ದೂರ ನಂಜುಂಡಸ್ವಾಮಿ
ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ
ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ ಮಾವು ಬೆಳೆಯು ಪ್ರತಿ ವರ್ಷವೂ ರೈತರಿಗೆ ಉತ್ತಮವಾದ ಆದಾಯವನ್ನು ತಂದುಕೊಡುತ್ತದೆ. ಆದರೆ ಇತ್ತೀಚಿನ ಐದಾರು ವರ್ಷಗಳಲ್ಲಿ ಮಾವು ಬೆಳೆಗಾರರು ಒಂದಲ್ಲ ಒಂದು ರೀತಿಯಲ್ಲಿ ನಷ್ಟವನ್ನೇ ಅನುಭವಿಸುತ್ತಿದ್ದಾರೆ. ಈ ವರ್ಷ ಗುತ್ತಿಗೆದಾರರು ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆಯಲು ಮುಂದಾಗದೇ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು ೪,೨೭೦ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮೈಸೂರು ತಾಲ್ಲೂಕಿನಲ್ಲಿ ೧,೬೪೦ ಹೆಕ್ಟೇರ್, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ೬೨೭ ಹೆಕ್ಟೇರ್, ಹುಣಸೂರು ತಾಲ್ಲೂಕಿನಲ್ಲಿ ೧,೨೬೪ ಹೆಕ್ಟೇರ್, ಕೆ.ಆರ್.ನಗರ ತಾಲ್ಲೂಕಿನಲ್ಲಿ ೮೬ ಹೆಕ್ಟೇರ್, ನಂಜನಗೂಡು ತಾಲ್ಲೂಕಿನಲ್ಲಿ ೩೬೨ ಹೆಕ್ಟೇರ್, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ೫೩ ಹೆಕ್ಟೇರ್, ಸರಗೂರು ತಾಲ್ಲೂಕಿನಲ್ಲಿ ೨೧ ಹೆಕ್ಟೇರ್, ತಿ.ನರಸೀಪುರದಲ್ಲಿ ೨೧೭ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ.
ಮೈಸೂರು ತಾಲ್ಲೂಕಿನ ಜಯಪುರ ಹಾಗೂ ಇಲವಾಲ ಹೋಬಳಿಗಳಲ್ಲಿ ಅತಿ ಹೆಚ್ಚು ಹಾಗೂ ಕಸಬಾ ಮತ್ತು ವರುಣ ಹೋಬಳಿಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗಿದೆ.
ಕಳೆದ ವರ್ಷ ಗುತ್ತಿಗೆದಾರರು ರೈತರಿಂದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲೇ ಮರಗಳನ್ನು ಗುತ್ತಿಗೆ ಪಡೆದಿದ್ದರು. ಉತ್ತಮ ಇಳುವರಿ ಬಂದರೂ ಹೆಚ್ಚು ಮಳೆಯಾದ ಕಾರಣ ಮಾವು ಕಪ್ಪು ಬಣ್ಣಕ್ಕೆ ತಿರುಗಿ ಫ್ಯಾಕ್ಟರಿಗಳಿಂದ ಖರೀದಿಸದೆ, ದರ ಕುಸಿತಗೊಂಡು ಗುತ್ತಿಗೆದಾರರು ಹಾಗೂ ರೈತರು ತೀವ್ರ ನಷ್ಟ ಅನುಭವಿಸಿದ್ದರು.
