Mysore
24
clear sky

Social Media

ಮಂಗಳವಾರ, 20 ಜನವರಿ 2026
Light
Dark

ಮೂಲಸೌಲಭ್ಯ ವಂಚಿತ ಯಳಂದೂರು ಸಂತೆ ಮೈದಾನ

ಎಂ.ಗೂಳೀಪುರ ನಂದೀಶ್

ಕೊಳೆತ ಪದಾರ್ಥಗಳಿಂದ ದುರ್ನಾತ; ಹಲವು ಅಂಗಡಿಗಳು ನಿರುಪಯುಕ್ತ

ಯಳಂದೂರು: ಪಟ್ಟಣದ ಕೇಂದ್ರಸ್ಥಾನದಲ್ಲಿನ ಸಂತೆ ಮೈದಾನವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಜತೆಗೆ ಕೊಳೆತ ತರಕಾರಿಗಳನ್ನು ಸಮಪರ್ಕವಾಗಿ ವಿಲೇವಾರಿ ಮಾಡದ ಕಾರಣ ಗಬ್ಬುನಾರುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಪ್ರತಿ ಭಾನುವಾರ ಇಲ್ಲಿ ಸಂತೆ ಕಟ್ಟಲಾಗುತ್ತದೆ.

ಈ ಹಿಂದೆ ಪಟ್ಟಣದ ದಿವಾನ್‌ಪೂರ್ಣಯ್ಯ ಬಂಗಲೆಯ ಮುಂಭಾಗದಲ್ಲಿ ಸಂತೆ ನಡೆಯುತ್ತಿತ್ತು. ಈ ಸ್ಥಳ ಇಕ್ಕಟ್ಟಿನಿಂದ ಕೂಡಿತ್ತು. ಜೊತೆಗೆ ರಸ್ತೆಯ ಬದಿಗಳಲ್ಲಿ ತರಕಾರಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಈ ದೃಷ್ಟಿಯಲ್ಲಿ ಪಟ್ಟಣದ ಅಗ್ರಹಾರ ಬಡಾವಣೆಯ ಬಳಿ ಹೊಸ ಸಂತೆ ಮೈದಾನ ನಿರ್ಮಾಣ ಮಾಡಲಾಯಿತು.

ಮುಚ್ಚಿರುವ ಅಂಗಡಿ ಮಳಿಗೆಗಳು: ೨೦೦ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರತಿ ಭಾನುವಾರ ಪಟ್ಟಣದ ಸಂತೆ ಮೈದಾನದಲ್ಲಿ ತರಕಾರಿಗಳು, ಹಣ್ಣು, ಸೊಪ್ಪು, ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಅವರಿಗೂ ಉಪಯುಕ್ತವಾಗುವ ನಿಟ್ಟಿನಲ್ಲಿ ೧೨ಕ್ಕೂ ಅಂಗಡಿಗಳನ್ನು ನಿರ್ಮಿಸಿ ಅವುಗಳನ್ನು ವ್ಯಾಪಾರಿಗಳಿಗೆ ಬಾಡಿಗೆಗೆ ನೀಡದೆ ಖಾಲಿ ಬಿಡಲಾಗಿದೆ. ಹಾಗಾಗಿ ಇವು ನಿರುಪಯುಕ್ತವಾಗಿವೆ. ಇದಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ ವೇ ಕಾರಣ ಎಂಬುದು ಸಾರ್ವಜನಿಕರ ದೂರು.

ಮೂಲಭೂತ ಸಮಸ್ಯೆಗಳು: ಈ ಮೈದಾನದಲ್ಲಿ ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಿದ್ದು, ಮಾರುಕಟ್ಟೆಯ ಸುತ್ತಮುತ್ತ ಅನೈರ್ಮಲ್ಯದಿಂದ ಕೂಡಿದೆ. ಇಲ್ಲಿನ ವ್ಯಾಪಾರಿಗಳು ಪಟ್ಟಣ ಪಂಚಾಯಿತಿಗೆ ಪ್ರತಿ ವಾರವೂ ಸುಂಕ ಕಟ್ಟುತ್ತಾರೆ. ತೆರಿಗೆ ಹಣದಿಂದಾದರೂ ಅಲ್ಲಿನ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆ ಪಟ್ಟಣ ಪಂಚಾಯಿತಿಗೆ ಇದ್ದಂತಿಲ್ಲ. ತರಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಿಲ್ಲ.

ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯ ದಿನ ವ್ಯಾಪಾರ ಮಾಡಿ ಹೋಗುವ ಸಮಯದಲ್ಲಿ ಕೊಳೆತ ತರಕಾರಿಗಳನ್ನು ಪಕ್ಕದಲ್ಲಿ ರಾಶಿ ಮಾಡಿ ಹಾಗೆಯೇ ಬಿಟ್ಟು ವ್ಯಾಪಾರಿಗಳು ಹೋಗುತ್ತಾರೆ.

ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಸಿಬ್ಬಂದಿ ಮರು ದಿನ ಕಸವನ್ನು ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಮೈದಾನದಲ್ಲಿ ತರಕಾರಿಗಳು ಕೊಳೆತು ಗಬ್ಬು ನಾರುತ್ತಾ ವಾಸನೆ ಉಂಟಾಗಿ ಅಕ್ಕಪಕ್ಕದ ನಿವಾಸಿಗಳಿಗೆ ರೋಗ ರುಜಿನಗಳ ತಾಣವಾಗುತ್ತಿದೆ. ಈ ಬಗ್ಗೆ ಪಟ್ಟಣದ ಪಂಚಾಯಿತಿ ಅಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

” ಯಳಂದೂರು ಪಟ್ಟಣದಲ್ಲಿರುವ ಸಂತೆ ಮೈದಾನದಲ್ಲಿರುವ ಅಂಗಡಿ ಮಳಿಗೆಗಳನ್ನು ೪ ಬಾರಿ ಟೆಂಡರ್ ಕರೆದಿದ್ದರೂ ಯಾರೂ ಖರೀದಿಗೆ ಆಗಮಿಸಿಲ್ಲ. ಜತೆಗೆ ಶೌಚಗೃಹವನ್ನು ನಿರ್ಮಿಸಿ ಇಲ್ಲಿ ವ್ಯಾಪಾರ ಮಾಡುವ ವರ್ತಕರು ಹಾಗೂ ಗ್ರಾಹಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ತೊಂಬೆ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೂ ಕೂಡ ಕೆಲವು ಜನರು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡುತ್ತಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಗಮನಹರಿಸಿ ಕಸವನ್ನು ವಿಲೇವಾರಿ ಮಾಡಿ, ಸಂತೆ ಮೈದಾನದ ಮೂಲಭೂತ ಸೌಲಭ್ಯಕ್ಕಾಗಿ ಹೆಚ್ಚಿನ ಒತ್ತನ್ನು ನೀಡಲಾಗುವುದು.”

– ಎಂ.ಪಿ. ಮಹೇಶಕುಮಾರ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

” ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ನಿರ್ಮಿಸಿರುವ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಗೃಹ, ಹಾಗೂ ಅಂಗಡಿಗಳನ್ನು ಬಾಗಿಲು ತೆರೆಯದೆ ಬಿಟ್ಟಿದ್ದು, ಇದರಿಂದ ಅನೇಕ ಸಮಸ್ಯೆಗಳ ನಡುವೆ ವ್ಯಾಪಾರವನ್ನು ಮಾಡಿಕೊಂಡು ಹೋಗಬೇಕಾಗಿದೆ. ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸೌಲಭ್ಯವನ್ನು ಕಲ್ಪಿಸಬೇಕಾಗಿದೆ.”

-ಮಹೇಶ್, ಪಟ್ಟಣದ ನಿವಾಸಿ

Tags:
error: Content is protected !!