Mysore
25
few clouds

Social Media

ಬುಧವಾರ, 14 ಜನವರಿ 2026
Light
Dark

ನಾಳೆ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ರಥೋತ್ಸವ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಮಕರ ಸಂಕ್ರಾಂತಿಯಂದು ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ.

ಜಾತ್ರೆಯ ಅಂಗವಾಗಿ ೧೦ ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಬಿದಿರಿನಿಂದ ರಥ ನಿರ್ಮಿಸಲಾಗುತ್ತಿದೆ. ಮೂಲ ವಿಗ್ರಹಗಳು ಹಾಗೂ ಉತ್ಸವ ಮೂರ್ತಿಗಳಿಗೆ ನಾನಾ ವರ್ಣದ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ.

ಜ.೧೫ರ ಗುರುವಾರ ಮಧ್ಯಾಹ್ನ ೧೨.೪೫ಕ್ಕೆ ಸರಿಯಾಗಿ ಮುಜರಾಯಿ ಅಧಿಕಾರಿಯೂ ಆದ ತಹಸಿಲ್ದಾರ್ ಎಂ. ಎಸ್.ತನ್ಮಯಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಜಾತ್ರೆಗೆ ಸ್ಥಳೀಯರಲ್ಲದೆ ನೆರೆ ರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಪ್ರತಿ ವರ್ಷವೂ ನೂಕುನುಗ್ಗಲು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಸರ್ಕಲ್ ಇನ್‌ಸ್ಪೆಕ್ಟರ್, ಎಸ್‌ಐ ನೇತೃತ್ವದಲ್ಲಿ ೧೦೦ ಸಿಬ್ಬಂದಿ ನಿಯೋಜಿಸಿ ತೆರಕಣಾಂಬಿಯಿಂದ ಬೊಮ್ಮನಹಳ್ಳಿ  ರಸ್ತೆಯಲ್ಲಿ ಬೆಟ್ಟಕ್ಕೆ ಹೋಗುವ ವಾಹನಗಳು ಕೊತ್ತಲವಾಡಿ ಮಾರ್ಗದಲ್ಲಿ ವಾಪಸಾಗುವಂತೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪಟ್ಟಣ ಹಾಗೂ ತೆರಕಣಾಂಬಿಯಿಂದ ಬೆಟ್ಟಕ್ಕೆ ಹೋಗುವ ಪ್ರಯಾಣಿಕರ ಅನುಕೂಲಕ್ಕೆ ಕನಿಷ್ಠ ೧೦ ಸಾರಿಗೆ ಬಸ್ಸುಗಳನ್ನು ನಿಯೋಜಿಸುವಂತೆ ಕೋರಲಾಗಿದೆ. ಬೆಟ್ಟಕ್ಕೆ ಹೋಗುವ ಭಕ್ತರು ತಮ್ಮ ವಾಹನಗಳನ್ನು ತಪ್ಪಲಿನಲ್ಲಿ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ತಪ್ಪಲಿನಿಂದ ಭಕ್ತರು ಬೆಟ್ಟಕ್ಕೆ ಹೋಗಿಬರಲು ೫ ಬಸ್ಸುಗಳನ್ನು ನಿಯೋಜಿಸಲಾಗಿದೆ. ಕಿಸೆಗಳ್ಳರ ಹಾಗೂ ಸರಗಳ್ಳರ ಕೈಚಳಕ ತಡೆಗೆ ಸಿಸಿ ಕ್ಯಾಮೆರಾ ಅಳವಡಿಸಿ ಮಫ್ತಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತೆರಕಣಾಂಬಿ ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ಮಾರ್ಗವಾಗಿ ಬೆಟ್ಟದ ಜಾತ್ರೆಗೆ ಬರುವ ಭಕ್ತರಿಗೆ ಕಿಲಗೆರೆ ಗ್ರಾಮದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಮಠದಲ್ಲಿ ಸೋಮಹಳ್ಳಿ ಮಠಾಧ್ಯಕ್ಷರಾದ ಸಿದ್ದಮಲ್ಲಸ್ವಾಮೀಜಿಯವರ ಪಾದಪೂಜೆಯನ್ನು ಆಯೋಜಿಸಲಾಗಿದೆ.

Tags:
error: Content is protected !!