ನವೀನ್ ಡಿಸೋಜ
೪೩ ಕೋಟಿ ರೂ. ವೆಚ್ಚದ ಕಾಮಗಾರಿ; ಅಂತಿಮ ಹಂತದಲ್ಲಿ ಕೆಲಸ
ಮಡಿಕೇರಿ: ಮಾರ್ಚ್ ವೇಳೆಗೆ ಮಡಿಕೇರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಕಾರ್ಯಾರಂಭಿಸಲಿದೆ. ಇದರೊಂದಿಗೆ ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ರೋಗಿಗಳ ಸಂಬಂಧಿಕರು ಉಳಿದುಕೊಳ್ಳಲು ಧರ್ಮಶಾಲಾ ಕಟ್ಟಡ ಸದ್ಯದಲ್ಲೇ ಸೇವೆಗೆ ಸಿದ್ಧಗೊಳ್ಳಲಿದೆ.
ಕೊಯಿಮ್ಸ್‌ನಲ್ಲಿ ೪೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರಿಟಿಕಲ್ ಕೇರ್ ಯುನಿಟ್‌ನ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ಅಂತಿಮ ಹಂತದ ಕೆಲಸಗಳು ಸಾಗಿವೆ. ಕೆಲ ಭಾಗಗಳಿಗೆ ಪ್ಲಾಸ್ಟರಿಂಗ್ ಸೇರಿದಂತೆ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಆಗಬೇಕಿದೆ. ಟ್ರಾಮಾ ಕೇರ್ ಯುನಿಟ್‌ಗೆ ಬೇಕಾದ ಉಪಕರಣಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ನಡೆದಿದೆ ಎಂದು ಕೊಯಿಮ್ಸ್‌ನ ನಿರ್ದೇಶಕರಾದ ಡಾ.ಲೋಕೇಶ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಅಡಿಯಲ್ಲಿ ಈ ಮಹತ್ವದ ಕೆಲಸ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯ ಸರ್ಕಾರದ ಪಾಲು ಈ ಯೋಜನೆಯಲ್ಲಿದೆ. ಕ್ರಿಟಿಕಲ್ ಕೇರ್ ಸೆಂಟರ್(ಟ್ರಾಮ ಸೆಂಟರ್) ಆರಂಭವಾದರೆ ಈಗಿರುವ ತುರ್ತು ಚಿಕಿತ್ಸಾ ಘಟಕ ಅಲ್ಲಿಗೆ ಸ್ಥಳಾಂತರಗೊಳ್ಳಲಿದ್ದು, ತುರ್ತು ಚಿಕಿತ್ಸೆಗಾಗಿಯೇ ಈ ಕೇಂದ್ರ ಸಂಪೂರ್ಣವಾಗಿ ಕೆಲಸ ಮಾಡಲಿದೆ. ಕೆಲವೊಮ್ಮೆ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾದಾಗ ಅದೇ ಸಮಯದಲ್ಲಿ ಆಪರೇಷನ್ ಥಿಯೇಟರ್‌ಗಳಲ್ಲಿ ಬೇರೆ ಶಸ್ತ್ರಚಿಕಿತ್ಸೆ ನಿಗದಿಯಾಗಿದ್ದರೇ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರೋಗಿಯನ್ನು ಅನಿವಾರ್ಯವಾಗಿ ಬೇರೆ ಆಸ್ಪತ್ರೆಗೆ ರೆಫರ್ ಮಾಡಬೇಕಿತ್ತು. ಟ್ರಾಮಾ ಕೇರ್ ಸೆಂಟರ್ ಆರಂಭವಾದರೆ ಈ ರೀತಿಯ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಒಟ್ಟು ೫೦ ಹಾಸಿಗೆಗಳ ಮಿನಿ ಐಸಿಯು ಈ ಕೇಂದ್ರದಲ್ಲಿ ಬರಲಿದ್ದು, ಕಿಡ್ನಿ ಸಂಬಂಽತ ತುರ್ತು ಚಿಕಿತ್ಸಾ ಸೇವೆಗಳೂ ಸೇರಿದಂತೆ, ಅಪಘಾತ ಹಾಗೂ ತುರ್ತು ಸೇವೆಗಳು, ನ್ಯೂರಾಲಜಿ, ನ್ಯೂರೋ ಸರ್ಜನ್, ಆರ್ಥೋ, ಅನಸ್ತೇಷಿಯಾ ಸೇರಿದಂತೆ ಎಲ್ಲಾ ಮಾದರಿಗಳ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ. ಸದ್ಯ ತುರ್ತು ಸಂದರ್ಭದಲ್ಲಿ ಬಹುತೇಕ ರೋಗಿಗಳನ್ನು ಹೊರ ಜಿಲ್ಲೆಗಳಿಗೆ ಶಿಫಾರಸು ಮಾಡಲಾಗುತ್ತಿದ್ದು, ಇಂತಹ ಸಮಸ್ಯೆಗೆ ಟ್ರಾಮಾ ಕೇರ್ ಸೆಂಟರ್ ಮೂಲಕ ಪರಿಹಾರ ಸಿಗುವ ನಿರೀಕ್ಷೆಯಿದೆ.
