ಬೆಂಗಳೂರು : ಎಸ್‍ಎಸ್‍ಎಲ್‍ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.
ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ ಮೂಲಕ ಹಂಚಿಕೊಂಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಶಾಲೆಗಳ ಶಿಕ್ಷಕರು ಈ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ.
ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್ ಸೇರಿದಂತೆ ಕಲಬುರಗಿ ಜಿಲ್ಲೆಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಬಂಧನಕ್ಕೊಳಗಾಗಿದ್ದಾರೆ.ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಪ್ರಕರಣದಲ್ಲಿ ವಿದ್ಯಾರ್ಥಿಗಳ ಈ ಕೃತ್ಯಕ್ಕೆ ಶಿಕ್ಷಕರು ಕೂಡ ಸಾಥ್ ನೀಡಿದ್ದಾರೆ ಎಂಬ ಸ್ಫೋಟಕ ವಿಚಾರ ತನಿಖೆ ವೇಳೆ ಬಯಲಾಗಿದೆ.ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನೆ ಪತ್ರಿಕೆ ಮಾರಾಟಕ್ಕಿಟ್ಟಿದ್ದೇ ವಿದ್ಯಾರ್ಥಿಗಳೇ ಎನ್ನುವುದು ಮತ್ತೊಂದು ಆಘಾತಕಾರಿ ವಿಷಯ.
200 ರಿಂದ 500 ರೂಗೆ ಮಾರಾಟ
ಅನೇಕ ವಿದ್ಯಾರ್ಥಿಗಳು ನೇರವಾಗಿ ಸಂದೇಶ ಕಳುಹಿಸಿ ಕೊಟ್ಟು ಪ್ರಶ್ನೆ ಪತ್ರಿಕೆ ಪಡೆದುಕೊಂಡಿದ್ದಾರೆ. 200 ರಿಂದ ,500 ರೂಪಾಯಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಯಾವ ಶಿಕ್ಷಕರ ಕೋಡ್ ನಿಂದ ಪ್ರಶ್ನೆ ಪತ್ರಿಕೆ ಡೌನ್ ಲೌಡ್ ಮಾಡಲಾಗಿತ್ತು ಅವರನ್ನ ಪೊಲೀಸರು ಬಂಧಿದ್ದಾರೆ.ಶಿಕ್ಷಕರ ಮೂಲಕ ಪ್ರಶ್ನೆ ಪತ್ರಿಕೆ ಪಡೆದುಕೊಂಡು ವಿದ್ಯಾರ್ಥಿಗಳೇ ಆನ್ ಲೈನ್ ನಲ್ಲಿ ಪೋಸ್ಟ್ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದೆ. ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ್ದ ಮತ್ತು ಸಹಕರಿಸಿದ್ದ ಶಿಕ್ಷಕರನ್ನ ಪೊಲೀಸರು ಬಂಧಿಸಿದ್ದು, ಶಿಕ್ಷಕರಿಂದಲೇ ಇಂತಹ ಕೃತ್ಯಗಳಿಗೆ ಸಹಕಾರದ ಅನುಮಾನ ವ್ಯಕ್ತವಾಗಿದೆ. ವಿಚಾರಣೆ ವೇಳೆ ಸಾಮಾಜಿಕ ಜಾಲ ತಾಣದಲ್ಲಿ ಸೋರಿಕೆ ಮಾಡಿದವರ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಜನವರಿ 9 ರಂದು ಹಿಂದಿ ಪರೀಕ್ಷೆ ಇತ್ತು. ಆದರೆ ಜನವರಿ 8 ರಂದು ನಿರಂಜನ್ ಶೆಟ್ಟಿ ಹೆಸರಿನ ಯೂಟ್ಯೂಬ್ ಚಾನೆಲ್‍ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಪದವಿ ಪೂರ್ವ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ನೀರಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಸೈಬರ್ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.
ಈಗ ಪೊಲೀಸರು ಪ್ರಶ್ನೆಪತ್ರಿಕೆಯನ್ನು ವೈರಲ್ ಮಾಡಿದವರ ವಾಟ್ಸಪ್, ಇನ್‍ಸ್ಟಾ, ಟೆಲಿಗ್ರಾಂ ಖಾತೆಯ ಜೊತೆ ಮೊಬೈಲ್ ಪರಿಶೀಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ.
ಬಂಧಿತರ ಪೈಕಿ ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ ಹಾಗೂ ಶಿಕ್ಷಕಿ ಫರ್ಜಾನಾ ಬೇಗಂ ಇದ್ದಾರೆ. ಇವರ ಜೊತೆಗೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಯಾವ ರೀತಿಯಲ್ಲಿ ನಡೆದಿದೆ, ಇನ್ನಿತರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಈ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ.
ವೈರಲ್ ಆಗಿದ್ದು ಹೇಗೆ ?
ಆರೋಪಿಗಳು ಇನ್‍ಸ್ಟಾಗ್ರಾಂ ಮತ್ತು ಟೆಲಿಗ್ರಾಂ ಅಪ್ಲಿಕೇಶನ್‍ಗಳನ್ನು ಈ ಕೃತ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆಯ ಪೋಟೋಗಳನ್ನು ತೆಗೆದು ಈ ಆಪ್‍ಗಳಲ್ಲಿರುವ ವಿವಿಧ ಗುಂಪುಗಳಿಗೆ ಹರಿಯಬಿಡಲಾಗಿತ್ತು. ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ತಂಡದ ನೆರವಿನೊಂದಿಗೆ ಈ ವೈರಲ್ ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವಾಗ ಈ ಶಿಕ್ಷಕರ ಜಾಲ ಪತ್ತೆಯಾಗಿದೆ. ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಕೂಡ ಪರೀಕ್ಷೆಯ ಅಂಕಗಳ ಲಾಭಕ್ಕಾಗಿ ಇವುಗಳನ್ನು ವೈರಲ್ ಮಾಡಿದ್ದರು ಎನ್ನಲಾಗಿದ್ದು, ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಬಂಧಿತರ ಬಳಿಯಿದ್ದ ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿರುವ ಪೋಲೀಸರು, ಡಿಜಿಟಲ್ ಪುರಾವೆಗಳಿಗಾಗಿ ಫಾರಿನ್ಸಿಕ್ ತನಿಖೆಗೆ ಕಳುಹಿಸಿದ್ದಾರೆ. ಯಾರಿಂದ ಯಾರಿಗೆ ಮೊದಲು ಪತ್ರಿಕೆ ತಲುಪಿತು ? ಇದರ ಹಿಂದೆ ಹಣದ ವ್ಯವಹಾರ ನಡೆದಿದೆಯೇ? ಅಥವಾ ಖಾಸಗಿ ಟ್ಯೂಷನ್ ಮಾಫಿಯಾ ಕೈವಾಡವಿದೆಯೇ? ಎಂಬ ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಪ್ರಕರಣವು ಶಿಕ್ಷಣ ಇಲಾಖೆಗೆ ಮುಜುಗರ ತಂದಿದ್ದು, ಮುಂದೆ ನಡೆಯಲಿರುವ ವಾರ್ಷಿಕ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಬಂಧಿತರ ವಿವರ
ವಿ.ಡಿ. ಗಿರೀಶ್ -ಮುಖ್ಯೋಪಾಧ್ಯಾಯ, ತುಮಕೂರು
ಅಮ್ಜದ್ ಖಾನ್ -ಸಹ ಶಿಕ್ಷಕ, ರಾಮನಗರ
ಶಾಹಿದಾ ಬೇಗಂ-ಮುಖ್ಯ ಶಿಕ್ಷಕಿ, ಕಲಬುರಗಿ
ಫಾಹ್ಮಿದಾ -ಸಹ ಶಿಕ್ಷಕಿ, ಕಲಬುರಗಿ
ಮೊಹಮ್ಮದ್ ಸಿರಾಜುದ್ದೀನ್ -ಶಿಕ್ಷಕ, ಕಲಬುರಗಿ
ಫರ್ಜಾನಾ ಬೇಗಂ -ಶಿಕ್ಷಕಿ, ಕಲಬುರಗಿ
ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು





