ಎಸ್.ಎಸ್.ಭಟ್
ನಂಜನಗೂಡು: ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿನ ಕಲಾ ವೈಭವ ಕಲಾಸಕ್ತರೂ ಸೇರಿದಂತೆ ಎಲ್ಲರ ಮನಸೂರೆಗೊಂಡಿತು.
ಅನೇಕ ವರ್ಷಗಳಿಂದ ಜಾತ್ರೋತ್ಸವದ ಅಂಗಳದಲ್ಲಿ ನಡೆಯುತ್ತಿದ್ದ ಚಿತ್ರಸಂತೆಗೆ ಈ ಬಾರಿ ಹೊಸ ಕಾಯಕಲ್ಪ ನೀಡುವುದರೊಂದಿಗೆ ಆಧುನಿಕ ಯುಗಕ್ಕೆ ಬಾಗಿಲು ತೆರೆದುಕೊಳ್ಳುವಂತೆ ‘ಕಲಾವೈಭವ’ ಎಂಬ ಶಿರೋನಾಮೆಯನ್ನಿಟ್ಟು ಆರಂಭಿಸಲಾದ ಕಲಾಪ್ರದರ್ಶನ ವಸ್ತುಪ್ರದರ್ಶನದ ಜನಾಕರ್ಷಣೆಯ ಪ್ರದರ್ಶನವಾಗಿ ಹೊರಹೊಮ್ಮಿದೆ.
೭೬ ಮಳಿಗೆಗಳನ್ನು ಒಳಗೊಂಡ ಈ ಕಲಾವೈಭವದ ಪ್ರದರ್ಶನ ಹಾಗೂ ಮಾರಾಟದಲ್ಲಿ ಮೈಸೂರಿನ ಕಾವಾ, ಜೆಎಸ್‌ಎಸ್ ಸಂಸ್ಥೆಯ ಹಾಲಬಾವಿಯ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಧಾರವಾಡ, ಗೋಕಾಕ್, ದೂರದ ಬಾಗಲಕೋಟೆ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ೧೩೦ಕ್ಕೂ ಹೆಚ್ಚು ಜನ ಭಾಗಿಯಾಗಿ ಚಿತ್ರಗಳನ್ನು ಬಿಡಿಸುತ್ತಲೇ ಪ್ರದರ್ಶನಕ್ಕಿಟ್ಟು ಆಸಕ್ತರಿಗೆ ಮಾರಾಟವನ್ನು ಮಾಡುತ್ತಿದ್ದಾರೆ.
ಕಲಾವಿದರು ಈ ಕಲಾವೈಭದಲ್ಲಿ ನಮ್ಮ ಪರಂಪರೆಯ ಗ್ರಾಮೀಣ ಕಲೆಗಳೂ ಸೇರಿದಂತೆ ಆಧುನಿಕ ಯುಗದ ಆವಿಷ್ಕಾರವಾದ ಎಐವರೆಗಿನ ವಿವಿಧ ಮಜಲುಗಳನ್ನು ತಮ್ಮ ಕುಂಚದಿಂದ ಬಿಡಿಸುತ್ತಿರುವುದು ಅವರುಗಳ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ.
ಇಂದಿನ ಕಾಲಘಟ್ಟದ ಅನಿವಾರ್ಯ ಸಾಧನಗಳಲ್ಲಿ ಒಂದಾದ ಮೊಬೈಲ್ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಕೆಲವೇ ದಿನಗಳಲ್ಲಿ ಹುಟ್ಟುವ ಮಗುವಿಗೂ ಅನಿವಾರ್ಯವಾಗಬಹುದು ಎಂಬ ಎಚ್ಚರಿಕೆಯ ಸಂದೇಶ ಸಾರುವ ಪ್ರದರ್ಶನ ಕಲಾವೈಭವದ ಹಾಗೂ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದವರೆಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.




