ಮುಂಬೈ : ವೋಟಿ ಚೋರಿ ವಿರುದ್ಧ ಸಮರ ಸಾರಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ವೋಟ್ ಚೋರಿಯಾಗಿದೆ ಎಂದು ಆರೋಪಿಸಿದ್ದಾರೆ.
ವೋಟ್ ಹಾಕಿದ ಗುರುತಿನ ಶಾಯಿ ಗುರುತು ಅಳಿಸಿ ಹೋಗುತ್ತಿದೆ ಎಂಬ ಶೀರ್ಷಿಕೆಯ ಮಾಧ್ಯಮ ವರದಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗವು ಜನರನ್ನ ತಪ್ಪು ದಾರಿಗೆ ಎಳೆಯುತ್ತಿರುವುದು ನಮ್ಮ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕುಸಿಯಲು ಕಾರಣವಾಗಿದೆ ಎಂದು ಎಕ್ಸ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋಗಳಲ್ಲಿ ಅಸಿಟೋನ್‌ನಂತಹ ರಾಸಾಯನಿಕಗಳನ್ನ ಬಳಸಿ ಶಾಯಿಯನ್ನು ಹೇಗೆ ಅಳಿಸಬಹುದು ಎಂಬುದನ್ನು ತೋರಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಆರೋಪಗಳನ್ನ ತಳ್ಳಿಹಾಕಿದ್ದಾರೆ. ಆದರೆ, ಚುನಾವಣಾ ಆಯೋಗ ತನಿಖೆ ನಡೆಸುವುದಾಗಿ ತಿಳಿಸಿದೆ. ಮುಂದಿನ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಶಾಯಿಯನ್ನ ಬಳಸಲು ನಿರ್ಧರಿಸಲಾಗಿದೆ.
ಈ ಮಧ್ಯೆ, ನಮ್ಮ ಸಾವಿರಾರು ಕಾರ್ಯಕರ್ತರ ಹೆಸರು ಮತಪಟ್ಟಿಯಿಂದ ಕಾಣೆಯಾಗಿದೆ ಅಂತ ಉದ್ಧವ್ ಶಿವಸೇನೆ ಬಣದ ನಾಯಕ ಸಂಜಯ್‌ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ʼಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಗಳು ಗೆದ್ದು ಬೀಗಿವೆ. 29 ಕಾರ್ಪೊರೇಷನ್‌ಗಳ ಪೈಕಿ 26ರಲ್ಲಿ ಬಿಜೆಪಿ ಕೂಟ ಜಯಭೇರಿ ಬಾರಿಸಿದೆ. ಒಟ್ಟು 2,869 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ 1,500ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಜಯಗಳಿಸಿದೆ. ಬಿಎಂಸಿಯ 224 ವಾರ್ಡ್‌ಗಳಲ್ಲಿ ಬಿಜೆಪಿ ಮಿತ್ರಕೂಟ 131 ಗೆದ್ದಿವೆ. ಮುಂಬೈ, ನವಿಮುಂಬೈ, ಥಾಣೆ, ಪುಣೆ, ನಾಗಪುರ, ನಾಸಿಕ್ ಸೇರಿದಂತೆ ಪ್ರಮುಖ ನಗರಗಳು ಬಿಜೆಪಿ ಪಾಲಾಗಿವೆ. ಈ ಮೂಲಕ, ಇದೇ ಮೊದಲ ಬಾರಿಗೆ ದೇಶದ ಶ್ರೀಮಂತ ಕಾರ್ಪೊರೇಷನ್ ಬಿಎಂಸಿಗೆ ಬಿಜೆಪಿ ಮೇಯರ್ ಸಿಗಲಿದೆ.




