ನಂಜನಗೂಡು : ʻಹತ್ತೂರು ಜಾತ್ರೆಗೆ ಸುತ್ತೂರು ಜಾತ್ರೆʼ ಸಮ ಎಂಬ ಗಾದೆ ಹೊಂದಿರುವ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಇನ್ನೇನು ಮೂರೇ ದಿನದಲ್ಲಿ ಶುರುವಾಗಲಿದ್ದು, ಸಡಗರ ಸಂಭ್ರಮಕ್ಕೆ ಸುತ್ತೂರು ಸಜ್ಜಾಗಿದೆ.
ಸೋಮವಾರ ಜಾತ್ರೋತ್ಸವದ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಮಂಜುನಾಥ, ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ತಾಲ್ಲೂಕಿನ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೋತ್ಸವ ಜ.15ರಿಂದ ಆರಂಭವಾಗಲಿದೆ ಎಂದು ತಿಳಿಸಿದರು.
ಆರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಜಾತ್ರೋತ್ಸವದ ಅಂಗಳದಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಕೃಷಿಮೇಳ, ಕೃಷಿ ಬ್ರಹ್ಮಾಂಡ, ದೇಶಿ ಆಟ, ಗಾಳಿಪಟ ಸ್ಪರ್ಧೆ, 55ನೇ ದನಗಳ ಜಾತ್ರೆ, ಲಕ್ಷದೀಪೋತ್ಸವ, ಸಾಮೂಹಿಕ ವಿವಾಹ, ಭಜನಾಮೇಳ, ದೋಣಿ ವಿಹಾರ, ನಾಟಕಗಳ ಪ್ರದರ್ಶನ, ವಿಜ್ಞಾನ ಮೇಳ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದಕ್ಕಾಗಿ ಕಳೆದ ತಿಂಗಳಿನಿಂದಲೇ ಸಿದ್ಧತೆ ಭರದಿಂದ ಸಾಗಿದೆ ಎಂದು ಹೇಳಿದರು.

ಜ.15ರ ಗುರುವಾರ ಬೆಳಗಿನ ಜಾವವೇ ಮೂಲಮಠದಲ್ಲಿ ವಿಶೇಷ ಧಾರ್ಮಿಕ ಕೈಂಕರ‍್ಯ ನಡೆಸಿ ಮಠದ ಬಿರುದು ಬಾವಲಿಗಳೊಂದಿಗೆ ಶಿವರಾತ್ರೀಶ್ವರರ ಉತ್ಸವಮೂರ್ತಿಯನ್ನು ಅಲಂಕೃತ ಮೆರವಣಿಗೆಯಲ್ಲಿ ಗದ್ದುಗೆಗೆ ತರುವುದರೊಂದಿಗೆ ಈ ಸಾಲಿನ ಜಾತ್ರೆಯ ಚಿತ್ತಾರ ಆರಂಭವಾಗಲಿದೆ ಎಂದರು.
ಗುರುವಾರ ಸಂಜೆ 4 ಗಂಟೆಗೆ ವಸ್ತುಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿವಿಹಾರ ಉದ್ಘಾಟನೆಗೊಳ್ಳಲಿದ್ದು, 16ರ ಶುಕ್ರವಾರ ಬೆಳಿಗ್ಗೆ ನೂರಾರು ಜೋಡಿಗಳ ಸಾಮೂಹಿಕ ವಿವಾಹ ನಡೆದರೆ, ಸಂಜೆ ರಾಜ್ಯಮಟ್ಟದ ಭಜನಾ ಮೇಳ, ದೇಶಿ ಆಟಗಳ ಸ್ಪರ್ಧೆ, ಸೋಬಾನೆ ಪದ, ರಾಗಿ ಬೀಸುವ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳಿಗೆ ಚಾಲನೆ ನೀಡಲಾಗುವುದು. 17ರ ಶನಿವಾರ ಬೆಳಿಗ್ಗೆ 11ಕ್ಕೆ ರಥೋತ್ಸವ, ಹಾಗೂ ಧಾರ್ಮಿಕ ಸಭೆ ಜರುಗಲಿದೆ. ಅದೇ ದಿನ ಸಂಜೆ ಚಿತ್ರಕಲೆ ಗಾಳಿಪಟ, 55ನೇ ದನಗಳ ಜಾತ್ರೆ ಉದ್ಘಾಟನೆಗೊಳ್ಳಲಿದೆ. 18ರ ಭಾನುವಾರ ಬೆಳಿಗ್ಗೆ ಕೃಷಿಕರಿಗೆ ಉಪಯುಕ್ತವಾದ ಮಾಹಿತಿ ಕಣಜದ ಕೃಷಿ ವಿಚಾರಸಂಕಿರಣ, ಕೃಷಿಯಲ್ಲಿ ಮಹಿಳೆಯರ ಪಾತ್ರ, ಸುಸ್ಥಿರ ಅಭಿವೃದ್ಧಿ ಮತ್ತು ಅಹಾರ ಭದ್ರತೆಯ ಕುರಿತಾದ ಅರಿವಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 4ಕ್ಕೆ ಕೃಷಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಲಿದೆ. ಜ.19ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಭಜನಾ ಮೆಳದ ಸಮಾರೋಪ ನಡೆದರೆ, ಅದೇ ದಿನ ಮಧ್ಯಾಹ್ನ 2 ಗಂಟೆಗೆ ರಾಜ್ಯ ಮಟ್ಟದ ಕುಸ್ತಿ ಮೇಳ ರಾರಾಜಿಸಲಿದ್ದು, ಸಂಜೆ 5ಕ್ಕೆ ಕೃಷಿ ಮೇಳ, ದನಗಳ ಜಾತ್ರೆ ಗಳ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ಬೊಕ್ಕಹಳ್ಳಿ ಸುಬ್ಬಪ್ಪ ಮಾತನಾಡಿ, ಈ ಸಾಲಿನ ಜಾತ್ರೆಗೆ 25 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಜಾತ್ರೋತ್ಸವದ ವಿವಿಧೆಡೆ ನಡೆಯುವ ದಾಸೋಹದ ಸಿದ್ಧತೆಗಾಗಿ 500ಕ್ಕೂ ಹೆಚ್ಚು ಬಾಣಸಿಗರು ಈಗಾಗಲೇ ಸುತ್ತೂರಿನಲ್ಲಿ ಬೀಡು ಬಿಟ್ಟಿದ್ದು, 50 ಗ್ರಾಮಗಳ 5000ಕ್ಕೂ ಹೆಚ್ಚು ಜನರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಅಸಂಖ್ಯಾತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದಾಸೋಹದ ಕೈಂಕರ‍್ಯ ನಡೆಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಶಿವಕುಮಾರ ಸ್ವಾಮಿಗಳು ಹಾಗೂ ಸುತ್ತೂರಿನ ಉಸ್ತುವಾರಿಗಳಾದ ಎಸ್.ಪಿ. ಉದಯಕುಮಾರ್ ಉಪಸ್ಥಿತರಿದ್ದರು.





