ವರದಿಗಳ ಪ್ರಕಾರ ಸಾರ್ವಜನಿಕ ಗ್ರಂಥಾಲಯಗಳಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಹೊಸ ಸಾಹಿತ್ಯ ಕೃತಿಗಳ ಖರೀದಿಯೇ ನಡೆದಿಲ್ಲ ಎಂಬುದು ಆತಂಕಕಾರಿ. ಸ್ಥಳೀಯ ಸಂಸ್ಥೆಗಳಿಂದ ಬರ ಬೇಕಾದ ಅಂದಾಜು ೫೨೬.೮೩ ಕೋಟಿ ರೂ. ಗ್ರಂಥಾಲಯ ತೆರಿಗೆಯನ್ನು ವಸೂಲಿ ಮಾಡಲು ಸಾಧ್ಯವಾಗದ ಆಡಳಿತ ಯಂತ್ರದ ವೈಫಲ್ಯ ಎದ್ದು ಕಾಣುತ್ತಿದೆ. ಬಿಬಿಎಂಪಿಯಂತಹ ಸಂಸ್ಥೆಗಳೇ ೪೬೧ ಕೋಟಿ ರೂ.ಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿರುವುದು ವ್ಯವಸ್ಥೆಯ ದುರಂತ. ಪ್ರಕಾಶಕರಿಗೆ ಪಾವತಿಸಬೇಕಾದ ೮ ಕೋಟಿ ರೂ. ಬಾಕಿ ಹಣ ನೀಡದೆ ಅವರನ್ನು ಬೀದಿಗೆ ತಳ್ಳಲಾಗುತ್ತಿದೆ. ಡಿಜಿಟಲ್ ಲೈಬ್ರರಿ ಎಂಬ ಆಕರ್ಷಕ ಪದಗಳ ಹಿಂದೆ ಹಳ್ಳಿಗಳ ಗ್ರಂಥಾಲಯಗಳಲ್ಲಿ ಕನಿಷ್ಠ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಕೂಡಲೇ ಈ ಆರ್ಥಿಕ ಬಿಕ್ಕಟ್ಟನ್ನು ನೀಗಿಸಿ, ಬಾಕಿ ತೆರಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕು. ಪುಸ್ತಕ ಸಂಸ್ಕೃತಿಯನ್ನು ಕೊಲ್ಲುತ್ತಿರುವ ಈ ಆಡಳಿತಾತ್ಮಕ ಮಂದಗತಿಯ ಧೋರಣೆಯನ್ನು ಕೂಡಲೇ ಕೈಬಿಡಬೇಕು.
-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು





