿ ವಾಹನೋತ್ಸವ, ಹಾಲ ರವಿ ಉತ್ಸವ, ಕೊಂಡೋತ್ಸವ, ವಿಶೇಷ ವಿದ್ಯುತ್ ದೀಪಾಲಂಕಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜೇಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಮಾವಿನಹಳ್ಳಿ ಎಸ್. ಸಿದ್ದೇಗೌಡ ತಿಳಿಸಿದರು.

Tags:
error: Content is protected !!