Mysore
25
few clouds

Social Media

ಬುಧವಾರ, 14 ಜನವರಿ 2026
Light
Dark

48 ಮರಗಳನ್ನು ಕಡಿಯುವುದಕ್ಕೆ ತೀವ್ರ ವಿರೋಧ

ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಮರಗಳನ್ನು ಕಡಿಯುವ ವಿಚಾರಕ್ಕೆ ನಡೆದ ಅಹವಾಲು ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ

ನಂಜನಗೂಡು: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೨೭೫ರಲ್ಲಿ ದೇವಲಾಪುರ ಕ್ರಾಸ್ ಹತ್ತಿರ ೪೮ ಮರಗಳನ್ನು ಕಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಮರಗಳನ್ನು ಕಡಿಯುವುದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.

ಸಭೆಯಲ್ಲಿ ಹಾಜರಿದ್ದ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಸದಸ್ಯರು ಮತ್ತು ಸಮೀಪದ ಹೊಸಹುಂಡಿ ಗ್ರಾಮದ ಜನರು ಇಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಯಲು ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವ ಬದಲಿಗೆ ಸಿಗ್ನಲ್ ವ್ಯವಸ್ಥೆ, ರಸ್ತೆ ಉಬ್ಬುಗಳ ನಿರ್ಮಾಣ, ಸಂಚಾರ ಚಿಹ್ನೆಗಳ ಅಳವಡಿಕೆ ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿದರು. ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವುದು ಕಡೆಯ ಆಯ್ಕೆ ಆಗಲಿ. ಮೊದಲು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಕಾರ್ಯಕರ್ತರಾದ ಶೈಲಜೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೇಲ್ಸೇತುವೆ ಕಟ್ಟಲು ಟೆಂಡರ್ ಕರೆದು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಕೊನೆಯ ಹಂತದಲ್ಲಿ ಕಾಟಾಚಾರಕ್ಕೆ ಈ ಸಭೆ ಕರೆದಿದ್ದಾರೆ. ಅಪಘಾತಗಳನ್ನು ತಪ್ಪಿಸುವ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ ಎಂದು ದೂರಿದರು.

ತುಂಬಾ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುವ ಪ್ರಯತ್ನ ಮಾಡದೆ ವಿಪರೀತ ಹಣ ಖರ್ಚು ಮಾಡಿ ಹೊಸ ಹೊಸ ನಿರ್ಮಾಣಗಳ ಬಗ್ಗೆ ಸರ್ಕಾರಿ ಇಲಾಖೆಗಳು ಆಸಕ್ತಿ ವಹಿಸುವುದು ಶೇ.೪೦ ಕಮಿಷನ್‌ಗಾಗಿ ಎಂಬ ಅನುಮಾನಗಳಿವೆ ಎಂದರು. ಲೀಲಾ ಶಿವಕುಮಾರ್ ಅವರು ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ಎಲ್ಲೆಲ್ಲಿ ಮರಗಳನ್ನು ಕಡಿಯುತ್ತಾರೋ ಅಲ್ಲಿಗೆಲ್ಲ ಹೋಗಿ ಮರಗಳನ್ನು ಕಡಿಯುವುದನ್ನು ತಡೆಯುವುದು ನಮ್ಮ ಸಂಘಟನೆಯ ಕೆಲಸವಲ್ಲ. ಮರಗಳನ್ನು ಉಳಿಸಿಕೊಂಡು ಪರಿಸರ ಸ್ನೇಹಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಒತ್ತಾಯಿಸಿದರು. ಸ್ಥಳೀಯರಾದ ಕೃಷ್ಣ ಮಾತನಾಡಿ, ಇಲ್ಲಿ ಮರಗಳನ್ನು ಕಡಿದು ಮೇಲ್ಸೇತುವೆ ಕಟ್ಟುವ ಅಗತ್ಯವಿಲ್ಲ. ಒಂದೇ ಒಂದು ಮರವನ್ನು ಕಡಿಯಲು ಇಲ್ಲಿನ ಸ್ಥಳೀಯರು ಬಿಡುವುದಿಲ್ಲ ಎಂದು ಘೋಷಿಸಿದರು.

ಮರಗಳನ್ನು ಕಡಿಯಲು ಸಭೆಯಲ್ಲಿ ವ್ಯಕ್ತವಾದ ಒಕ್ಕೊರಲಿನ ವಿರೋಧಕ್ಕೆ ಮಣಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು, ಮರಗಳನ್ನು ಕಡಿಯುವುದು ನಮ್ಮ ಆದ್ಯತೆ ಅಲ್ಲ. ಮರಗಳನ್ನು ಉಳಿಸುವುದು ತಮ್ಮ ಇಲಾಖೆಯ ಆದ್ಯತೆ. ಇಂದಿನ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯ ಗಳನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸಲಾಗುವುದು ಮತ್ತು ಮರಗಳನ್ನು ಉಳಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಆರ್‌ಎಫ್‌ಒ ಸಂತೋಷ್ ಹೂಗಾರ್, ಅಹವಾಲು ಸಭೆಯಲ್ಲಿ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಲೀಲಾ ವೆಂಕಟೇಶ್, ಕಾರ್ಯಕರ್ತರಾದ ಸುಬ್ಬರಾವ್, ಗಂಟಯ್ಯ, ಭಾಗ್ಯ, ಭಾನುಪ್ರಶಾಂತ್, ಅಂಜನಾ, ಪ್ರಭಾ, ಗಾಯತ್ರಿ, ಗುರುಸ್ವಾಮಿ, ವಿಶ್ವನಾಥ್, ಸುಗುಣ, ಸುಶೀಲಾ, ಮಧುಶ್ರೀ, ಜಯಲಕ್ಷ್ಮಿ, ಪ್ರಭಾಕರ್, ಅಕ್ಬರ್, ರವಿಕೀರ್ತಿ, ಗಣೇಶ್, ಸಾರ್ಥಕ್, ಮುಂತಾದವರು ಭಾಗವಹಿಸಿದ್ದರು

” ಅಪಘಾತಗಳನ್ನು ತಪ್ಪಿಸಲು ಸಭೆಯಲ್ಲಿ ಸೂಚಿಸಿದ ಪರ್ಯಾಯ ಮಾರ್ಗಗಳನ್ನು ಕಾರ್ಯಗತಗೊಳಿಸಲು ಮೇಲಿನ ಅಧಿಕಾರಿಗಳಿಗೆ ತಿಳಿಸಿ, ಮೇಲ್ಸೇತುವೆ ಕಟ್ಟುವ ಯೋಜನೆ ರದ್ದುಪಡಿಸುವಂತೆ ಶಿಫಾರಸು ಮಾಡಲಾಗುತ್ತದೆ.”

ಎಚ್.ಆರ್.ರೂಪ, ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Tags:
error: Content is protected !!