ಭೇರ್ಯ ಮಹೇಶ್
ಭೇರ್ಯ : ಶಾಲಾ ಆವರಣದಲ್ಲಿ ರಾಶಿ ಹಾಕಿದ್ದ ರಾಗಿ, ಭತ್ತ ಪೂಜೆಗೆ ಸಿದ್ಧವಾಗಿದ್ದವು. ಸೀರೆ, ಪಂಚೆಯುಟ್ಟು ಗ್ರಾಮೀಣ ಸೊಗಡಿನಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಭತ್ತ ಕುಟ್ಟುತ್ತಿದ್ದರು. ರಾಗಿ ಬೀಸಿ ಮುದ್ದೆಗೆ ಹಿಟ್ಟು ಸಿದ್ಧಪಡಿಸುವಲ್ಲಿ ತಲ್ಲೀನರಾಗಿದ್ದರು. ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದರು. .
ಇಂತಹದೊಂದು ಅಪರೂಪದ ದೃಶ್ಯ ಸಮೀಪದ ಸುಗ್ಗನಹಳ್ಳಿ ಗ್ರಾಮದ ಹಾಸನ- ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ವಿಜೇತ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕಂಡುಬಂದಿತು. ಶಾಲೆಯಲ್ಲಿ ಅಪ್ಪಟ ಹಳ್ಳಿ ಪರಿಸರದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗೋಪೂಜೆಗೆ ನಾಟಿ ಹಸುಗಳು ಸಾಕ್ಷಿಯಾದವು.
ಸಂಕ್ರಾಂತಿಯ ಅಂಗವಾಗಿ ಶಾಲೆ ಯನ್ನು ವಿಶೇಷವಾಗಿ ಅಲಂಕರಿಸ ಲಾಗಿತ್ತು. ರಂಗೋಲಿ ಬಿಡಿಸಿ ಚಿತ್ತಾರ ಮೂಡಿಸಲಾಗಿತ್ತು. ಬಾಳೆಕಂದು, ಮಾವಿನ ತೋರಣ, ಕಬ್ಬಿನ ಜಲ್ಲೆ, ತೆಂಗಿನ ಗರಿಗಳು ಹಬ್ಬವನ್ನು ಕಳೆಗಟ್ಟುವಂತೆ ಮಾಡಿದ್ದವು. ಗೋ ಪೂಜೆ, ಆಹಾರ ತಯಾರಿಕೆ, ರಾಶಿ ಪೂಜೆಯಂತಹ ಸುಗ್ಗಿ ಹಬ್ಬಗಳು ಸಡಗರವನ್ನು ಹೆಚ್ಚಿಸಿದವು.
ಸಾಂಪ್ರದಾಯಿಕ ಉಡುಪು ತೊಟ್ಟು ಬಂದಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯವರು ಲಗುಬಗೆಯಿಂದ ಓಡಾಡುತ್ತಿದ್ದರು. ಬಿಳಿ ಪಂಚೆ, ಬಿಳಿ ಜುಬ್ಬಾ ಧರಿಸಿ ಪರಂಪರೆಯ ಹಿರಿಮೆಯನ್ನು ಸಾರಿದರು. ನೇಗಿಲ ನೊಗಕ್ಕೆ ಎತ್ತುಗಳನ್ನು ಹೂಡಿ ಉಳುಮೆ ಮಾಡಿದ ಪರಿ ಮೆಚ್ಚುವಂತಿತ್ತು. ಅಲಂಕೃತ ಎತ್ತಿನ ಗಾಡಿಗಳು ಆಕರ್ಷಕವಾಗಿದ್ದವು.
ಶಾಲೆಯ ಪ್ರವೇಶ ದ್ವಾರದ ಬಳಿ ಗೋ ಪೂಜೆ ನೆರವೇರಿಸುವ ಮೂಲಕ ಸಂಕ್ರಾಂತಿಯ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಮೆಕ್ಕೆಜೋಳ, ಭತ್ತ, ಕಡಲೆಕಾಳು, ಹೆಸರು ಕಾಳು, ಗೋಽ, ಬೆಲ್ಲ, ಅಡಿಕೆ, ಸಬ್ಬಕ್ಕಿ, ಸಿರಿಧಾನ್ಯ, ಕೆಂಪಕ್ಕಿ ಸೇರಿ ಹಲವು ಧಾನ್ಯಗಳ ರಾಶಿಗೆ ನಮಿಸಲಾಯಿತು.
ಹಸುಗಳಿಗೆ ಅಕ್ಕಿ, ಬೆಲ್ಲ ಮತ್ತು ಬಾಳೆಹಣ್ಣು ತಿನ್ನಿಸಲಾಯಿತು. ಪಂಚಾಯಿತಿ ಕಟ್ಟೆ, ನೇಗಿಲಯೋಗಿ, ಬಳೆಗಾರ ವೇಷಧಾರಿಗಳು ಕಣ್ಮನ ಸೆಳೆದರು. ಪೂಜೆಯ ನಂತರ ಎಲ್ಲರಿಗೂ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಒಟ್ಟಾರೆ ಮಕ್ಕಳು ಸಂಕ್ರಾಂತಿ ಸಂಭ್ರಮದಲ್ಲಿ ಮಿಂಚಿ ಮಿಂದೆದ್ದರು.
ಶಾಲಾ ಮಕ್ಕಳನ್ನು ಸಿಂಗಾರಗೊಳಿಸಿದ ಎತ್ತಿನಗಾಡಿಯಲ್ಲಿ ಕೂರಿಸಿಕೊಂಡು ಶಾಲೆಯ ಸಂಸ್ಥಾಪಕ ಹೆಚ್. ಎಸ್. ಮಹೇಶ್ ಮೆರವಣಿಗೆ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬದ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿದರು.
ಹೊಸ ಅಗ್ರಹಾರ ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ, ವಿಜೇತ ಇಂಟರ್ ನ್ಯಾಷನಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷೆ ಬೇಬಿ ಮಹೇಶ್, ಕಾರ್ಯದರ್ಶಿ ಹೆಚ್. ಎಸ್. ಶ್ವೇತ, ಸಹಕಾರ ಸಂಘದ ನಿರ್ದೇಶಕ ರಾಮೇಗೌಡ, ಉದ್ಯಮಿ ಪ್ರಕಾಶ್, ಶಾಲಾ ಶಿಕ್ಷಕರು, ಮಕ್ಕಳು, ಪೋಷಕರು ಹಾಜರಿದ್ದರು