ಪ್ರತಿ ವರ್ಷ ಹೂ ಬಿಡುವ ೩-೪ ತಿಂಗಳು ಮುಂಚಿತವಾಗಿಯೇ ಗುತ್ತಿಗೆದಾರರು ತೋಟ ಗಳನ್ನು ಹೆಚ್ಚು ಹಣ ನೀಡಿ ಗುತ್ತಿಗೆ ಪಡೆಯುತ್ತಿದ್ದರು. ಆದರೆ ಕಳೆದ ವರ್ಷ ಉಂಟಾದ ನಷ್ಟದಿಂದ ಗುತ್ತಿಗೆದಾರರು ಈ ವರ್ಷ ಗುತ್ತಿಗೆಗೆ ಪಡೆಯಲು ಮುಂದಾಗುತ್ತಿಲ್ಲ. ಅಲ್ಲದೇ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೂ ಬಿಡಬೇಕಾಗಿದ್ದ ಮಾವಿನ ಮರಗಳು ಹೊಸ ಚಿಗುರೊಡೆದು ಜನವರಿ ಮೊದಲನೇ ವಾರ ಕಳೆದರೂ ಶೇ.೩೦ರಷ್ಟು ಮಾತ್ರ ಅಲ್ಪಸ್ವಲ್ಪ ಹೂ ಬಿಟ್ಟಿವೆ. ಸಾಮಾನ್ಯವಾಗಿ ರೈತರಿಗೆ ಆದಾಯ ತಂದುಕೊಡುವ ಮಾವು ಬೆಳೆ ಕೂಡ ವರ್ಷದಿಂದ ವರ್ಷಕ್ಕೆ ಹಲವಾರು ಕಾರಣಗಳಿಂದ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ.
” ಕಳೆದ ವರ್ಷ ಉತ್ತಮವಾದ ಇಳುವರಿ ಬಂದಿತ್ತು. ಮೊದಲು ಬಂದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿತ್ತು. ನಂತರ ಜ್ಯೂಸ್ ಫ್ಯಾಕ್ಟರಿಯವರು ಖರೀದಿಸಲು ಮುಂದಾಗದ ಕಾರಣ ಹಾಗೂ ಹೊರ ರಾಜ್ಯಗಳಿಂದಲೂ ಬೇಡಿಕೆ ಕಡಿಮೆಯಾದ ಕಾರಣ ನಂತರ ಬಂದ ಬೆಳೆಗಳಿಗೆ ಬೆಲೆ ಕಡಿಮೆಯಾಗಿ ನಷ್ಟ ಅನುಭವಿಸುವಂತಾಯಿತು. ಆದ್ದರಿಂದ ಈ ಬಾರಿ ಗುತ್ತಿಗೆದಾರರು ಮಾವಿನ ಮರಗಳನ್ನು ಗುತ್ತಿಗೆ ಪಡೆಯಲು ಹಿಂದೇಟು ಹಾಕುತ್ತಿ ದ್ದಾರೆ. ಅಲ್ಲದೆ ಮಾವಿನ ಮರಗಳಲ್ಲಿ ಹೂವಿನ ಪ್ರಮಾಣವೂ ಕಡಿಮೆ ಇದೆ.”
-ಅಶ್ರಫ್, ಮಾವು ವ್ಯಾಪಾರಿ, ಪಿ.ಕೆ. ಮಂಡಿ ಕೃಷಿ ಮಾರುಕಟ್ಟೆ, ಬಂಡಿಪಾಳ್ಯ
” ಪ್ರತಿ ವರ್ಷ ಮಾವು ಬೆಳೆಯಲ್ಲಿ ಉತ್ತಮ ಆದಾಯ ಕಾಣುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಇಳುವರಿ ತೀವ್ರ ಕುಂಠಿತಗೊಳ್ಳುತ್ತಿದೆ. ಬೆಳೆಯ ಕುರಿತು ತೋಟಗಾರಿಕೆ ಇಲಾಖೆಗಳಿಂದಲೂ ರೈತರಿಗೆ ಸಮರ್ಪಕವಾದ ಮಾಹಿತಿ ದೊರಕುತ್ತಿಲ್ಲ. ಬೇರೆ ಬೆಳೆಗಳಿಗೆ ಪರಿಹಾರ ನೀಡುವಂತೆನಷ್ಟದಲ್ಲಿರುವ ಮಾವು ಬೆಳೆಯುವ ರೈತರಿಗೆ ಸಹಾಯಧನ ನೀಡಿದರೆ ರೈತರು ಸುಧಾರಿಸಬಹುದು.”
-ಎಸ್.ಎಂ.ಮಹದೇವಸ್ವಾಮಿ, ರೈತರು, ದೂರ ಗ್ರಾಮ




