ನನೆಗುದಿಗೆ ಬಿದ್ದಿದ್ದ ನೀರು ತುಂಬಿಸುವ ಕಾರ್ಯಕ್ಕೆ ನಾಳೆ ಶಾಸಕ ಮಂಜುನಾಥ್ ಅವರಿಂದ ಚಾಲನೆ; ರೈತರಲ್ಲಿ ಸಂತಸ
ಮಹಾದೇಶ್ ಎಂ ಗೌಡ
ಹನೂರು: ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯಕ್ಕೆ ಮುಹೂರ್ತ ಕೂಡಿಬಂದಿದ್ದು, ರೈತರ ಹಲವಾರು ವರ್ಷಗಳ ಕನಸು ನನಸಾಗುವ ಸಮಯ ಹತ್ತಿರವಾಗಿದೆ.
ಜನವರಿ 16ರಂದು ಶಾಸಕ ಎಂ.ಆರ್. ಮಂಜುನಾಥ್‌ರವರು ಅಧಿಕೃತವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದೆ ವ್ಯವಸಾಯಕ್ಕೆ, ಕುಡಿಯುವ ನೀರಿಗೆ, ಜನಜಾನುವಾರುಗಳಿಗೆ ಹಾಹಾಕಾರ ಉಂಟಾಗಿತ್ತು. ಹೀಗಾಗಿ ಅಂದಿನ ಶಾಸಕರಾಗಿದ್ದ ಆರ್.ನರೇಂದ್ರರವರು ಗುಂಡಾಲ್ ಜಲಾಶಯ, ರಾಮನಗುಡ್ಡ ಜಲಾಶಯ, ಹುಬ್ಬೆಹುಣಸೆ ಜಲಾಶಯಗಳಿಗೆ 132 ಕೋಟಿ ರೂ. ವೆಚ್ಚದಲ್ಲಿ
ಕಾವೇರಿ ನದಿಯಿಂದ ನೀರು ತುಂಬಿಸುವ ಕಾಮಗಾರಿಗೆ ಅನುಮೋದನೆ ಕೊಡಿಸಿ,
ಅನುದಾನ ಬಿಡುಗಡೆ ಮಾಡಿಸಿ ಗುಂಡಾಲ್ ಜಲಾಶಯಕ್ಕೆ ನೀರು ತುಂಬಿಸಿದ್ದರು.
ಆದರೆ ರಾಮನಗುಡ್ಡ ಹಾಗೂ ಹುಬ್ಬೇಹುಣಸಿ ಜಲಾಶಯಗಳಿಗೆ ಕಾರಣಾಂತರಗಳಿಂದ ನೀರು ತುಂಬಿಸಿರಲಿಲ್ಲ. ಇದರಿಂದ ಗುಂಡಾಲ್ ಜಲಾಶಯದ ಅಚ್ಚುಕಟ್ಟು ರೈತರಿಗೆ ಮಾತ್ರ ಅನುಕೂಲವಾಗುತ್ತಿತ್ತು. ರಾಮನಗುಡ್ಡ ಹಾಗೂ ಜಲಾಶಯಕ್ಕೆ ನೀರು ತುಂಬಿಸುವಂತೆ ಕ್ಷೇತ್ರದ ರೈತರು ಹಲವಾರು ಬಾರಿ ಮನವಿ ಮಾಡಿದ್ದರೂ ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸಲು ಪ್ರಯೋಜನವಾಗಿರಲಿಲ್ಲ.
ಕಳೆದ ವಿಧಾನಸಭೆ ಚುನಾವಳೆ ಸಂದರ್ಭದಲ್ಲಿ ಜಾ.ದಳ ಅಭ್ಯರ್ಥಿಯಾಗಿದ್ದ ಮಂಜುನಾಥ್ ರವರು ಚುನಾವಣಾ ಭಾಷಣಗಳಲ್ಲಿ ಕ್ಷೇತ್ರದ ಪ್ರಮುಖ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿ ನೆರೆಯ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯುವುದಾಗಿ ಭರವಸೆ ನೀಡಿದ್ದರು.
ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಿದರೂ ಅನುದಾನದ ಕೊರತೆಯಿಂದ
ಅಧೀಕ್ಷಕ ಅಭಿಯಂತರರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚೆ ನಡೆಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ರೈತರು ಅನುಭವಿಸುತ್ತಿರುವ ಕಷ್ಟವನ್ನು ಮನವರಿಕೆ ಮಾಡಿದ್ದರು. ರೈತರ ವಾಸ್ತವ ಸ್ಥಿತಿಯನ್ನು ಕಣ್ಣಾರೆ ನೋಡಿದ ಅಧಿಕಾರಿಗಳು ಹಾಗೂ ಹನೂರು ತಾಲ್ಲೂಕಿನ ಮಣಗಳ್ಳಿ ಗ್ರಾಮದ ಭಾಗದವರೇ ಆದ ಅಧೀಕ್ಷಕ ಅಭಿಯಂತರ ಮಹೇಶ್‌ರವರ ಸಹಕಾರದಿಂದಾಗಿ ರಾಮನಗುಡ್ಡ ಜಲಾಶಯಕ್ಕೆ 2 ಕಿ. ಮೀ. ಪೈಪ್ ಲೈನ್ ಮಾಡಿ ನಂತರ ಬೂದುಬಾಳು ಸಮೀಪದ ಹಳ್ಳಕ್ಕೆ ನೀರು ಹರಿಸಿದರೆ ರಾಮನ ಗುಡ್ಡ ಜಲಾಶಯಕ್ಕೆ ನೀರು ತುಂಬಿಸಬಹುದು ಎಂದು ತೀರ್ಮಾನ ಕೈಗೊಂಡು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಶಾಸಕ ಪೂರ್ಣಗೊಳಿಸಿ ಇದೀಗ ಪ್ರಾಯೋಗಿಕವಾಗಿ ನೀರು ಹರಿಸಲು ಚಾಲನೆ ನೀಡಲಾಗಿದೆ.
ಜನವರಿ 16ರಂದು ಶಾಸಕ ಮಂಜುನಾಥ್ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಸಾಗಿದೆ. ರೈತರು ಕೂಡ ಕಾತರದಿಂದ ಕಾಯುತ್ತಿದ್ದಾರೆ. 40 ವರ್ಷಗಳ ಕನಸು ಇದೀಗ ಈಡೇರುತ್ತಿರು ವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ಪ್ರಾಯೋಗಿಕವಾಗಿ ನೀರು ಹರಿಸುತ್ತಿರುವ ವಿಡಿಯೋ ದೃಶ್ಯವನ್ನು ಕ್ಷೇತ್ರದ ಶಾಸಕ ಮಂಜುನಾಥ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.





