Mountain View
10
clear sky

Social Media

ಬುಧವಾರ, 14 ಜನವರಿ 2026
Light
Dark

ಸಂಕ್ರಮಣ: ಜಾನುವಾರು ಹಗ್ಗಗಳ ಮಾರಾಟ ಜೋರು

ಬಡಗಲಮೋಳೆ, ತೆಂಕಲಮೋಳೆ ಗ್ರಾಮಗಳಲ್ಲಿ ಹಗ್ಗಗಳ ತಯಾರಿಕೆ ವೃತ್ತಿಯಲ್ಲಿ ತೊಡಗಿರುವವರಿಗೆ ವ್ಯಾಪಾರದ ಸುಗ್ಗಿ

ಚಾಮರಾಜನಗರ: ಸಂಕ್ರಾಂತಿ ಹೊಸ ಸಂವತ್ಸರದ ಮೊದಲನೇ ಹಬ್ಬ. ರೈತ ಸಮುದಾಯಕ್ಕಂತೂ ಇದು ಸುಗ್ಗಿಯ ಸಂಭ್ರಮ. ಆದ ಕಾರಣ ಈ ಹಬ್ಬದ ಆಚರಣೆ ವೇಳೆ ಜಾನುವಾರುಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಅವುಗಳಿಗೆ ಕಟ್ಟುವ ಹಗ್ಗ ಸೇರಿದಂತೆ ಪ್ರತಿಯೊಂದೂ ಹೊಸದಾಗಿರುತ್ತವೆ!

ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುದೇರು ಸಮೀಪದ ಬಡಗಲ ಮೋಳೆ ಮತ್ತು ತೆಂಕಲಮೋಳೆಯಲ್ಲಿ ತಯಾರಿಸಲ್ಪಡುವ ಹಗ್ಗಗಳಿಗೆ ಬೇಡಿಕೆ ಹೆಚ್ಚಾಗಿದ್ದು ಮಾರಾಟ ಭರಾಟೆ ಜೋರಾಗಿದೆ. ಈ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಚೀಲಗಳಿಂದ ತೆಗೆದ ಎಳೆಗಳನ್ನು ಬಳಸಿ ಕೈರಾಟೆಯಿಂದ ವಿವಿಧ ಮಾದರಿಗಳ ಹಗ್ಗಗಳನ್ನು ಪ್ರತಿ ಮನೆ ಮನೆಗಳಲ್ಲೂ ತಯಾರಿಸುತ್ತಾರೆ.

ಹಬ್ಬದ ಹಿನ್ನೆಲೆಯಲ್ಲಿ ಹಗ್ಗದ ವ್ಯಾಪಾರ ಮಾಡಲು ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಾತ್ರವಲ್ಲದೇ ನೆರೆಯ ತಮಿಳುನಾಡಿನತ್ತಲೂ ಈ ಗ್ರಾಮಗಳವರು ಅದಾಗಲೇ ಹೊರಟಿದ್ದಾರೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಲಾಗುತ್ತದೆ. ಹಾಗಾಗಿ ವ್ಯಾಪಾರಕ್ಕಾಗಿ ಅಲ್ಲಿಗೆ ವಾರದ ಹಿಂದೆಯೇ ಹೋಗಿದ್ದಾರೆ. ಇದಲ್ಲದೇ, ರಾಜ್ಯದ ಮಂಡ್ಯ, ರಾಮನನಗರ, ಬೆಂಗಳೂರು ಗ್ರಾಮಾಂತರ ಮೊದಲಾದ ಕಡೆಗೆ ಈ ಗ್ರಾಮಗಳ ನೂರಾರು ವ್ಯಾಪಾರಿಗಳು ಐದಾರು ದಿನಗಳ ಹಿಂದೆಯೇ ಹಗ್ಗಗಳ ಮಾರಾಟಕ್ಕೆ ಹೋಗಿದ್ದಾರೆ.

ಬಡಗಲಮೋಳೆಯ ಸಹೋದರರಾದ ಪುಟ್ಟಸ್ವಾಮಿ, ಮುದ್ದಶೆಟ್ಟಿ ಅವರಲ್ಲದೇ ಬಸವಶೆಟ್ಟಿ, ನೀಲಿಸಿದ್ದಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ವ್ಯಾಪಾರಕ್ಕೆ ಹೋಗಿದ್ದು ಹಬ್ಬದ ದಿನ ಹಿಂದಿರುಗುತ್ತಾರೆ ಎಂದು ಗ್ರಾಮದ ಮಾದಶೆಟ್ಟಿ ಮಾಹಿತಿ ನೀಡಿದರು.

ಮಹಿಳೆಯರು ಎಳ್ಳು-ಬೆಲ್ಲ ಹಂಚಿ ಸಂಭ್ರಮ ಪಡುವಂತೆಯೇ ಕೃಷಿಕರು ತಮ್ಮ ಕೃಷಿ ಸಂಗಾತಿ ರಾಸುಗಳನ್ನು ಸ್ವಚ್ಛಗೊಳಿಸಿ, ಕೊಂಬಿಗೆ ಬಣ್ಣ ಹಚ್ಚಿ ಹೊಸ ಹಗ್ಗ, ಕರಿದಾರ, ಕುಚ್ಚು, ಕುಣಿಕೆ, ಕೊರಳಿಗೆ ಘಂಟೆ, ಗೊಂಡದ ಹಾರ ತೊಡಿಸಿ ಅಲಂಕಾರ ಮಾಡಿ ಖುಷಿ ಪಡುತ್ತಾರೆ.

