ರಾಜ್ಯದಲ್ಲಿ ಪರೀಕ್ಷೆಗಳೆಂದರೆ ಸೋರಿಕೆಗಳ ಸರಣಿ ಎಂಬಂತಾಗಿರುವುದು ದುರದೃಷ್ಟಕರ. ಈ ಬಾರಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ೮೦ ಅಂಕಗಳ ೪೭ ಪ್ರಶ್ನೆಗಳೂ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿಯೇ ವಾಟ್ಸಾಪ್‌ನಲ್ಲಿ ಲಭ್ಯವಿದ್ದವು ಎಂದರೆ, ಮಂಡಳಿಯ ಗೌಪ್ಯತೆಯ ಮಟ್ಟ ಎಷ್ಟು ನಗಣ್ಯವಾಗಿದೆ ಎಂಬುದು ತಿಳಿಯುತ್ತದೆ.
ಕಳೆದ ದಶಕದಲ್ಲಿ ಕೆಪಿಎಸ್‌ಸಿಯಿಂದ ಹಿಡಿದು ಪೊಲೀಸ್ ನೇಮಕಾತಿವರೆಗೆ ನಡೆದ ಹಗರಣಗಳ ಅಂಕಿ-ಅಂಶಗಳನ್ನು ನೋಡಿದರೆ, ಶೇ.೯೦ರಷ್ಟು ಪ್ರಕರಣಗಳಲ್ಲಿ ವ್ಯವಸ್ಥೆಯ ಒಳಗಿನವರೇ ಭಾಗಿಯಾಗಿರುವುದು ಸಾಬೀತಾಗುತ್ತದೆ.ಲಕ್ಷಾಂತರ ರೂ.ವೆಚ್ಚ ಮಾಡಿ ಏಕರೂಪದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸರ್ಕಾರ, ಅದನ್ನು ರಕ್ಷಿಸಲು ವಿಫಲವಾಗುತ್ತಿರುವುದು ಕೇವಲ ಆಡಳಿತಾತ್ಮಕ ಲೋಪವಲ್ಲ, ಇದು ವ್ಯವಸ್ಥಿತ ಭ್ರಷ್ಟಾಚಾರ. ಪ್ರತಿ ಬಾರಿ ಶೇ.೯೦ ಕ್ಕೂ ಹೆಚ್ಚು ಅಂಕ ಪಡೆಯಲು ಶ್ರಮಿಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಬೆನ್ನಿಗೆ ಸರ್ಕಾರ ಚೂರಿ ಹಾಕುತ್ತಿದೆ. ಕೇವಲ ತನಿಖೆಯ ನಾಟಕವಾಡುವ ಬದಲು, ಪರೀಕ್ಷಾ ಮಂಡಳಿಯನ್ನು ಸಂಪೂರ್ಣವಾಗಿ ನವೀಕರಿಸಿ, ತಪ್ಪಿತಸ್ಥರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸದಿದ್ದರೆ ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ.
-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು





