Mysore
21
clear sky

Social Media

ಭಾನುವಾರ, 18 ಜನವರಿ 2026
Light
Dark

ಮಡಿಕೇರಿ ನಗರದಲ್ಲಿಲ್ಲ ಸುಸಜ್ಜಿತ ಫುಟ್‌ಪಾತ್‌ ವ್ಯವಸ್ಥೆ

ವಾಹನಗಳು, ಪಾದಚಾರಿಗಳು ಒಂದೇ ಪಥದಲ್ಲಿ ಓಡಾಡುವ ಪರಿಸ್ಥಿತಿ; ಅಗಲೀಕರಣಕ್ಕೆ ಜಾಗದ್ದೇ  ಸಮಸ್ಯೆ

ಮಡಿಕೇರಿ: ಮಡಿಕೇರಿ ನಗರದಲ್ಲಿ ಪಾರ್ಕಿಂಗ್ ಸ್ಥಳವಿಲ್ಲದೇ ನಲುಗುತ್ತಿರುವ ಸಾರ್ವಜನಿಕರು ಬಹುತೇಕ ಕಡೆಗಳಲ್ಲಿ ಫುಟ್ ಪಾತ್ ವ್ಯವಸ್ಥೆ ಸರಿಯಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮಂಜಿನ ನಗರಿ ಮಡಿಕೇರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಳ ವಾಗುತ್ತಿದ್ದು, ಹಲವು ಸಮಸ್ಯೆಗಳೂ ತೆರೆದುಕೊಳ್ಳುತ್ತಿವೆ. ವಾಹನ ಪಾರ್ಕಿಂಗ್ ಸ್ಥಳವಿಲ್ಲದೇ ಹೆಚ್ಚಿನ ಪ್ರವಾಸಿಗರು ಕುಶಾಲನಗರದಲ್ಲಿ ಉಳಿಯುತ್ತಿರುವುದು ಒಂದೆಡೆಯಾದರೆ, ವಾರಾಂತ್ಯ, ರಜಾ ದಿನಗಳಲ್ಲಿ ನಗರದಲ್ಲಿ ಸಾರ್ವ ಜನಿಕರು ನಡೆದು ಹೋಗುವುದಕ್ಕೂ ಸಮಸ್ಯೆಯಾಗುತ್ತಿದೆ. ಇಡೀ ನಗರದಲ್ಲಿ ಸೂಕ್ತ ಫುಟ್‌ಪಾತ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ.

ರಸ್ತೆಗಳು ವಾಹನಗಳಿಗೆ ಮಾತ್ರವಲ್ಲ ಅದು ಮೊದಲನೆಯದಾಗಿ ಪಾದಚಾರಿಗಳಿಗೆ ಸೇರಿದೆ ಎಂದು ಸುಪ್ರಿಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ. ಅದರಂತೆ ಪ್ರತಿ ನಗರಗಳಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ಇರಬೇಕೆನ್ನುವುದು ಕಡ್ಡಾಯ. ಆದರೆ ಮಡಿಕೇರಿ ನಗರದಲ್ಲಿ ಇದಕ್ಕೆ ಅವಕಾಶವೇ ಇಲ್ಲದಂತಹ ಪರಿಸ್ಥಿತಿಯಿದೆ. ನಗರದ ಕೆಲವೇ ಕೆಲವು ರಸ್ತೆಗಳನ್ನು ಬಿಟ್ಟರೆ ಉಳಿದೆಲ್ಲಾ ರಸ್ತೆಗಳಲ್ಲಿ ವಾಹನಗಳು, ಪಾದಚಾರಿಗಳು ಒಂದೇ ಪಥದಲ್ಲಿ ಓಡಾಡಬೇಕಾದ ಪರಿಸ್ಥಿತಿಯಿದೆ. ರಸ್ತೆಯಲ್ಲಿ ವಾಹನ ಬಂತು ಎಂದರೆ ಒಂದೆಡೆ ನಿಂತು ಮುಂದೆ ಸಾಗಬೇಕಾದ ಪರಿಸ್ಥಿತಿ ಯಿದೆ, ಟ್ರಾಫಿಕ್ ಹೆಚ್ಚಿರುವ ಸಂದರ್ಭದಲ್ಲಿ ಇದು ಸಣ್ಣ ಪುಟ್ಟ ಅಪಘಾತಗಳಿಗೂ ಕಾರಣವಾಗುತ್ತಿದೆ.