ಕಾರ್ಡಿಯಾ, ಕಿಮೋ ಥೆರಪಿ ಕೇಂದ್ರ ಆರಂಭದ ನಿರೀಕ್ಷೆ..!: ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೃದ್ರೋಗ ಘಟಕ ಆರಂಭಿಸಲು ಮಡಿಕೇರಿ ಶಾಸಕ ಡಾ.ಮಂಥರ್‌ಗೌಡ ಹಾಗೂ ಕೊಯಿಮ್ಸ್‌ನ ಹಿರಿಯ ಅಧಿಕಾರಿಗಳಿಂದ ನಿರಂತರ ಪ್ರಯತ್ನ ನಡೆದಿದೆ. ಅದರ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ವರ್ಷ ಹೃದ್ರೋಗ ಘಟಕ ಆರಂಭವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲು ಡೇ ಕೇರ್ ಕಿಮೋಥೆರಪಿ ಕೇಂದ್ರದ ಆರಂಭವೂ ಕೆಲ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದ್ದು, ಜಿಲ್ಲೆಯ ಕ್ಯಾನ್ಸರ್ ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಎರಡೂ ಪ್ರಮುಖ ಘಟಕಗಳು ಕೊಯಿಮ್ಸ್ ನಲ್ಲಿ ಈ ವರ್ಷ ಆರಂಭವಾಗಲಿವೆ.
” ಟಿಕಲ್ ಕೇರ್ ಸೆಂಟರ್ ಕಾಮಗಾರಿ ಭರದಿಂದ ಸಾಗಿದೆ. ಅಂತಿಮ ಹಂತದ ಕಾಮಗಾರಿಗಳು ಮಾತ್ರ ಬಾಕಿಯಿದ್ದು, ಸದ್ಯದಲ್ಲೇ ಮುಕ್ತಾಯವಾಗುವ ಹಂತದಲ್ಲಿವೆ. ಮಾರ್ಚ್ ವೇಳೆಗೆ ಕಾರ್ಯಾರಂಭವಾಗುವ ವಿಶ್ವಾಸವಿದೆ. ಇದರೊಂದಿಗೆ ಮಹಿಳೆಯರು ಮತ್ತು ಮಕ್ಕಳ ವಿಭಾಗದಲ್ಲಿ ರೋಗಿಗಳ ಸಂಬಂಧಿಕರು ಉಳಿದುಕೊಳ್ಳಲು ಧರ್ಮಶಾಲಾ ಆರಂಭಿಸಲು ಚಿಂತನೆ ನಡೆಸಿದ್ದು ಕೆಲಸ ಪ್ರಗತಿಯಲ್ಲಿದೆ.”
-ಡಾ.ಎ.ಜೆ.ಲೋಕೇಶ್, ಡೀನ್ ಮತ್ತು ನಿರ್ದೇಶಕರು, ಕೊಯಿಮ್ಸ್
” ರೋಗಿಗಳ ಸಂಬಂಧಿಗಳು ಉಳಿಯಲು ಭವನ..!:
” ಸದ್ಯ ಕೊಯಿಮ್ಸ್‌ನಲ್ಲಿ ರೋಗಿಗಳ ಸಂಬಂಧಿಗಳು ಉಳಿದುಕೊಳ್ಳಲು ಪ್ರತ್ಯೇಕ ಸ್ಥಳವಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ವಾರ್ಡ್ ಸುತ್ತಮುತ್ತ ಎಲ್ಲೆಂದರಲ್ಲಿ ಮಲಗುತ್ತಿದ್ದರು. ದೂರದ ಊರುಗಳಿಂದ ಬರುವ ರೋಗಿಗಳ ಸಂಬಂಧಿಕರಿಗೆ ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಈಗ ಆಸ್ಪತ್ರೆ ಆವರಣದಲ್ಲೇ ಧರ್ಮಶಾಲಾ ಆರಂಭಿಸಲು ಕೊಯಿಮ್ಸ್ ಸಿದ್ಧತೆ ನಡೆಸಿದೆ. ಆಸ್ಪತ್ರೆ ಆವರಣದ ಮಹಿಳಾ ಮತ್ತು ಮಕ್ಕಳ ವಿಭಾಗದ ಸಮೀಪದಲ್ಲಿ ೨ ಅಂತಸ್ತಿನ ಕಟ್ಟಡವೊಂದನ್ನು ಇದಕ್ಕಾಗಿ ಮೀಸಲಿಡಲಾಗುತ್ತಿದ್ದು, ಈಗಾಗಲೇ ಕೆಲಸ ಆರಂಭಿಸಲಾಗಿದೆ. ರೋಗಿಗಳ ಸಂಬಂಧಿಕರು (ಅಟೆಂಡರ್ಸ್) ಉಳಿದುಕೊಳ್ಳಲು ಡಾರ್ಮೆಟರಿ ಮಾದರಿಯ ವ್ಯವಸ್ಥೆ ಮಾಡಲಾಗುತ್ತಿದ್ದು, ಇದು ಶೌಚಾಲಯ, ಸ್ನಾನಗೃಹಗಳನ್ನೂ ಒಳಗೊಂಡಿರಲಿದೆ.”