ಹಬ್ಬದಂದು ಅಲ್ಲಲ್ಲಿ ದನಕರುಗಳನ್ನು ಬಿಟ್ಟು ಕಿಚ್ಚನ್ನೂ ಹಾಯಿಸ ಲಾಗುತ್ತದೆ. ಹೀಗಾಗಿ ನೆರೆ-ಹೊರೆ ಈ ಗ್ರಾಮಗಳ ವ್ಯಾಪಾರಿಗಳು ತಾವು ತಯಾರಿಸಿರುವ ಹಗ್ಗಗಳೊಂದಿಗೆ ಹೊರಗಡೆಯಿಂದ ತಂದಿರುವ ಘಂಟೆ, ಕರಿ ದಾರ ಇತ್ಯಾದಿಗಳನ್ನು ಕೊಂಡೊಯ್ದು ಮಾರಾಟ ಮಾಡುತ್ತಾರೆ. ಜಾನುವಾರುಗಳ ಅಲಂಕಾರಕ್ಕೆ ಬೇಕಾದ ಎಲ್ಲ ವಸ್ತುಗಳನ್ನೂ ವ್ಯಾಪಾರಕ್ಕೆ ಇಟ್ಟಿದ್ದಾರೆ. ಉಭಯ ಗ್ರಾಮಗಳಲ್ಲಿ ಮನೆ ಗೊಬ್ಬರಂತೆ ಹಗ್ಗ ತಯಾರಿಕೆ ವೃತ್ತಿಯಲ್ಲಿ ತೊಡಗಿದ್ದು ಇವರ ವ್ಯಾಪಾರಕ್ಕೆ ಈ ಹಬ್ಬ ಸುಗ್ಗಿ ಕಾಲ ಎಂದರೆ ತಪ್ಪಾಗಲಾರದು.

ಸಂತೆಗಳಲ್ಲೂ ವ್ಯಾಪಾರ: 

ವಾರಕ್ಕೊಮ್ಮೆ ನಡೆಯುವ ಜಿಲ್ಲೆಯ ತೆರಕಣಾಂಬಿ, ಸಂತೆಮರಹಳ್ಳಿ ಸಂತೆಗಳಲ್ಲದೇ ಮೈಸೂರು ಜಿಲ್ಲೆಯ ನಂಜನಗೂಡು, ತಿ.ನರಸೀಪುರ ಸಂತೆಗಳಲ್ಲಿಯೂ ಗ್ರಾಮೀಣ ಜನರು ಭಾರೀ ಸಂಖ್ಯೆಯಲ್ಲಿ ಸೇರುವುದರಿಂದ ಅಲ್ಲಿಯೂ ಹಗ್ಗಗಳ ಮಾರಾಟ ಮಾಡಲಾಗುತ್ತದೆ. ಇದಲ್ಲದೇ ದ್ವಿಚಕ್ರ ವಾಹನಗಳಲ್ಲಿ ಊರೂರಿಗೆ ತೆರಳಿ ಹಗ್ಗವ್ಯಾಪಾರ ಮಾಡುತ್ತಿದ್ದಾರೆ. ಹಾಸನ, ನಾಗಮಂಗಲ, ಇನ್ನಿತರ ಕಡೆಯ ಸಗಟು ಹಾಗೂ ಬಿಡಿ ವ್ಯಾಪಾರಿಗಳು ನಮ್ಮ ಗ್ರಾಮಕ್ಕೇ ಬಂದು ದೊಡ್ಡ ಪ್ರಮಾಣದಲ್ಲಿ ಹಗ್ಗಗಳನ್ನು ಖರೀದಿ ಮಾಡಿರುವುದಾಗಿ ತೆಂಕಲಮೋಳೆ ವ್ಯಕ್ತಿಯೊಬ್ಬರು ತಿಳಿಸಿದರು.

” ಚನ್ನಪಟ್ಟಣ, ರಾಮನಗರ, ಮಂಡ್ಯ, ಮಳವಳ್ಳಿ, ಮದ್ದೂರು ಹಲಗೂರು ಇಷ್ಟು ಕಡೆ ನಮ್ಮ ಎರಡೂ ಗ್ರಾಮಗಳ ಸುಮಾರು ೧೦೦ಮಂದಿ ೪-೫ ದಿನಗಳ ಹಿಂದೆಯೇ ಹಗ್ಗ ವ್ಯಾಪಾರಕ್ಕೆ ಬಂದಿದ್ದೇವೆ. ಬುಧವಾರ, ಗುರುವಾರ ಹೆಚ್ಚಿನ ವ್ಯಾಪಾರ ಆಗಲಿದೆ.”

ಎಸ್.ಶಿವಣ್ಣ, ಬಡಗಲಮೋಳೆ 

Tags:
error: Content is protected !!