ಮಡಿಕೇರಿ ನಗರದ ಬಹುತೇಕ ರಸ್ತೆಗಳು ಬಹಳ ಕಿರಿದಾಗಿದ್ದು, ಒಮ್ಮೆಲೇ ಎರಡು ವಾಹನಗಳ ಸಂಚಾರಕ್ಕೂ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಈ ನಡುವೆ ಎಲ್ಲಿಯೂ ಸಮ ರ್ಪಕ ಪಾರ್ಕಿಂಗ್ ಸ್ಥಳಗಳು ಇಲ್ಲದ ಕಾರಣ ರಸ್ತೆ ಬದಿಯಲ್ಲಿಯೇ ವಾಹನಗಳನ್ನೂ ನಿಲುಗಡೆ ಮಾಡಲಾಗುತ್ತದೆ. ವಿಪರ್ಯಾಸವೆಂದರೆ ಪಾದಚಾರಿಗಳೂ ಅದೇ ರಸ್ತೆಯಲ್ಲಿ ನಡೆದಾಡಬೇಕಿದೆ.

ಕೊಹಿನೂರು ರಸ್ತೆ, ಹಿಲ್ ರಸ್ತೆ, ಸುದರ್ಶನ ವೃತ್ತದಿಂದ ಜಿ.ಟಿ ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿ, ಹಳೇ ಖಾಸಗಿ ಬಸ್ ನಿಲ್ದಾಣದಿಂದ ಇಂದಿರಾ ಗಾಂಧಿ ವೃತ್ತ, ಗಣಪತಿ ಬೀದಿ, ಮಹದೇವಪೇಟೆ, ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ಫುಟ್ ಪಾತ್ ಅಸ್ತಿತ್ವದಲ್ಲೇ ಇಲ್ಲ. ಈ ನಡುವೆ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಜನರು ವಾಹನಗಳು ಸಂಚರಿಸುವ ಪಥದಲ್ಲೇ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿಯಿದೆ.

ಗಾಂಧಿ ಮೈದಾನದಿಂದ ರಾಜಾಸೀಟ್‌ವರೆಗೆ, ಎಸ್‌ಬಿಐ ಜಂಕ್ಷನ್‌ನಿಂದ ಕೈಗಾರಿಕಾ ಬಡಾವಣೆ ಜಂಕ್ಷನ್‌ವರೆಗೆ, ನಗರಸಭೆಯಿಂದ ಹಳೆಯ ಖಾಸಗಿ ಬಸ್ ನಿಲ್ದಾಣದವರೆಗೆ, ಇಂದಿರಾ ಗಾಂಧಿ ವೃತ್ತದಿಂದ ಎಸ್‌ಬಿಐ ಜಂಕ್ಷನ್‌ವರೆಗೆ, ಗೌಳಿ ಬೀದಿ ರಸ್ತೆ… ಹೀಗೆ ಕೆಲವು ರಸ್ತೆಗಳಲ್ಲಿ ಒಂದೂವರೆ, ಎರಡು ಅಡಿಯಷ್ಟು ಪಾದಾಚಾರಿ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಈ ಪಾದಚಾರಿ ಮಾರ್ಗದಲ್ಲೂ ಕೆಲವೊಮ್ಮೆ ವಾಹನಗಳು ನಿಲುಗಡೆಯಾಗಿರುತ್ತವೆ. ಕೆಲವೊಮ್ಮೆ ಬೀದಿ ಬದಿ ವ್ಯಾಪಾರಿಗಳು ಸೊಪ್ಪು, ತರಕಾರಿ ವ್ಯಾಪಾರ ಮಾಡುತ್ತಿರುತ್ತಾರೆ. ಇದರಿಂದ ಪಾದಚಾರಿಗಳು ಎಲ್ಲಿ ಸಂಚರಿಸಬೇಕು ಎಂಬುದೇ ತಿಳಿಯದಾಗಿದೆ. ಈ ಸಮಸ್ಯೆಯತ್ತ ನಗರಸಭೆ ಕಣ್ತೆರೆಯಬೇಕಿದೆ.

” ಮಡಿಕೇರಿ ಬೇರೆ ನಗರಗಳಂತಲ್ಲ. ಇಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸ್ಥಳವೇ ಇಲ್ಲದ ಪರಿಸ್ಥಿತಿ ಇದೆ. ರಸ್ತೆಯ ಇಕ್ಕೆಲಗಳಲ್ಲಿನ ಜಾಗಗಳು ಖಾಸಗಿ ಜಾಗಗಳೇ ಆಗಿರುವುದರಿಂದ ರಸ್ತೆ ಅಗಲೀಕರಣವೂ ಕಷ್ಟ ಸಾಧ್ಯ. ಇರುವ ಪಾದಚಾರಿ ಮಾರ್ಗಗಳೂ ಒಂದೂವರೆ, ಎರಡಡಿಯಷ್ಟು ಇವೆ. ಜಾಗ ಇಲ್ಲದಿರುವುದೇ ಫುಟ್ ಪಾತ್ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.”

-ಎಚ್.ಆರ್. ರಮೇಶ್, ಪೌರಾಯುಕ್ತ, ಮಡಿಕೇರಿ ನಗರಸಭೆ

Tags:
error: Content is protected !!