Mysore
21
mist

Social Media

ಸೋಮವಾರ, 12 ಜನವರಿ 2026
Light
Dark

ಚಿಕ್ಕಣ್ಣ, ಜಯಪ್ರಕಾಶ್ ಬಿಜೆಪಿಗೆ?

ಮಂಜು ಕೋಟೆ

ಕೋಟೆ ರಾಜಕೀಯದಲ್ಲಿ ಹೊಸ ಬದಲಾವಣೆ; ಜಾ.ದಳಕ್ಕೆ ಶಾಕ್ ನೀಡಿದ ಮುಖಂಡರು

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಪ್ರಾರಂಭಗೊಂಡಿದ್ದು, ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣ ಮತ್ತು ಜಾ.ದಳದಿಂದ ಕಳೆದ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ಜಯ ಪ್ರಕಾಶ್, ಪುರಸಭಾ ಅಧ್ಯಕ್ಷರು ಸೇರಿದಂತೆ ಅನೇಕರು ಜಾ.ದಳ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೆ ಸಜ್ಜಾಗಿದ್ದಾರೆ.

ಕ್ಷೇತ್ರದ ರಾಜಕಾರಣದಲ್ಲಿ ಪ್ರತಿ ವಿಧಾನಸಭಾ ಚುನಾವಣೆ ಸಂದರ್ಭ ದಲ್ಲೂ ಕಾಂಗ್ರೆಸ್, ಬಿಜೆಪಿ ಮತ್ತುಜಾ.ದಳ ಪಕ್ಷಗಳಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಅದೇ ರೀತಿ ಈ ಬಾರಿ ಕ್ಷೇತ್ರದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಸೇರಿದಂತೆ ಜಾ.ದಳದ ಅನೇಕ ಮುಖಂಡರು ನಾನಾ ಕಾರಣಗಳಿಂದಾಗಿ ಪಕ್ಷ ಬಿಡಲು ಮುಂದಾಗಿ ಜಾ.ದಳಕ್ಕೆ ದೊಡ್ಡ ಶಾಕ್ ನೀಡಿದ್ದಾರೆ

ಬಿಜೆಪಿಯಿಂದ ಜಾ.ದಳಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡ ಕೆ.ಎಂ. ಕೃಷ್ಣನಾಯಕ ಮತ್ತು ತಾಲ್ಲೂಕು ಅಧ್ಯಕ್ಷರ ನೇತೃತ್ವದಲ್ಲಿ ನಡೆದ ನಾಯಕ ಸಮುದಾಯದ ಸಭೆಗೆ ಪಕ್ಷದ ನಾಯಕ ಸಮುದಾಯದ ಪ್ರಮುಖ ರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ, ನಾಯಕ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ಪುರಸಭೆ ಅಧ್ಯಕ್ಷರಾದ ಶಿವಮ್ಮ ಚಾಕಹಳ್ಳಿ ಕೃಷ್ಣ, ಸರೋಜಮ್ಮ ಸೂರಿ, ಅನಿತಾ ನಿಂಗ ನಾಯಕ ಮತ್ತಿತರರನ್ನು ನಿರ್ಲಕ್ಷಿಸಿದ್ದರಿಂದ ಇವರಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು.

ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಸೇರಿದಂತೆ ತಾಲ್ಲೂಕಿನ ಬಿಜೆಪಿ ಅಧ್ಯಕ್ಷರಾದ ಶಂಭೇಗೌಡ, ಗುರುಸ್ವಾಮಿ ಮತ್ತಿತರ ಮುಖಂಡರುಬೀಚನಹಳ್ಳಿ ಚಿಕ್ಕಣ್ಣ, ಜಯಪ್ರಕಾಶ್ ಮತ್ತಿತರರ ಜತೆ ನಾಲ್ಕೈದು ಬಾರಿ ಸಭೆ ನಡೆಸಿ ಅವರ ಮನವೊಲಿಸಿ ಬಿಜೆಪಿಗೆ ಬರಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿಚನಹಳ್ಳಿ ಚಿಕ್ಕಣ್ಣ ಮತ್ತು ಅವರ ಪುತ್ರ ಜಯಪ್ರಕಾಶ್ ಮತ್ತಿತರರು ಬಿಜೆಪಿ ಜೊತೆ ಮಾತುಕತೆ ನಡೆಸಿ ಕೆಲವೊಂದು ಷರತ್ತುಗಳೊಡನೆ ಬಿಜೆಪಿಗೆ ಸೇರ್ಪಡೆಗೊಳ್ಳಲು ಒಲವು ತೋರಿಸಿರುವುದು ತಾಲ್ಲೂಕಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ತಾಲ್ಲೂಕಿನ ರಾಜಕೀಯದಲ್ಲಿ ಹೊಸ ಬದಲಾವಣೆ ನಡೆಯುತ್ತಿರುವುದರಿಂದ ಮುಂಬರುವ ತಾಪಂ, ಜಿಪಂ, ವಿಧಾನಸಭಾ ಚುನಾವಣೆಗಳಲ್ಲಿ ಮತ್ತಷ್ಟು ಕಾರ್ಯತಂತ್ರಗಳು ನಡೆದು, ಯಾರ‍್ಯಾರ ರಾಜಕೀಯ ಭವಿಷ್ಯ ಏನಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ

” ನಾವು ಜಾ.ದಳ ತ್ಯಜಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾನು ಮತ್ತು ನನ್ನ ಮಗ, ಮತ್ತಿತರರು ಅಧಿಕೃತವಾಗಿ ತಾಲ್ಲೂಕಿನಲ್ಲಿ ಬೃಹತ್ ಕಾರ್ಯಕ್ರಮದಲ್ಲಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯಿಂದ ಜಯಪ್ರಕಾಶ್ ಚಿಕ್ಕಣ್ಣ ಸ್ಪರ್ಧಿಸಲಿದ್ದಾರೆ. ”

-ಬೀಚನಹಳ್ಳಿ ಚಿಕ್ಕಣ್ಣ, ಮಾಜಿ ಶಾಸಕ

Tags:
error: Content is protected !!